

ಒಂದು ಕಡೆ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಕರಣ್ ಜೋಹರ್ ಪರೋಕ್ಷ ಕಾರಣ ಎಂದು ನಟಿ ಕಂಗನಾ ರಣಾವತ್ ಹಲವು ದಿನಗಳಿಂದ ಹೇಳಿಕೊಂಡು ಬಂದಿದ್ದಾರೆ. ಬಾಲಿವುಡ್ನಲ್ಲಿ ಸ್ವಜನಪಕ್ಷಪಾತವನ್ನು ಕರಣ್ ಪೋಷಿಸುತ್ತಿರುವುದರಿಂದ ಬೇರೆ ಯಾರನ್ನೂ ಬೆಳೆಯುವುದಕ್ಕೆ ಬಿಡುವುದಿಲ್ಲ. ಸುಶಾಂತ್ ಸಿಂಗ್ ಸಹ ಅವರ ದೌರ್ಜನ್ಯಕ್ಕೆ ಒಳಗಾಗಿ, ಕೊನೆಗೆ ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಳ್ಳಬೇಕಾಯಿತು ಎಂದು ಕಂಗನಾ ಹೇಳಿಕೊಂಡೇ ಬಂದಿದ್ದಾರೆ.
ಕಂಗನಾ ಹೀಗೆ ಪ್ರತಿಪಾದಿಸುತ್ತಿದ್ದರೆ, ನಟ-ನಿರ್ದೇಶಕ ಅನುರಾಗ್ ಕಶ್ಯಪ್ ಮಾತ್ರ ಕರಣ್ ಯಾರನ್ನೂ ಹಾಳು ಮಾಡಿಲ್ಲ, ಯಾರನ್ನೂ ಹಾಳು ಮಾಡುವುದಕ್ಕೂ ಸಾಧ್ಯವಿಲ್ಲ, ಅವರಿಂದ ಬೆಳೆಸುವುದಕ್ಕೆ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ.
ಸ್ವಜನಪಕ್ಷಪಾತದ ಕುರಿತಾಗಿ ಒಂದು ಸಂದರ್ಶನದಲ್ಲಿ ಭಾಗವಹಿಸಿ ಮಾತನಾಡಿದ ಅವರು, 'ನಿಜ ಹೇಳಬೇಕೆಂದರೆ, ಈ ಸ್ವಜನಪಕ್ಷಪಾತದ ಚರ್ಚೆ ಬಹಳ ತಡವಾಗಿ ನಡೆಯುತ್ತಿದೆ. ಸುಮಾರು 10 ವರ್ಷಗಳ ಹಿಂದೆ ಈ ಚರ್ಚೆ ನಡೆಯಬೇಕಿತ್ತು. 10 ವರ್ಷಗಳ ಹಿಂದೆ ಇದ್ದಂತ ಪರಿಸ್ಥಿತಿ ಈಗಿಲ್ಲ. ಈಗ ಸಾಕಷ್ಟು ಹೊಸಬರು ಮತ್ತು ಚಿತ್ರರಂಗದವರಿಗೆ ಸಂಬಂಧಿಸಿದವರು ಬರುತ್ತಿದ್ದಾರೆ' ಎಂದು ಹೇಳಿಕೊಂಡಿದ್ದಾರೆ.
'ಕರಣ್ ಜೋಹರ್ ಯಾರನ್ನು ಬೇಕಾದರೂ ಚಿತ್ರರಂಗದಲ್ಲಿ ಬೆಳೆಸಬಹುದು. ಏಕೆಂದರೆ, ಅವರು ಒಬ್ಬ ನಿರ್ದೇಶಕನಷ್ಟೇ ಅಲ್ಲ, ಅವರೊಬ್ಬ ವ್ಯಾಪಾರಿ ಸಹ. ಯಾರಿಂದ ಹೇಗೆ ಕೆಲಸ ತೆಗೆಯಬಹುದು ಎನ್ನುವುದು ಚೆನ್ನಾಗಿ ಅವರಿಗೆ ಗೊತ್ತಿದೆ. ಅವರಿಂದ ಯಾರನ್ನೂ ಹಾಳು ಮಾಡುವುದಕ್ಕೆ ಸಾಧ್ಯವೇ ಇಲ್ಲ' ಎಂದು ಅಭಿಪ್ರಾಯಪಡುತ್ತಾರೆ ಅನುರಾಗ್.
'ಚಿತ್ರರಂಗಕ್ಕೆ ಸಂಬಂಧಿಸಿದವರು ಚಿತ್ರರಂಗಕ್ಕೆ ಬಂದಾಗ, ಸಹಜವಾಗಿಯೇ ಸ್ವಲ್ಪ ಕಷ್ಟಪಡಬೇಕಾಗುತ್ತದೆ. ಅದೇ ಒಳಗಿನವರಿಗೆ ಸ್ವಲ್ಪ ಸಲೀಸಾಗುತ್ತದೆ. ಅವರು ಕ್ಯೂನಲ್ಲಿ ನಿಂತು ಆಡಿಷನ್ನಲ್ಲಿ ಭಾಗವಹಿಸಬೇಕು ಅಂದೇನಿಲ್ಲ. ಆದರೆ, ಹೊರಗಿನವರು ಕ್ಯೂನಲ್ಲಿ ನಿಂತು, ತಮ್ಮ ಸರದಿ ಬರುವವರೆಗೂ ಕಾಯಬೇಕು. ಕಳೆದ 10 ವರ್ಷಗಳಿಗೆ ಹೋಲಿಸಿದರೆ, ಹೊರಗಿನವರಿಗೆ ಸಾಕಷ್ಟು ಅವಕಾಶಗಳು ಸಿಗುತ್ತದೆ. ಆಗ ಇಷ್ಟೊಂದು ಸೋಷಿಯಲ್ ಮೀಡಿಯಾ ಇರಲಿಲ್ಲ. ಈಗ ದೊಡ್ಡದಾಗಿ ಬೆಳೆದಿದೆ. ಜನ ಚಿತ್ರ ನೋಡಿ, ತಮಗೆ ಇಷ್ಟವಾದವರನ್ನು ತಮ್ಮದೇ ರೀತಿಯಲ್ಲಿ ಬೆಳೆಸುತ್ತಿದ್ದಾರೆ' ಎಂದು ಅಭಿಪ್ರಾಯಪಟ್ಟಿದ್ದಾರೆ.
ಅನುರಾಗಗ ಮತ್ತು ಕರಣ್ ಅವರ ಯೋಚನೆಗಳು ಭಿನ್ನವಾಗಿದ್ದು, ಬೇರೆಬೇರೆ ತರಹದ ಚಿತ್ರಗಳನ್ನೂ ಮಾಡಿದರೂ, ಇಬ್ಬರೂ ಜತೆಗೆ ಕೆಲಸ ಮಾಡಿದ ಕೆಲವು ಉದಾರಣೆಗಳಿವೆ. 'ಬಾಂಬೆ ವೆಲ್ವೆಟ್' ಎಂಬ ಚಿತ್ರದಲ್ಲಿ ಕರಣ್ ಜೋಹರ್ ಅವರನ್ನು ಅನುರಾಗ್ ನಿರ್ದೇಶನ ಮಾಡಿದ್ದರು. ಇನ್ನು 'ಬಾಂಬೆ ಟಾಕೀಸ್', 'ಲಸ್ಟ್ ಸ್ಟೋರೀಸ್' ಮತ್ತು 'ಗೋಸ್ಟ್ ಸ್ಟೋರೀಸ್' ಚಿತ್ರಗಳನ್ನು ಇಬ್ಬರೂ ಜತೆಯಾಗಿ ನಿರ್ಮಾಣ ಮಾಡಿದ್ದಾರೆ.