

ಕೆಲ ದಿನಗಳ ಹಿಂದಷ್ಟೇ ಫ್ಯಾಂಟಮ್ ಸಿನಿಮಾ ಚಿತ್ರೀಕರಣದಲ್ಲಿ ಭಾಗವಹಿಸುವ ಬಗ್ಗೆ ಸುದೀಪ್ ಹೇಳಿಕೊಂಡಿದ್ದರು. ಅದರಂತೆ ಹೈದರಾಬಾದ್ನತ್ತ ಪ್ರಯಾಣ ಬೆಳೆಸಿದ್ದ ಸುದೀಪ್, ಮೊದಲ ದಿನದ ಶೂಟಿಂಗ್ ವಿಡಿಯೋ ತುಣುಕನ್ನು ಶೇರ್ ಮಾಡಿಕೊಂಡು, ಅಭಿಮಾನಿಗಳಿಗೆ ಸರ್ಪೈಸ್ ಉಡುಗೊರೆ ನೀಡಿದ್ದರು. ಇದೀಗ ಇನ್ನೊಂದು ಉಡುಗೊರೆ ನೀಡುವ ಬಗ್ಗೆ ಕಿಚ್ಚ ಹೇಳಿಕೊಂಡಿದ್ದಾರೆ.
ಗುರುವಾರದ ಶೂಟಿಂಗ್ ದೃಶ್ಯವೊಂದನ್ನು ಶೇರ್ ಮಾಡುವುದಾಗಿ ಸುದೀಪ್ ಟ್ವಿಟರ್ನಲ್ಲಿ ಹಾಕಿದ್ದಾರೆ. ಮಧ್ಯಾಹ್ನ 3.30ಕ್ಕೆ ಫ್ಯಾಂಟಮ್ ಚಿತ್ರದ ವಿಡಿಯೋವನ್ನು ಹಂಚಿಕೊಳ್ಳಲಿದ್ದಾರೆ. ಈ ಮೊದಲು ಬಿಡುಗಡೆಯಾಗಿದ್ದ ಚಿತ್ರದ ಪುಟಾಣಿ ತುಣುಕಿಗೆ ಸಾಕಷ್ಟು ಮೆಚ್ಚುಗೆ ಸಿಕ್ಕಿತ್ತು. ವಿಕ್ರಾಂತ್ ರೋಣನಾಗಿ ಸುದೀಪ್ ಲುಕ್ಗೆ ಅಭಿಮಾನಿಗಳು ಫಿದಾ ಆಗಿದ್ದರು. ಇದೀಗ ಇನ್ನೊಂದು ವಿಡಿಯೋ ಹೇಗಿರಲಿದೆ ಎಂಬ ಬಗ್ಗೆ ಕುತೂಹಲ ಸೃಷ್ಟಿಯಾಗಿದೆ.
ಇನ್ನು ಕರೊನಾ ಹಿನ್ನೆಲೆಯಲ್ಲಿ ಶೂಟಿಂಗ್ ಆರಂಭಿಸಿದ ಮೊದಲ ನಟ ಎಂಬ ಪಟ್ಟವನ್ನೂ ಕಿಚ್ಚ ಸುದೀಪ್ ಪಡೆದುಕೊಂಡಿದ್ದಾರೆ. ತಮ್ಮ ಶೂಟಿಂಗ್ ಅನುಭವವನ್ನೂ ಅವರು ಹೇಳಿಕೊಂಡಿದ್ದರು. ‘ಮತ್ತೆ ಮುಖಕ್ಕೆ ಮೇಕಪ್ ಹಾಕಿಕೊಳ್ಳುವುದು ಒಂದು ಅದ್ಬುತ ಅನುಭವ. ನನ್ನ ಪ್ಯಾಶನ್ನಿಂದ ಸುದೀರ್ಘ ಕಾಲ ರಜೆಯಲ್ಲಿದ್ದಂತಾಗಿತ್ತು. ಆ ಪ್ಯಾಶನ್ ಬೇರೆನೂ ಅಲ್ಲ ಸಿನಿಮಾ. ಇದೀಗ ವಿಕ್ರಾಂತ್ ರೋಣನಾಗಿ ನಿಮ್ಮ ಮುಂದೆ ಮತ್ತೆ ಬಂದಿದ್ದೇನೆ’ ಎಂದಿದ್ದರು.
ಇದನ್ನೂ ಓದಿ: ಈ ವಿಷಯದಲ್ಲಿ ‘ಹಾಸ್ಯ ಚಕ್ರವರ್ತಿ’ಗಳೇ ಮುಂದು …
ಕಾಡಿನ ಬ್ಯಾಕ್ಡ್ರಾಪ್ ರೀತಿಯ ಬೃಹತ್ ಸೆಟ್ನಲ್ಲಿ ನಿರ್ದೇಶಕ ಅನೂಪ್ ಭಂಡಾರಿ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದು, ಚಿತ್ರದ ಮೊದಲ ದಿನದ ದೃಶ್ಯ ಸದ್ದು ಮಾಡಿತ್ತು. ಗುಮ್ಮ ಬಂದ ಗುಮ್ಮ.. ಹಿನ್ನೆಲೆ ಧ್ವನಿ ಮತ್ತು ಬಿಜಿಎಂನಿಂದಲೇ 32 ಸೆಕೆಂಡ್ನ ವಿಡಿಯೋ ಗಮನಸೆಳೆದಿತ್ತು. ಇದೀಗ ಎರಡನೇ ವಿಡಿಯೋ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.