

ಸವಾಲ್ ಹಾಕುವುದರಲ್ಲಿ ಕಂಗನಾ ರಣಾವತ್ ಎತ್ತಿದ ಕೈ. ಒಂದಲ್ಲಾ ಒಂದು ಕಾರಣಕ್ಕೆ, ಒಬ್ಬರಿಗಲ್ಲಾ ಒಬ್ಬರಿಗೆ ಸವಾಲ್ ಹಾಕುತ್ತಲೇ ಇರುವ ಕಂಗನಾ ಇದೀಗ, ಇನ್ನೊಂದು ಸವಾಲು ಹಾಕಿದ್ದಾರೆ. ತಾವು ಸೆಪ್ಟೆಂಬರ್ 9ರಂದು ಮನಾಲಿಯಿಂದ ಮುಂಬೈಗೆ ಬರುತ್ತಿದ್ದು, ತಮ್ಮನ್ನು ತಡೆಯುವ ತಾಕತ್ತು ಯಾರಿಗಿದೆಯೋ ಬಂದು ತಡೆಯಿರಿ ಎಂದು ಅವರು ಸವಾಲೆಸಿದಿದ್ದಾರೆ.
ಇದನ್ನೂ ಓದಿ: ಸೋನುಗೆ ಕಿರುಚಿತ್ರದ ಮೂಲಕ ಥ್ಯಾಂಕ್ಸ್ ಹೇಳಿದ ತಂಡ
ಇಷ್ಟಕ್ಕೂ ಏನಾಯಿತು ಎಂಬ ಪ್ರಶ್ನೆಗೆ ಒಂದು ಫ್ಲಾಶ್ಬ್ಯಾಕ್ಗೆ ಹೋಗಬೇಕು. ಕೆಲವು ದಿನಗಳ ಹಿಂದೆ, ಕಂಗನಾ ತಮ್ಮ ಟೀಮ್ ಕಂಗನಾ ಅಕೌಂಟ್ ಮೂಲಕ ಟ್ವೀಟ್ ಮಾಡಿದ್ದಾರೆ. ಯಾರೋ ಅದಕ್ಕೆ ಸರಿಯಾಗಿ ಕಾಲೆಳೆದಿದ್ದಾರೆ. ಅದಕ್ಕೆ ಮುಂಬೈ ಪೊಲೀಸ್ ಕಮೀಷನರ್ ಖಾತೆಯಿಂದ ಲೈಕ್ ಒತ್ತಲಾಗಿದೆ. ಈ ಕುರಿತು ಟ್ವೀಟ್ ಮಾಡಿದ್ದ ಅವರು, 'ಸುಶಾಂತ್ ಪರವಾಗಿ ನಾನು ಫೈಟ್ ಮಾಡಿ, ನ್ಯಾಯ ಕೇಳುವುದು ಹಲವರಿಗೆ ಸಹಿಸುವುದಕ್ಕೆ ಆಗುತ್ತಿಲ್ಲ. ಅದೇ ಕಾರಣಕ್ಕೆ ನನ್ನ ಬಗ್ಗೆ ಇಲ್ಲ ಸಲ್ಲದ ಮಾತಾಡುತ್ತಿದ್ದಾರೆ. ನನಗೆ ಬೆದರಿಕೆ ಹಾಕುತ್ತಿದ್ದಾರೆ. ವಿಚಿತ್ರ ಎಂದರೆ ಕಮಿಷನರ್ ಅವರೇ ಅದಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ಕಮಷಿನರ್ ಅವರೇ ಈ ಕೆಲಸ ಮಾಡಿದರೆ, ನಾನು ಮುಂಬೈನಲ್ಲಿ ಸುರಕ್ಷಿತವಾಗಿ ಇರುವುದಕ್ಕೆ ಸಾಧ್ಯವಾ? ನನ್ನ ರಕ್ಷಣೆಗೆ ಯಾರು ಜವಾಬ್ದಾರಿ' ಎಂದು ಪ್ರಶ್ನಿಸಿದ್ದರು.
ಇದಕ್ಕೆ ಉತ್ತರವಾಗಿ ಶಿವಸೇನಾ ಮುಖಂಡಾ ಸಂಜಯ್ ರೌತ್, ಅಷ್ಟೊಂದು ಭಯವಿದ್ದರೆ ಮುಂಬೈಗೆ ಬರಬೇಡಿ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಕಂಗನಾ, ಇತ್ತೀಚಿನ ದಿನಗಳಲ್ಲಿ ಮುಂಬೈ, ಪಿಓಕೆ ಆಗುತ್ತಿದೆ ಎಂದು ದೂರಿದ್ದರು. ಈ ಬಗ್ಗೆ ಹಲವರು ಬೇಸರ ವ್ಯಕ್ತಪಡಿಸಿದ್ದರು. ನಿಮಗೆ ಜೀವನ ಕೊಟ್ಟ ಮುಂಬೈ ಬಗ್ಗೆ ಈ ರೀತಿ ಮಾತನಾಡಬಾರದು ಎಂದು ನಟಿ ರೇಣುಕಾ ಶಹಾನೆ ಹೇಳಿದರೆ, ಮುಂಬೈನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ್ದು ತಪ್ಪು ಎಂದು ಇನ್ನೂ ಕೆಲವರು ಹೇಳಿದ್ದರು. ಅಷ್ಟೇ ಅಲ್ಲ, ಇಷ್ಟವಿಲ್ಲದಿದ್ದರೆ, ಮುಂಬೈಗೆ ಬರಬೇಡಿ ಎಂದು ಹೇಳಿದ್ದರು.
ಇದಕ್ಕೆ ಸಿಟ್ಟಾಗಿರುವ ಕಂಗನಾ, ಸೆಪ್ಟೆಂಬರ್ 9ರಂದು ತಾವು ಮುಂಬೈಗೆ ಬರುತ್ತಿದ್ದು, ತಮ್ಮನ್ನು ತಡೆಯುವ ತಾಖತ್ತು ಯಾರಿಗಿದೆಯೋ ಬಂದು ತಡೆಯಿರಿ ಎಂದು ಅವರು ಸವಾಲೆಸಿದಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, 'ಬಹಳಷ್ಟು ಜನ ಮುಂಬೈಗೆ ಬರಬೇಡ ಎಂದು ಹೆದರಿಸುತ್ತಿದ್ದಾರೆ. ಮುಂಬೈಗೆ ಬರುವುದಕ್ಕೆ ನಾನು ನಿರ್ಧಾರ ಮಾಡಿದ್ದು, ಸೆಪ್ಟೆಂಬರ್ 9ಕ್ಕೆ ಬರುತ್ತೇನೆ. ಎಷ್ಟು ಹೊತ್ತಿಗೆ ಮುಂಬೈ ಏರ್ಪೋರ್ಟ್ನಲ್ಲಿ ಲ್ಯಾಂಡ್ ಆಗುತ್ತೀನಿ ಎಂಬುದರ ಬಗ್ಗೆಯೂ ಮಾಹಿತಿ ಕೊಡುತ್ತೇನೆ. ಯಾರಿಗೆ ತಾಕತ್ತಿದೆಯೋ, ಅವರು ಬಂದು ತಡೆಯಲಿ' ಎಂದು ಸವಾಲು ಹಾಕಿದ್ದಾರೆ.