ಆ ಸಿಲ್ಲಿ ಆಸ್ಕರ್​ ಪ್ರಶಸ್ತಿ ನಮಗೆ ಬೇಕಿಲ್ಲ! 'ಎಮರ್ಜೆನ್ಸಿ' ಟ್ರೆಂಡ್ ಆಗಿದ್ದೇ ತಡ ಕಂಗನಾ ಮಾತೇ ಬದಲು | Kangana Ranaut

ವಿಜಯವಾಣಿ (9)
Published on

Kangana Ranaut: ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜೀವನಚರಿತ್ರೆಯನ್ನು ಚಿತ್ರವಾಗಿ ತೆರೆಗೆ ತಂದ ಬಾಲಿವುಡ್​ ನಟಿ ಕಂಗನಾ ರಣಾವತ್​, ಈ ಬಯೋಪಿಕ್​ ಚಿತ್ರವನ್ನು ತಾವೇ ನಿರ್ದೇಶಿಸಿ, ನಟಿಸಿ ಬೆಳ್ಳಿಪರದೆಯ ಮೇಲೆ ಮಿಂಚಿದರು. ಇತ್ತೀಚೆಗಷ್ಟೇ ಸಿನಿಮಾ ಜನಪ್ರಿಯ ಒಟಿಟಿ ಪ್ಲಾಟ್​ಫಾರ್ಮ್​ ಆದ ನೆಟ್​ಫ್ಲಿಕ್ಸ್​ನಲ್ಲಿ ರಿಲೀಸ್ ಆಗಿದ್ದು, ಇದೀಗ ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ಟ್ರೆಂಡಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಸದ್ಯ ಇದೇ ನಟಿಯ ವಿವಾದಾತ್ಮಕ ಹೇಳಿಕೆಗೆ ಕಾರಣವಾಗಿದೆ.

ಚಿತ್ರಮಂದಿರಗಳಲ್ಲಿ ರಿಲೀಸ್ ಆದ 'ಎಮರ್ಜೆನ್ಸಿ' ಚಿತ್ರ ನಿರೀಕ್ಷೆಗೆ ತಕ್ಕಂತೆ ಬಾಕ್ಸ್​ ಆಫೀಸ್​ನಲ್ಲಿ ಕಮಾಲ್ ಮಾಡಲಿಲ್ಲ. ಇದು ಆರಂಭಿಕ ಸೋಲು ಎಂದು ಅನಿಸಿದ್ದೇ ಆದರೂ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಗೊಂಡ ಬೆನ್ನಲ್ಲೇ ಒಟಿಟಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಕಂಗನಾ ಅಭಿನಯದ ಎಮರ್ಜೆನ್ಸಿಯನ್ನು ಒಟಿಟಿಯಲ್ಲಿ ವೀಕ್ಷಿಸಿದ ಅಪಾರ ಸಂಖ್ಯೆಯ ಸಿನಿಪ್ರಿಯರು, ನಟಿಯನ್ನು ಸಿನಿಮಾವನ್ನು ಏಕಾಏಕಿ ಟ್ರೆಂಡಿಂಗ್ ಪಟ್ಟಿಗೆ ಕೊಂಡೊಯ್ದಿರುವುದು ಗಮನಾರ್ಹ. ಈ ಬೆಳವಣಿಗೆ ಗಮನಿಸಿದ ಕಂಗನಾ ಮತ್ತೊಮ್ಮೆ ವಿವಾದಕ್ಕೆ ಸಿಲುಕುವಂತೆ ಹೇಳಿಕೆಯೊಂದನ್ನು ನೀಡಿದ್ದಾರೆ.

ನಟಿಯ ಅಭಿಮಾನಿಯೊಬ್ಬರು ಹ್ಯಾಶ್​ಟ್ಯಾಗ್ ಎಮರ್ಜೆನ್ಸಿ ಎಂದು ಇನ್​ಸ್ಟಾಗ್ರಾಮ್​ನಲ್ಲಿ ಬರೆದು, ಈ ಚಿತ್ರ ಆಸ್ಕರ್​ ಪ್ರಶಸ್ತಿಗೆ ನಾಮನಿರ್ದೇಶನಗೊಳ್ಳಬೇಕು ಎಂದು ತಮ್ಮ ಬಯಕೆಯನ್ನು ನಟಿಗೆ ತಿಳಿಸಿದ್ದರು. ಫ್ಯಾನ್​​ ಹಾಕಿದ್ದ ಪೋಸ್ಟ್​ ಅನ್ನು ರೀ-ಪೋಸ್ಟ್​ ಮಾಡಿದ ಕಂಗನಾ ರಣಾವತ್, "ನಿಜ. ಆದರೆ, ಅಮೆರಿಕ ತನ್ನ ಅಸಲಿ ಮುಖವನ್ನು ಒಪ್ಪಿಕೊಳ್ಳಲು ಇಚ್ಛಿಸುವುದಿಲ್ಲ. ಅವರು ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಹೇಗೆ ಬೆದರಿಸುತ್ತಾರೆ, ನಿಗ್ರಹಿಸುತ್ತಾರೆ ಮತ್ತು ಶಸ್ತ್ರಾಸ್ತ್ರಗಳಿಂದ ವಂಚಿಸುತ್ತಾರೆ ಎಂಬುದು ಚಿತ್ರದಲ್ಲಿ ಬಹಿರಂಗಗೊಂಡಿದೆ. ಅಮೆರಿಕನ್ನರು ತಮ್ಮ ಮೂರ್ಖ ಆಸ್ಕರ್ ಪ್ರಶಸ್ತಿಯನ್ನು ತಮ್ಮಲ್ಲೇ ಉಳಿಸಿಕೊಳ್ಳಲಿ. ನಮಗೆ ನಮ್ಮದೇ ಆದ ರಾಷ್ಟ್ರ ಪ್ರಶಸ್ತಿಗಳಿವೆ" ಎಂದು ಹೇಳುವ ಮೂಲಕ ಅಮೆರಿಕನ್ನರಿಗೆ ತಿರುಗೇಟು ಕೊಟ್ಟಿದ್ದಾರೆ.

ಸದ್ಯ ನಟಿಯ ಈ ಹೇಳಿಕೆ ಜಾಲತಾಣಗಳಲ್ಲಿ ವಿವಾದಕ್ಕೆ ಗುರಿಯಾಗಿದ್ದು, ನೆಟ್ಟಿಗರು ಮಿಶ್ರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಈ ಮೂಲಕ ಮತ್ತೊಮ್ಮೆ ಕಂಗನಾ ತಾನು ನೇರ, ಖಾರ ನುಡಿಗೆ ಮತ್ತು ವಿವಾದಕ್ಕೆ ಹೆಸರುವಾಸಿ ಎಂಬುದನ್ನು ಸಾಬೀತುಪಡಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net