

ಬೆಳ್ತಂಗಡಿ: ಸಾಹಿತ್ಯಕ ಕುತೂಹಲ ಉತ್ತಮ ಮಾತುಗಾರಿಕೆಗೆ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಹೆಚ್ಚಿನ ಓದಿನ ಮೂಲಕ ತಮ್ಮ ಭಾಷಣ ಕಲೆಯನ್ನು ಮೊನಚುಗೊಳಿಸಿಕೊಳ್ಳಬೇಕು ಎಂದು ಎಸ್ಡಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ ಹೇಳಿದರು.
ಉಜಿರೆಯ ಎಸ್ಡಿಎಂ ಕಾಲೇಜಿನ ಸಮ್ಯಕ್ ದರ್ಶನ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ 40ನೇ ವರ್ಷದ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಡಿ.ರತ್ನವರ್ಮ ಹೆಗ್ಗಡೆ ಸ್ಮಾರಕ ’ಅಂತರ್ ಕಾಲೇಜು ಕನ್ನಡ ಚರ್ಚಾ ಸ್ಪರ್ಧೆ’ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ತೀರ್ಪುಗಾರ ಡಾ.ಡಿ.ಕೃಷ್ಣಮೂರ್ತಿ ಮಾತನಾಡಿ, ಆಲೋಚನಾ ಶಕ್ತಿ ಭಾಷಣ ಕಲೆಗಳಿಗೆ ಸಹಾಯಕವಾಗಿದೆ. ವಿಷಯಗಳ ಅವಲೋಕನ ವಿಸ್ತಾರ ಮಂಡನೆಗೆ ಉಪಯುಕ್ತವಾಗಿದೆ. ಭಾಷಣ ಕಲೆಯು ವಿಚಾರಧಾರೆಯ ಸಮರ, ಭಾಷಣಗಾರ ತನ್ನ ಜ್ಞಾನ ಹಾಗೂ ಹಾವಭಾವಗಳಿಂದ ಕೇಳುಗರನ್ನು ಆಕರ್ಷಿಸಬೇಕು ಎಂದರು.
ಉಡುಪಿಯ ಪೂರ್ಣಪ್ರಜ್ಞಾ ಕಾಲೇಜಿನ ಚೇತನಾ ಪೈ ಹಾಗೂ ಅನುಷಾ ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಿತರಾಗಿ ಹೊರಹೊಮ್ಮಿದರು. ದ್ವಿತೀಯ ಸ್ಥಾನವನ್ನು ಕಾರ್ಕಳದ ಭುವನೇಂದ್ರ ಕಾಲೇಜಿನ ವಿದ್ಯಾರ್ಥಿಗಳು ಪಡೆದುಕೊಂಡರು. ಸುರತ್ಕಲ್ನ ಗೋವಿಂದದಾಸ ಕಾಲೇಜಿನ ಹಿತ ಉಮೇಶ್ ಉತ್ತಮ ಚರ್ಚಾಪಟು ಪ್ರಶಸ್ತಿ ಗಳಿಸಿದರು. ಸ್ಪರ್ಧೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಕಾಲೇಜುಗಳ 20ಕ್ಕೂ ಅಧಿಕ ತಂಡಗಳು ಭಾಗವಹಿಸಿದ್ದವು.
ಸಂಯೋಜಕ ಡಾ.ಸುಧೀರ್ ಕೆ.ವಿ.ಉಪಸ್ಥಿತರಿದ್ದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ನಾಗಣ್ಣ ಡಿ.ಎ.ಸ್ವಾಗತಿಸಿ, ಪ್ರಾಧ್ಯಾಪಕ ಮಹೇಶ್ ಆರ್.ವಂದಿಸಿದರು.
ಆಧುನಿಕ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ದೊರಕುವ ಓದಿನ ಮೂಲಗಳಿಗೆ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದಾರೆ. ಬದಲಾಗಿ ಪುಸ್ತಕಗಳನ್ನು ಓದಬೇಕು. ಓದಿನ ತುಡಿತ ಮನುಷ್ಯನನ್ನು ಮಹತ್ತರ ಸ್ಥಾನಕ್ಕೆ ಕೊಂಡೊಯ್ಯುತ್ತದೆ. ಶ್ರೇಷ್ಠ ವಾಗ್ಮಿಗಳ ಕೃತಿಗಳು ವಿದ್ಯಾರ್ಥಿಗಳ ಭಾಷಣ ಕಲೆಯಲ್ಲಿ ಸಹಕಾರಿಯಾಗುತ್ತವೆ.- ಡಾ.ಬಿ.ಎ.ಕುಮಾರ ಹೆಗ್ಡೆ,ಎಸ್ಡಿಎಂ ಕಾಲೇಜಿನ ಪ್ರಾಂಶುಪಾಲ ವ್ಯಕ್ತಿಗತ ದೂರದರ್ಶಿತ್ವವು ಸುಧಾರಣಾವಾದಿ ನಿಲುವುಗಳೊಂದಿಗಿನ ಬೃಹತ್ ಸಂಸ್ಥೆಗಳ ಸ್ಥಾಪನೆಯೊಂದಿಗೆ ಸಾಮಾಜಿಕ ಬದಲಾವಣೆಯನ್ನೂ ನೆಲೆಗೊಳಿಸುತ್ತದೆ. ಶೈಕ್ಷಣಿಕ ವಲಯವು ಸುಧಾರಣಾವಾದಿ ದೃಷ್ಟಿಕೋನದೊಂದಿಗೆ ಗುರುತಿಸಿಕೊಳ್ಳುತ್ತದೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಒದಗಿಸಿಕೊಟ್ಟು ಅವರ ಬೆಳವಣಿಗೆಗೆ ಪೂರಕ ವಾತಾವರಣ ಒದಗಿಸಿಕೊಡುವ ದೂರದರ್ಶಿತ್ವದೊಂದಿಗೆ ಡಿ.ರತ್ನವರ್ಮ ಹೆಗ್ಗಡೆ ಅವರು ಉಜಿರೆಯಲ್ಲಿ ಎಸ್ಡಿಎಂ ಕಾಲೇಜನ್ನು ಆರಂಭಿಸಿದ್ದರು. ಅವರ ಕಾಳಜಿಯುತ ದೂರದಷ್ಟಿಯ ಫಲವಾಗಿ ಇಂದು ಎಸ್ಡಿಎಂ ವಿಶೇಷ ಮನ್ನಣೆ ಪಡೆದ ಸಂಸ್ಥೆಯಾಗಿ ಹೆಗ್ಗುರುತು ಮೂಡಿಸಿದೆ. ಇದು ದೂರದರ್ಶಿತ್ವದ ಸುಧಾರಣಾವಾದಿ ಆಶಯದ ಪ್ರಭಾವಕ್ಕೆ ನಿದರ್ಶನ.- ಡಿ. ಹರ್ಷೇಂದ್ರ ಕುಮಾರ್, ಕಾರ್ಯದರ್ಶಿಎಸ್ಡಿಎಂ ಶಿಕ್ಷಣ ಸಂಸ್ಥೆಗಳ