ಜನಪ್ರಿಯಳಾಗೋದಕ್ಕೆ ಏನೆಲ್ಲಾ ಮಾಡಿದರು ಕಂಗನಾ?

Kangana Ranaut - Final
Published on

ಕಂಗನಾ ರಣಾವತ್​ ಚಿತ್ರರಂಗಕ್ಕೆ ಬಂದ ಸಂದರ್ಭದಲ್ಲಿ, ಜನಪ್ರಿಯರಾಗುವುದಕ್ಕೆ ಏನೇನೋ ಮಾಡಿದ್ದರಂತೆ. ಆದರೆ, ಜನ ಮಾತ್ರ ತನ್ನನ್ನು ಏನು ಮಾಡಿದರೂ ಒಪ್ಪಿಕೊಳ್ಳಲಿಲ್ಲ ಎಂಬ ವಿಷಯವನ್ನು ಅವರು ಒಪ್ಪಿಕೊಂಡಿದ್ದಾರೆ.

ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, 'ನಾನು ಚಿತ್ರರಂಗಕ್ಕೆ ಬಂದ ಹೊಸದರಲ್ಲಿ ಎಲ್ಲರೂ ನನ್ನನ್ನು ಗುರುತಿಸಬೇಕು, ನಾನು ಜನಪ್ರಿಯಳಾಗಬೇಕು ಎಂದು ಏನೇನೋ ಮಾಡಿದೆ. ನನ್ನ ಕೂದಲನ್ನು ಸ್ಟ್ರೇಟನ್​ ಮಾಡಿಸಿಕೊಂಡೆ. 'ರಾಸ್ಕಲ್ಸ್​' ಎಂಬ ಚಿತ್ರ ಮಾಡಿದೆ. ಬಿಕಿನಿಯಲ್ಲಿ ಕಾಣಿಸಿಕೊಂಡೆ. ಒಟ್ಟಾರೆ ಜನ ನನ್ನ ಗುರುತಿಸಿಬೇಕು ಎಂದು ಅದೆಷ್ಟೋ ಒದ್ದಾಡಿದೆ' ಎಂದು ಹೇಳಿಕೊಂಡಿದ್ದಾರೆ ಕಂಗನಾ.

ಕಂಗನಾಗೆ ಮ್ಯಾಗಜೀನ್​ನ ಕವರ್​ಪೇಜ್​ ಮೇಲೆ ಕಾಣಿಸಿಕೊಳ್ಳುವ ಆಸೆ ಇತ್ತಂತೆ. ಪ್ರಶಸ್ತಿ ಪಡೆಯಬೇಕೆಂಬ ಹಪಾಹಪಿ ಇತ್ತಂತೆ. ಆದರೆ, ಏನೂ ವರ್ಕೌಟ್​ ಆಗಲಿಲ್ಲ ಎಂದು ಅವರೇ ಹೇಳಿದ್ದಾರೆ. 'ನಾನು ಬಿ-ಗ್ರೇಡ್​ ನಟಿಯಾಗಿ ಉಳಿದೆ ಮತ್ತು ಜನ ನನ್ನನ್ನು ಒಪ್ಪಿಕೊಳ್ಳಲಿಲ್ಲ. ಆ ನಂತರ ಒಂದಿಷ್ಟು ಒಳ್ಳೆಯ ಕಥೆಗಳನ್ನು ಆಯ್ಕೆ ಮಾಡಿಕೊಂಡಿದ್ದು, ಎಲ್ಲವನ್ನೂ ಬದಲಿಸಿತು. ಯಾವುದಕ್ಕಾಗಿ ನಾನು ಹುಡುಕಾಡುತ್ತಿದ್ದೆನೋ, ಅವೆಲ್ಲ ಕ್ರಮೇಣ ಸಿಗುತ್ತಾ ಹೋಯಿತು' ಎಂದು ಹೇಳಿಕೊಂಡಿದ್ದಾರೆ ಕಂಗನಾ.

ಕಂಗನಾ ಇಷ್ಟಕ್ಕೂ ಯಾಕೆ ಇವೆಲ್ಲಾ ಮಾತಾಡಿದ್ದಾರೆ ಎಂದರೆ ಅದಕ್ಕೂ ಕಾರಣವಿದೆ. ಸುಶಾಂತ್ ಸಿಂಗ್​ ರಜಪೂತ್​ ಆತ್ಯಹತ್ಯೆಯ ನಂತರ, ಅವರ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ ಜತೆಗೆ ಕಂಗನಾ ಒಮ್ಮೆ ಮಾತನಾಡಿದರಂತೆ. ಅಂಕಿತಾ ಮತ್ತು ಕಂಗನಾ ಹಳೆಯ ಗೆಳತಿಯರಾಗಿದ್ದು, ಬಹಳ ದಿನಗಳ ನಂತರ ಮನಬಿಚ್ಚಿ ಮಾತಾಡಿಕೊಂಡರಂತೆ.

ಆ ಸಂದರ್ಭದಲ್ಲಿ, ಸುಶಾಂತ್​ಗೆ ದಿಢೀರ್​ ಜನಪ್ರಿಯನಾಗಬೇಕು, ಎಲ್ಲರೂ ತಮ್ಮನ್ನು ಗುರುತಿಸಬೇಕು ಎಂಬ ಆಸೆ ಬಹಳವಾಗಿತ್ತು ಎಂದು ಅಂಕಿತಾ, ಕಂಗನಾ ಎದುರು ಹೇಳಿಕೊಂಡಿದ್ದಾರೆ. 'ಅಂಕಿತಾ, ಸುಶಾಂತ್​ರನ್ನು ನನ್ನ ಜತೆಗೆ ಹೋಲಿಸಿದಳು. ನಾನು ಹಿಂದೊಮ್ಮೆ ಇದೇ ತರಹ ಇದ್ದೆ ನೆನಪಿಸಿದಳು. ನೀನೇನೋ ಅದರಿಂದ ಆಚೆ ಬಂದೆ, ಸುಶಾಂತ್​ಗೆ ಅದರಿಂದ ಆಚೆ ಬರಲಿಕ್ಕಾಗಲಿಲ್ಲ ಎಂದು ಹೇಳಿಕೊಂಡಳು' ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ಕಂಗನಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net