More

    ನಿಫ್ಟಿಯಲ್ಲಿ ಈ ವರ್ಷ 2 ಷೇರುಗಳಿಗೆ ಮಾತ್ರ ನಷ್ಟ; ಕೆಲವು ಶೇ. 80ಕ್ಕೂ ಅಧಿಕ ಲಾಭ; 2024ರಲ್ಲಿ ಏನಾಗಲಿದೆ?

    ಮುಂಬೈ: ಹೆಚ್ಚಿನ ಬಡ್ಡಿದರಗಳು, ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮತ್ತು ನಿರಂತರ ಹಣದುಬ್ಬರದಂತಹ ಸವಾಲುಗಳನ್ನು ಎದುರಿಸಿದ ಹೊರತಾಗಿಯೂ ದೇಶೀಯ ಷೇರು ಮಾರುಕಟ್ಟೆಯ ಮಾನದಂಡವಾದ ನಿಫ್ಟಿ 50 ಆರೋಗ್ಯಕರ ಲಾಭಗಳೊಂದಿಗೆ ಈ ವರ್ಷವನ್ನು ಮುಕ್ತಾಯಗೊಳಿಸಲು ಸಿದ್ಧವಾಗಿದೆ.

    2023ರ ಆರಂಭದಿಂದ ಇಲ್ಲಿಯವರೆಗೆ (ಡಿಸೆಂಬರ್ 22ರ ಹೊತ್ತಿಗೆ) ನಿಫ್ಟಿ 50 ಸೂಚ್ಯಂಕವು ಶೇಕಡಾ 18ರಷ್ಟು ಏರಿಕೆಯಾಗಿದೆ. ನಿಫ್ಟಿ 50 ಸೂಚ್ಯಂಕದಲ್ಲಿ ಬೃಹತ್ ಕಂಪನಿಗಳ 50 ಷೇರುಗಳನ್ನು ಪಟ್ಟಿ ಮಾಡಲಾಗಿದೆ. ಈ ಪೈಕಿ 48 ಷೇರುಗಳು ಹಸಿರು ಬಣ್ಣದಲ್ಲಿ (ಲಾಭದಲ್ಲಿ) ಕಂಗೊಳಿಸಿದರೆ, ಕೇವಲ ಎರಡು ಷೇರುಗಳು ಮಾತ್ರ ಕೆಂಪು ಬಣ್ಣದಲ್ಲಿ (ನಷ್ಟದಲ್ಲಿ) ಇವೆ. ಈ ವರ್ಷದಲ್ಲಿ ಅದಾನಿ ಎಂಟರ್‌ಪ್ರೈಸಸ್ ಷೇರು ಶೇ 27 ರಷ್ಟು ಹಾಗೂ ಯುಪಿಎಲ್ ಷೇರು ಶೇ 19 ರಷ್ಟು ಇಳಿಕೆ ಕಂಡಿವೆ.

    ಇನ್ನು ಕೆಲವು ಷೇರುಗಳ ಬೆಲೆ ಈ ವರ್ಷದಲ್ಲಿ ಬಹುತೇಕ ದುಪ್ಪಟ್ಟು ಆಗಿದೆ. ಟಾಟಾ ಮೋಟಾರ್ಸ್ ಮತ್ತು ಎನ್‌ಟಿಪಿಸಿಯಂತಹ ಷೇರುಗಳು ಕ್ರಮವಾಗಿ ಶೇ. 87 ಮತ್ತು ಶೇ. 82ರಷ್ಟು ಏರಿಕೆ ಕಂಡಿವೆ. ನಿಫ್ಟಿ 50 ಸ್ಟಾಕ್‌ಗಳ ಪೈಕಿ 27 ಷೇರುಗಳು ಶೇಕಡಾ 20ಕ್ಕಿಂತ ಹೆಚ್ಚು ಲಾಭ ಗಳಿಸಿವೆ.

    ಹೆಚ್ಚಿನ ಲಾಭಗಳು ನವೆಂಬರ್​ ತಿಂಗಳಿಂದ ಬಂದಿವೆ. ಈ ವರ್ಷದ ಅಕ್ಟೋಬರ್ 31 ರವರೆಗೆ ನಿಫ್ಟಿ ಸೂಚ್ಯಂಕವು ಶೇಕಡಾ 5ಕ್ಕಿಂತ ಸ್ವಲ್ಪ ಹೆಚ್ಚು ಇತ್ತು ಎಂದು ದಾಖಲೆಗಳು ತೋರಿಸುತ್ತದೆ. ಅಕ್ಟೋಬರ್‌ನಲ್ಲಿ ಅಂದಾಜು 3 ಪ್ರತಿಶತದಷ್ಟು ಕುಸಿದ ನಂತರ, ನಿಫ್ಟಿ 50 ಸೂಚ್ಯಂಕವು ನವೆಂಬರ್‌ನಲ್ಲಿ 5.5 ಪ್ರತಿಶತದಷ್ಟು ಲಾಭವನ್ನು ಗಳಿಸಿತು. ಡಿಸೆಂಬರ್‌ನಲ್ಲಿ ಇದುವರೆಗೆ 6 ಪ್ರತಿಶತದಷ್ಟು ಹೆಚ್ಚಾಗಿದೆ.

    ಅಮೆರಿಕದ ಕೇಂದ್ರೀಯ ಬ್ಯಾಂಕ್​ ಆದ ಫೆಡರಲ್​ ಬ್ಯಾಂಕ್​ ಬಡ್ಡಿ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿದ್ದು ಹಾಗೂ ಮುಂದಿನ ದಿನಗಳಲ್ಲಿ ಬಡ್ಡಿ ದರ ಕಡಿತದ ಸೂಚನೆ ನೀಡಿರುವುದರಿಂದ ವಿದೇಶಿ ಬಂಡವಾಳ ಹೂಡಿಕೆದಾರರು ಹೆಚ್ಚಿನ ಖರೀದಿ ಮಾಡಿದ ಕಾರಣ ಸೂಚ್ಯಂಕವು ಉತ್ತುಂಗ ತಲುಪಲು ಕಾರಣವಾಗಿದೆ ಎಂಬುದು ತಜ್ಱರ ಅಭಿಮತವಾಗಿದೆ.

    ನ್ಯಾಷನಲ್​ ಸೆಕ್ಯೂರಿಟಿ ಡೆಪಾಸಿಟರಿ ಲಿಮಿಟೆಡ್​ (ಎನ್‌ಎಸ್‌ಡಿಎಲ್‌) ಅಂಕಿಅಂಶಗಳ ಪ್ರಕಾರ, ಎರಡು ತಿಂಗಳ ಮಾರಾಟದ ನಂತರ ವಿದೇಶಿ ಹೂಡಿಕೆದಾರರು ನವೆಂಬರ್‌ನಲ್ಲಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಅಂದಾಜು 24,546 ಕೋಟಿ ರೂ.ಗಳನ್ನು ಹೂಡಿಕೆ ಮಾಡಿದ್ದಾರೆ. ಡಿಸೆಂಬರ್‌ನಲ್ಲಿ ಇದುವರೆಗೆ ಈ ಮೊತ್ತವು 77,388 ಕೋಟಿ ರೂ. ಆಗಿದೆ.

    2024ರಲ್ಲಿ ನಾಗಲೋಟ ಮುಂದುವರಿಕೆ?:

    ಭಾರತದ ದೃಢವಾದ ಸ್ಥೂಲ ಆರ್ಥಿಕ ಪರಿಸ್ಥಿತಿಗಳು, ನಿರೀಕ್ಷಿತ ದರ ಕಡಿತ ಮತ್ತು ಸಾರ್ವತ್ರಿಕ ಚುನಾವಣೆಯ ನಂತರ ಸ್ಥಿರ ಸರ್ಕಾರದ ನಿರೀಕ್ಷೆಯಿಂದಾಗಿ 2024ರ ದೇಶೀಯ ಮಾರುಕಟ್ಟೆಯ ದೃಷ್ಟಿಕೋನವು ಸಕಾರಾತ್ಮಕವಾಗಿದೆ.

    “2024-25ನೇ ಸಾಲಿನಲ್ಲಿ ದೃಢವಾದ ಆರ್ಥಿಕ ಬೆಳವಣಿಗೆಯ ಸಾಧ್ಯತೆಗಳಿವೆ ಎಂದು ಆರ್​ಬಿಐ ಹೇಳಿದೆ. ಈ ಹಣಕಾಸು ಸಾಲಿನ ಮೊದಲ ಮೂರು ತ್ರೈಮಾಸಿಕಗಳಲ್ಲಿ ಸರಾಸರಿ 6.5% ಆರ್ಥಿ ಬೆಳವಣಿಗೆಯನ್ನು ಅದು ನಿರೀಕ್ಷಿಸಿದೆ. ನೈಜ ಜಿಡಿಪಿ ಬೆಳವಣಿಗೆಯ ಇಂತಹ ಆಶಾವಾದಿ ನಿರೀಕ್ಷೆಗಳು ಷೇರು ಮಾರುಕಟ್ಟೆಯಲ್ಲಿ ಏರುಗತಿಯಲ್ಲಿ ಮುಂದುವರಿಯಲು ಅವಕಾಶ ನೀಡುತ್ತವೆ” ಎಂದು ಬ್ರೋಕರೇಜ್ ಸಂಸ್ಥೆ ಮೋತಿಲಾಲ್ ಓಸ್ವಾಲ್ ಹೇಳಿದೆ. ನಿಫ್ಟಿಯಲ್ಲಿ ಪ್ರತಿ ಷೇರಿನ ಗಳಿಕೆಯು ಮುಂದಿನ ವರ್ಷ ಅಂದಾಜು 20 ಪ್ರತಿಶತದಷ್ಟು ಇರುತ್ತದೆ ಎಂದು ಅದು ನಿರೀಕ್ಷಿಸಿದೆ.

    ಇದಲ್ಲದೆ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ರಾಜ್ಯಗಳ ಚುನಾವಣೆಗಳಲ್ಲಿ ಬಿಜೆಪಿಯ ಭರ್ಜರಿ ಜಯದೊಂದಿಗೆ, 2024 ರ ಲೋಕಸಭಾ ಚುನಾವಣೆಯ ನಂತರದ ರಾಜಕೀಯ ನಿರಂತರತೆಯ ಬಗ್ಗೆ ಹೂಡಿಕೆದಾರರ ವಿಶ್ವಾಸವು ದೊಡ್ಡ ಉತ್ತೇಜನವನ್ನು ಪಡೆದುಕೊಂಡಿದೆ ಎಂಬುದರತ್ತ ಬ್ರೋಕರೇಜ್ ಸಂಸ್ಥೆಯು ಗಮನಸೆಳೆದಿದೆ.

    ಕಾರ್ಪೊರೇಟ್ ಗಳಿಕೆಯ ಬೆಳವಣಿಗೆ ಮತ್ತು ಚೇತರಿಸಿಕೊಳ್ಳುವ ದೇಶೀಯ ಸ್ಥೂಲ ಆರ್ಥಿಕತೆಯಲ್ಲಿನ ಆರೋಗ್ಯಕರ ಪ್ರವೃತ್ತಿಯಿಂದ ಈಗಾಗಲೇ ಉತ್ತೇಜಿತವಾಗಿರುವ ಮಾರುಕಟ್ಟೆಯ ಭಾವನೆಯು ಈಗ ಮತ್ತಷ್ಟು ಬಲಗೊಳ್ಳುವ ಸಾಧ್ಯತೆಯಿದೆ ಎಂದು ಮೋತಿಲಾಲ್ ಓಸ್ವಾಲ್​ ಹೇಳಿದೆ.

    ಲೋಕಸಭೆ ಚುನಾವಣೆ ತಯಾರಿಗಾಗಿ ರಾಷ್ಟ್ರೀಯ ಪದಾಧಿಕಾರಿಗಳ ಸಭೆ: ಬಿಜೆಪಿ ನಾಯಕರಿಗೆ ಪ್ರಧಾನಿ ಮೋದಿ ನೀಡಿದ ಗುರಿ ಏನು?

    300ಕ್ಕೂ ಅಧಿಕ ಪ್ರಯಾಣಿಕರಲ್ಲಿ 13 ಅಪ್ರಾಪ್ತರು: ಭಾರತೀಯರು ಪ್ರಯಾಣಿಸುತ್ತಿದ್ದ ವಿಮಾನವನ್ನು ಫ್ರಾನ್ಸ್​ನಲ್ಲಿ ತಡೆಹಿಡಿದಿದ್ದೇಕೆ?:

    ಲಾರ್ಜ್​, ಮಿಡ್​, ಸ್ಮಾಲ್​ ಕ್ಯಾಪ್​ ಮ್ಯೂಚುವಲ್​ ಫಂಡ್​ಗಳು: ಹೊಸ ವರ್ಷದಲ್ಲಿ ಹೂಡಿಕೆಗೆ ಯಾವುದು ಉತ್ತಮ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts