

ಬಾಲಿವುಡ್ನ ಖ್ಯಾತ ಕಾಮಿಡಿ ನಟ ಜಗದೀಪ್ ಅವರು ಗುರುವಾರ ರಾತ್ರಿ ವಯೋಸಹಜ ಸಮಸ್ಯೆಗಳಿಂದ ಮುಂಬೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ಜಗದೀಪ್ ಅವರ ಸಾವಿಗೆ ಅಜಯ್ ದೇವಗನ್ ಸೇರಿದಂತೆ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: ಪುನೀತ್ ನಿರ್ಮಾಣದಲ್ಲಿ ಬರಲಿದೆ `ಓ2'
ಜಗದೀಪ್ ಅವರ ಮೂಲ ಹೆಸರು ಸೈಯ್ಯದ್ ಇಷ್ತಿಯಾಕ್ ಅಹ್ಮದ್ ಜಾಫ್ರಿ. 50ರ ದಶಕದಲ್ಲಿ ಬಾಲನಟನಾಗಿ ಚಿತ್ರರಂಗಕ್ಕೆ ಬಂದ ಅವರು, ನಂತರದ ವರ್ಷಗಳಲ್ಲಿ ಪೋಷಕ ಪಾತ್ರಗಳಲ್ಲಿ ಮಿಂಚಿದರು. ಒಂದೆರೆಡು ಚಿತ್ರಗಳಲ್ಲಿ ಹೀರೋ ಆಗಿಯೂ ಕಾಣಿಸಿಕೊಂಡರು. ಬಿ.ಆರ್. ಚೋಪ್ರಾ ಅವರ `ಅಫ್ಸಾನಾ' ಚಿತ್ರದ ಮೂಲಕ ಹಿಂದಿ ಚಿತ್ರರಂಗ ಪ್ರವೇಶಿಸಿದ ಅವರು, `ದೋ ಭೀಘಾ ಜಮೀನ್', `ಆರ್ಪಾರ್' ಮುಂತಾದ ಚಿತ್ರಗಳಲ್ಲಿ ಬಾಲನಟನಾಗಿ ಕಾಣಿಸಿಕೊಂಡರು.
60ರ ದಶಕದಲ್ಲಿ ಕಾಮಿಡಿ ಪಾತ್ರಗಳಲ್ಲಿ ಕಾಣಿಸಿಕೊಂಡ ಅವರು, `ಬ್ರಹ್ಮಚಾರಿ' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದರು. ಆದರೆ, ಅವರಿಗೆ ಅತ್ಯಂತ ಜನಪ್ರಿಯತೆ ತಂದುಕೊಟ್ಟ ಪಾತ್ರ ಎಂದರೆ, ಅದು `ಶೋಲೆ' ಚಿತ್ರದ ಸೂರ್ಮಾ ಭೋಪಾಲಿ ಪಾತ್ರ. ಈ ಪಾತ್ರದಲ್ಲಿನ ಅವರ ಅಭಿನಯ ಅದೆಷ್ಟು ಜನಪ್ರಿಯವಾಯಿತೆಂದರೆ, ನಂತರ ಹಲವು ಚಿತ್ರಗಳಲ್ಲಿ ಅವರಿಗೆ ಅದೇ ತರಹದ ಮ್ಯಾನರಿಸಂನ ಪಾತ್ರ ಸಿಕ್ಕಿತ್ತು. ಈ ಚಿತ್ರದಲ್ಲಿನ ಅವರ ಮಾತನಾಡುವ ಶೈಲಿ ಈಗಲೂ ಅದೆಷ್ಟು ಜನಪ್ರಿಯವಾಗಿದೆಯೆಂದರೆ, ಹಲವು ಕಾರ್ಟೂನ್ಗಳಲ್ಲಿನ ಪಾತ್ರಕ್ಕೆ ಅದೇ ಶೈಲಿಯ ಧ್ವನಿ ನೀಡಲಾಗುತ್ತದೆ.
ಇದನ್ನೂ ಓದಿ: ಕನ್ನಡಿಯಿಂದ ಕ್ಯಾಮೆರಾ ಎದುರು
ಸೂರ್ಮಾ ಭೋಪಾಲಿ ಪಾತ್ರ ಹಿಟ್ ಆದ ನಂತರ, ಜಗದೀಪ್ ಅವರು ಅದೇ ಹೆಸರಿನ ಚಿತ್ರ ಮಾಡಿದರು. ಈ ಚಿತ್ರದಲ್ಲಿ ಅವರು ನಾಯಕರಾಗಿದ್ದಷ್ಟೇ ಅಲ್ಲ, ಆ ಚಿತ್ರದ ಮೂಲಕ ನಿರ್ದೇಶಕರೂ ಆದರು. `ಅಂದಾಜ್ ಅಪ್ನಾ ಅಪ್ನಾ', `ಫೂಲ್ ಔರ್ ಕಾಂಟೆ', `ಚೈನಾ ಗೇಟ್' ಸೇರಿದಂತೆ ಸುಮಾರು 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಅವರು, ಕೊನೆಯದಾಗಿ ನಟಿಸಿದ ಚಿತ್ರದ ಎಂದರೆ ಅದ 2012ರಲ್ಲಿ ಬಿಡುಗಡೆಯಾದ `ಗಲೀ ಗಲೀ ಮೇ ಚೋರ್ ಹೈ'. ಆ ನಂತರ ಚಿತ್ರರಂಗದಿಂದ ದೂರವೇ ಉಳಿದಿದ್ದರು. ಅವರ ಮಗ ಜಾವೇದ್ ಜಾಫ್ರಿ, ನಟನೆ ಮತ್ತು ನಿರೂಪಣೆಯಲ್ಲಿ ದೊಡ್ಡ ಹೆಸರು ಮಾಡಿದ್ದಾರೆ.
ಜಗದೀಪ್ ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ಮುಂಬೈನಲ್ಲಿ ನಡೆಯಲಿದೆ.