

ಬೆಂಗಳೂರು: ಕಳೆದ ಎರಡು ದಿನಗಳಿಂದ ಬಿಗ್ಬಾಸ್ ಮನೆಯ ಬಗ್ಗೆ ಒಂದು ವಿಚಾರ ಬಹಳ ಸದ್ದು ಮಾಡಿತು. ಅದೇನೆಂದರೆ, ಬಿಗ್ಬಾಸ್ ಮನೆಯ ಒಳಗೆ ಮೊಬೈಲ್ ಬಳಸುತ್ತಾರೆ ಎಂದು ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದರು. ಅದಕ್ಕೆ ಕಾರಣವೂ ಇದೆ. ಮನೆಯ ಪ್ಲಗ್ ಒಂದರಲ್ಲಿ ಮೊಬೈಲ್ ಚಾರ್ಜರ್ ಅಳವಡಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸಂಗೀತಾ ಶೃಂಗೇರಿ ಮರೆಯಾಗಿದ್ದರಿಂದ ಚಾರ್ಜರ್ ಮಾತ್ರ ಗೋಚರವಾಗಿ ನಾನಾ ಪ್ರಶ್ನೆಗಳನ್ನು ಹುಟ್ಟು ಹಾಕಿತು. ಇದೀಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ನಟ ಕಿಚ್ಚ ಸುದೀಪ್ ಕೆಸಿಸಿಯಲ್ಲಿ ಬಿಜಿಯಾಗಿರುವುದರಿಂದ ಇಂದಿನ ವಾರದ ಪಂಚಾಯಿತಿಗಾಗಿ ನಟಿ ಶ್ರುತಿ ದೊಡ್ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ಮನೆಯಿಂದ ಹೊರಗಡೆ ನಡೆಯುತ್ತಿರುವ ಚರ್ಚೆಯನ್ನು ಬಿಗ್ಬಾಸ್ ಸ್ಪರ್ಧಿಗಳ ಗಮನಕ್ಕೆ ತಂದರು. ಮನೆಯಲ್ಲಿ ಮೊಬೈಲ್ ಬಳಕೆ ಮಾಡುತ್ತಿದ್ದೀರಿ ಎಂದು ಹೊರಗಡೆ ಮಾತನಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಕಾರಣ ಈ ಒಂದು ಫೋಟೋ ಎಂದು ಹೇಳುವ ಮೂಲಕ ವೈರಲ್ ಫೋಟೋವನ್ನು ಬಿಗ್ಬಾಸ್ ಮನೆಯ ಟಿವಿ ಪರದೆಯ ಮೇಲೆ ಪ್ರದರ್ಶಿಸಲಾಯಿತು.
ಇದಾದ ಬಳಿಕ ಬಿಗ್ಬಾಸ್ ಮಂದಿ ವೈರಲ್ ಫೋಟೋ ಬಗ್ಗೆ ಸ್ಪಷ್ಟನೆ ನೀಡಿದರು. ಮೊದಲಿಗೆ ವಿನಯ್ ಗೌಡ ಮಾತನಾಡಿ ಮೊಬೈಲ್ ಚಾರ್ಜರ್ ಅಲ್ಲ ಟ್ರಿಮ್ಮರ್ ಚಾರ್ಜರ್, ನಾನು ಗಡ್ಡ ಶೇವ್ ಮಾಡಲು ಬಳಸುತ್ತೇನೆ. ಯಾರು ಭಗವಂತ ಈ ರೀತಿ ಮಾಡಿದ್ದು ಎನ್ನುತ್ತಾರೆ. ಬಳಿಕ ಮೈಕಲ್ ಮಾತನಾಡಿ, ಇದು ನನ್ನ ಮೊಬೈಲ್ ಚಾರ್ಜರ್ ಹೌದು. ಆದರೆ, ಬ್ರಿಕ್ ಮಾತ್ರ ಮೊಬೈಲ್ನದ್ದೂ ಯುಎಸ್ಬಿ ಮಾತ್ರ ಟ್ರಿಮ್ಮರ್ನದ್ದು. ನಾವಿಲ್ಲಿ ಮೊಬೈಲ್ ಬಳಕೆ ಮಾಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಅಲ್ಲಿಗೆ ಜನರಲ್ಲಿದ್ದ ಒಂದು ದೊಡ್ಡ ಪ್ರಶ್ನೆಗೆ ಉತ್ತರ ಸಿಕ್ಕಂತಾಗಿದೆ.
ವೈರಲ್ ಆಗಿತ್ತು ಫೋಟೋ ಬಿಗ್ಬಾಸ್ ರಿಯಾಟಿಲಿ ಶೋನಲ್ಲಿ ಭಾಗವಹಿಸಬೇಕಾದರೆ ಕೆಲವೊಂದಿಷ್ಟು ನಿಯಮಗಳನ್ನು ಪಾಲಿಸಬೇಕು. ಒಮ್ಮೆ ದೊಡ್ಮನೆಯೊಳಗೆ ಸೇರಿಕೊಂಡರೆ ಹೊರ ಜಗತ್ತಿಗೂ ಅವರಿಗೂ ಯಾವುದೇ ಕನೆಕ್ಷನ್ ಇರುವುದಿಲ್ಲ. ಹೊರಗಡೆ ಏನು ನಡೆಯುತ್ತಿರುತ್ತದೆ ಎಂಬುದರ ಅರಿವು ಇರುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ, ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಫೋಟೋ ಭಾರಿ ಚರ್ಚೆಯನ್ನು ಹುಟ್ಟು ಹಾಕಿತ್ತು. ಫೋಟೋದಲ್ಲಿ ಕನ್ನಡಿಯ ಪಕ್ಕದ ಪ್ಲಗ್ನಲ್ಲಿ ಎರಡು ಮೊಬೈಲ್ ಚಾರ್ಜರ್ಗಳನ್ನು ಅಳವಡಿಸಲಾಗಿದೆ. ಆದರೆ, ಸಂಗೀತಾ ಮರೆಯಾಗಿರುವುದರಿಂದ ಯಾವುದನ್ನು ಚಾರ್ಜ್ ಮಾಡಲಾಗುತ್ತಿದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ, ಮೊಬೈಲ್ ಚಾರ್ಜರ್ ಇರುವುದನ್ನು ವೀಕ್ಷಕರು ಕಂಡುಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿದ ಸ್ಕ್ರೀನ್ಶಾಟ್ ತೆಗೆದು ಹಳದಿ ಬಣ್ಣದಲ್ಲಿ ಚಾರ್ಜರ್ ಇರುವ ಕಡೆ ರೌಂಡ್ ಮಾರ್ಕ್ ಮಾಡಿ, ಜಾಲತಾಣದಲ್ಲಿ ಹರಿಬಿಟ್ಟು, ಬಿಗ್ಬಾಸ್ನಲ್ಲಿ ಮೊಬೈಲ್ ಬಳಕೆಗೂ ಅವಕಾಶವಿದೆ ಎಂದು ಚರ್ಚಿಸುತ್ತಿದ್ದರು.
ಈ ಹಿಂದೆ ಬಿಗ್ಬಾಸ್ ಮನೆಯೊಳಗೆ ಸ್ಮೋಕಿಂಗ್ಗೆ ಅವಕಾಶ ಇಲ್ಲ ಎಂದು ಹೇಳಲಾಗಿತ್ತು. ಆದರೆ, ಸ್ಪರ್ಧಿಗಳು ಸ್ಮೋಕಿಂಗ್ ಮಾಡುವ ವಿಡಿಯೋ ವೈರಲ್ ಆದ ಬಳಿ, ದೊಡ್ಮನೆಯೊಳಗೆ ಪ್ರತ್ಯೇಕವಾಗಿ ಸ್ಮೋಕಿಂಗ್ ಜೋನ್ ಕೂಡ ಇದೆ ಎಂಬುದು ಬಯಲಾಗಿತ್ತು. ಬಳಿಕ ಮೊಬೈಲ್ ಚಾರ್ಜರ್ ಇರುವುದು ನಾನಾ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ಆದರೆ, ಇದಕ್ಕೆಲ್ಲ ಇದೀಗ ಉತ್ತರ ಸಿಕ್ಕಿದೆ.