

ಕೆಲ ದಿನಗಳ ಹಿಂದಷ್ಟೇ ಫ್ಯಾಂಟಮ್ ಸಿನಿಮಾ ಚಿತ್ರೀಕರಣದಲ್ಲಿ ಭಾಗವಹಿಸುವ ಬಗ್ಗೆ ಸುದೀಪ್ ಹೇಳಿಕೊಂಡಿದ್ದರು. ಅದರಂತೆ ಹೈದರಾಬಾದ್ನತ್ತ ಪ್ರಯಾಣ ಬೆಳೆಸಿದ್ದ ಸುದೀಪ್, ಮೊದಲ ದಿನದ ಶೂಟಿಂಗ್ ವಿಡಿಯೋ ತುಣುಕನ್ನು ಶೇರ್ ಮಾಡಿಕೊಂಡು, ಅಭಿಮಾನಿಗಳಿಗೆ ಸರ್ಪೈಸ್ ಉಡುಗೊರೆ ನೀಡಿದ್ದರು. ಇನ್ನೊಂದು ಉಡುಗೊರೆ ನೀಡುವ ಬಗ್ಗೆಯೂ ಕಿಚ್ಚ ಹೇಳಿಕೊಂಡಿದ್ದರು. ಅದರಂತೆ ವಿಡಿಯೋ ಬಿಡುಗಡೆ ಆಗಿದೆ.
ಬೃಹತ್ ಕಾಡಿನ ಹಿನ್ನೆಲೆಯಲ್ಲಿ ಸುದೀಪ್ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಗುಮ್ಮ ಬಂದ ಗುಮ್ಮ ವಿಡಿಯೋದಲ್ಲಿ ಪುಟ್ಟ ಮಗುವೊಂದಿಗೆ ಕಾಣಿಸಿಕೊಂಡಿದ್ದ ಸುದೀಪ್, ಇದೀಗ ‘ರಾತ್ರಿ ಕುದುರೆ ಬೆನ್ನಾ ಏರಿ, ಬೀಸೋ ಗಾಳಿ ಜತೆಗೆ ಸೇರಿ, ಕತ್ತಲಲ್ಲಿ ಕಳ್ಳನಂತೆ ಬೇಟೆಯಾಡುವ ಬಿಲ್ಲನಂತೆ' ಎಂಬ ಹಿನ್ನೆಲೆ ಸಾಲುಗಳೊಂದಿಗೆ ಯಾರನ್ನೋ ಹುಡುಕುತ್ತಿದ್ದಾರೆ. ಸದ್ಯ ಹೊಸ ವಿಡಿಯೋ ಕುತೂಹಲಕ್ಕೆ ಕಾರಣವಾಗಿದೆ. ಗುರುವಾರದ ಶೂಟಿಂಗ್ ದೃಶ್ಯವೊಂದನ್ನು ಮಧ್ಯಾಹ್ನ 3.30ಕ್ಕೆ ಶೇರ್ ಮಾಡುವುದಾಗಿ ಸುದೀಪ್ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದರು. ಅದರಂತೆ ರಿಲೀಸ್ ಆದ ವಿಡಿಯೋ ಸದ್ಯ ವೈರಲ್ ಆಗುತ್ತಿದ್ದು, ಚಿತ್ರದ ಬಗೆಗೆಇನ ಕುತೂಹಲ ಹೆಚ್ಚಿಸುತ್ತಿದೆ.
ಇನ್ನು ಕರೊನಾ ಹಿನ್ನೆಲೆಯಲ್ಲಿ ಶೂಟಿಂಗ್ ಆರಂಭಿಸಿದ ಮೊದಲ ನಟ ಎಂಬ ಪಟ್ಟವನ್ನೂ ಕಿಚ್ಚ ಸುದೀಪ್ ಪಡೆದುಕೊಂಡಿದ್ದಾರೆ. ತಮ್ಮ ಶೂಟಿಂಗ್ ಅನುಭವವನ್ನೂ ಅವರು ಹೇಳಿಕೊಂಡಿದ್ದರು. ‘ಮತ್ತೆ ಮುಖಕ್ಕೆ ಮೇಕಪ್ ಹಾಕಿಕೊಳ್ಳುವುದು ಒಂದು ಅದ್ಬುತ ಅನುಭವ. ನನ್ನ ಪ್ಯಾಶನ್ನಿಂದ ಸುದೀರ್ಘ ಕಾಲ ರಜೆಯಲ್ಲಿದ್ದಂತಾಗಿತ್ತು. ಆ ಪ್ಯಾಶನ್ ಬೇರೆನೂ ಅಲ್ಲ ಸಿನಿಮಾ. ಇದೀಗ ವಿಕ್ರಾಂತ್ ರೋಣನಾಗಿ ನಿಮ್ಮ ಮುಂದೆ ಮತ್ತೆ ಬಂದಿದ್ದೇನೆ’ ಎಂದಿದ್ದರು.
ಕಾಡಿನ ಬ್ಯಾಕ್ಡ್ರಾಪ್ ರೀತಿಯ ಬೃಹತ್ ಸೆಟ್ನಲ್ಲಿ ನಿರ್ದೇಶಕ ಅನೂಪ್ ಭಂಡಾರಿ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದು, ಚಿತ್ರದ ಮೊದಲ ದಿನದ ದೃಶ್ಯ ಸದ್ದು ಮಾಡಿತ್ತು. ಗುಮ್ಮ ಬಂದ ಗುಮ್ಮ.. ಹಿನ್ನೆಲೆ ಧ್ವನಿ ಮತ್ತು ಬಿಜಿಎಂನಿಂದಲೇ 32 ಸೆಕೆಂಡ್ನ ವಿಡಿಯೋ ಗಮನಸೆಳೆದಿತ್ತು. ಇದೀಗ ಎರಡನೇ ವಿಡಿಯೋ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.