ಹೊಸಬರನ್ನು ಯಾಕೆ ಪರಿಚಯಿಸ್ತಾರೆ ಗೊತ್ತಾ? ಕಂಗನಾ ಹೇಳ್ತಾರೆ ಕೇಳಿ ...

Final - Kangana
Published on

ಬಾಲಿವುಡ್‍ನಲ್ಲಿ ನೆಪೋಟಿಸಂ (ಸ್ವಜನಪಕ್ಷಪಾತ) ಚರ್ಚೆ ದಿನದಿಂದ ದಿನಕ್ಕೆ ಹೊಸ ಹೊಸ ತಿರುವುಗಳನ್ನು ಪಡೆಯುತ್ತಲೇ ಇದೆ. ಅದರಲ್ಲೂ ಇಂಥದ್ದೊಂದು ವಿಷಯವನ್ನು ಮೊದಲಿಗೆ ಕೆಲವು ವರ್ಷಗಳ ಹಿಂದೆ ಕೆದಕಿದ್ದು ನಟಿ ಕಂಗನಾ ರಣಾವತ್. ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ನಂತರವಂತೂ ಈ ವಿಷಯದ ಬಗ್ಗೆ ಕಂಗನಾ ಮಾತಾಡುತ್ತಲೇ ಇದ್ದು, ಈಗ ಹೊಸ ಬಾಂಬ್ ಸಿಡಿಸಿದ್ದಾರೆ.

ಗುರುವಾರವಷ್ಟೇ, ನಟಿ ಪೂಜಾ ಭಟ್ ಅವರು ಸೋಷಿಯಲ್ ಮೀಡಿಯಾದಲ್ಲಿ ಈ ನೆಪೋಟಿಸಂ ಬಗ್ಗೆ ಒಂದಿಷ್ಟು ಬರೆದುಕೊಂಡಿದ್ದರು. ಕಂಗನಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ತಮ್ಮ ತಂದೆ ಮತ್ತು ಚಿಕ್ಕಪ್ಪ. ಬಹುಶಃ ಇಡೀ ಚಿತ್ರರಂಗದಲ್ಲಿ ಹೊಸಬರನ್ನು ಯಾರಾದರೂ ಅತೀ ಹೆಚ್ಚು ಪರಿಚಯಿಸಿದ್ದಾರೆ ಎಂದರೆ, ಅದು ತಮ್ಮ ನಿರ್ಮಾಣ ಸಂಸ್ಥೆ ಎಂದು ಅವರು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ತಮ್ಮ ಬ್ಯಾನರ್‍ನ ಮೂಲಕ ಯಾವುದೇ ಸ್ಟಾರ್ ಮಕ್ಕಳನ್ನೂ ಪರಿಚಯಿಸಿಲ್ಲ ಮತ್ತು ಪರಿಚಯಿಸಿದವರೆಲ್ಲಾ ಚಿತ್ರರಂಗಕ್ಕೆ ಸಂಬಂಧವಿಲ್ಲದವರು ಆಗಿದ್ದರು ಎಂದು ಪೂಜಾ ಬರೆದುಕೊಂಡಿದ್ದಾರೆ.

ಪೂಜಾ ಅವರ ಈ ಮೆಸೇಜ್ ನೋಡಿ ಕೆಂಡಾಮಂಡಲರಾಗಿರುವ ಕಂಗನಾ, ಈ ಕುರಿತು ಪ್ರತ್ಯುತ್ತರ ನೀಡಿದ್ದಾರೆ. `ನಿಮ್ಮ ಚಿಕ್ಕಪ್ಪ ಅತೀ ಹೆಚ್ಚು ಸಂಖ್ಯೆಯ ಹೊಸಬರನ್ನು ಪರಿಚಯಿಸಿದ್ದಾರೆ ಎಂದರೆ ಅದಕ್ಕೆ ಕಾರಣವಿದೆ. ಎಲ್ಲರಿಗೂ ಗೊತ್ತಿರುವಂತೆ, ಅವರಿಗೆ ದುಡ್ಡು ಕೊಟ್ಟು ಅಭ್ಯಾಸವಿಲ್ಲ. ಹಾಗಾಗಿ ಪ್ರತಿಭಾವಂತರನ್ನು ಪರಿಚಯಿಸುವ ಮೂಲಕ, ಅವರಿಂದ ಬಿಟ್ಟಿ ದುಡಿಸಿಕೊಳ್ಳುತ್ತಾರೆ' ಎಂದು ಕಂಗನಾ ಅವರ ಮಾಧ್ಯಮ ತಂಡ ಪ್ರತ್ಯುತ್ತರ ನೀಡಿದೆ.

ಚಿತ್ರರಂಗಕ್ಕೆ ಪರಿಚಯಿಸಿದರು ಎಂದ ಮಾತ್ರಕ್ಕೆ ಅವರಿಗೆ ಚಪ್ಪಲಿಯಲ್ಲಿ ಹೊಡೆಯುವುದು, ಬಾಯಿಗೆ ಬಂದಂತೆ ಮಾತನಾಡುವುದು, ಚಿತ್ರರಂಗದಲ್ಲಿ ಹೆಚ್ಚು ದಿನ ಉಳಿಯುವುದಿಲ್ಲ ಎಂದು ಭವಿಷ್ಯ ನುಡಿಯುವುದು ಸರಿಯಲ್ಲ ಎಂದು ಟೀಂ ಕಂಗನಾ ಹೇಳಿಕೊಂಡಿದೆ. ಈ ಹಿಂದೆ, ಮಹೇಶ್ ಭಟ್ ಅವರು ಕಂಗನಾಗೆ ಚಪ್ಪಲಿ ಹೊಡೆದಿದ್ದರೂ ಎಂಬ ಸುದ್ದಿ ಕೆಲವು ವರ್ಷಗಳ ಹಿಂದೆ ಮಾಧ್ಯಮಗಳಲ್ಲಿ ಕೇಳಿ ಬಂದಿತ್ತು. ಹಾಗೆಯೇ, ಕಂಗನಾ ಹೆಚ್ಚು ದಿನಗಳ ಕಾಲ ಚಿತ್ರರಂಗದಲ್ಲಿ ಉಳಿಯುವುದಿಲ್ಲ ಎಂದು ಮಹೇಶ್ ಭಟ್ ಹಿಂದೊಮ್ಮೆ ನುಡಿದಿದ್ದರು. ಇದೆಲ್ಲವನ್ನು ಟೀಂ ಕಂಗನಾ ಹೊರಹಾಕಿದೆ.

ಇನ್ನು, ಮಹೇಶ್ ಭಟ್ ಅವರ ಸಂಸ್ಥೆಯನ್ನೇ ನಂಬಿ ಬದುಕಿರಲಿಲ್ಲ ಎಂದು ಹೇಳಿಕೊಂಡಿರುವ ಟೀಂ ಕಂಗನಾ, ``ಗ್ಯಾಂಗ್‍ಸ್ಟರ್' ಚಿತ್ರಕ್ಕೆ ಆಡಿಷನ್ ಮಾಡುವುದರ ಜತೆಗೆ, ಮಹೇಶ್ ಬಾಬು ಅಭಿನಯದ ತೆಲುಗಗು ಚಿತ್ರ `ಪೋಕಿರಿ'ಗೂ ಕಂಗನಾ ಆಡಿಷನ್ ಮಾಡಿದ್ದರು. ಅಷ್ಟೇ ಅಲ್ಲ, ಆ ಚಿತ್ರಕ್ಕೆ ಆಯ್ಕೆ ಸಹ ಆಗಿದ್ದರು. ಆ ಚಿತ್ರ ಬ್ಲಾಕ್‍ಬಸ್ಟರ್ ಆಗಿತ್ತು. ಹಾಗಾಗಿ `ಗ್ಯಾಂಗ್‍ಸ್ಟರ್' ಚಿತ್ರವಿಲ್ಲದಿದ್ದರೆ, ಕಂಗನಾ ಅವರನ್ನು ಕೇಳೋರು ಯಾರೂ ಇರಲೇ ಇಲ್ಲ ಎಂದು ಭಾವಿಸುವುದು ಬೇಡ' ಎಂದು ಹೇಳಿಕೊಂಡಿದೆ.

ಇದಕ್ಕೂ ಮುನ್ನ ಕಂಗನಾ ಸಹೋದರಿ ರಂಗೋಲಿ ಚಾಂಡೆಲ್ ಕೂಡಾ ಇದೇ ವಿಷಯವಾಗಿ ಮಾತನಾಡಿದ್ದರು. ಕಂಗನಾಗೆ ಬ್ರೇಕ್ ಕೊಟ್ಟಿದ್ದು ಮಹೇಶ್ ಭಟ್ ಅಲ್ಲ, ಅನುರಾಗ್ ಬಸು ಕೊಟ್ಟಿದ್ದು ಎಂದು ಹೇಳಿಕೊಂಡಿದ್ದರು ಎಂಬುದು ಗಮನಾರ್ಹ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net