

ತಿರುವನಂತನಪುರಂ: ಮಲಯಾಳಂ ಸೂಪರ್ಸ್ಟಾರ್ ಮಮ್ಮುಟ್ಟಿ ಬಗ್ಗೆ ಹೊಸದಾಗಿ ಪರಿಚಯಿಸುವ ಅಗತ್ಯವಿಲ್ಲ. ಈ ನಟ ದಕ್ಷಿಣ ಚಿತ್ರರಂಗದಲ್ಲಿ ತಮ್ಮ ಅತ್ಯುತ್ತಮ ನಟನೆಯಿಂದಾಗಿ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸ್ವಲ್ಪ ಸಮಯದಿಂದ ಅವರ ಯಾವುದೇ ಸಿನಿಮಾಗಳ ಬಗ್ಗೆ ಚರ್ಚೆ ನಡೆದಿಲ್ಲ. ಇತ್ತೀಚೆಗೆ ಜಾಲತಾಣದಲ್ಲಿ ಮಮ್ಮುಟ್ಟಿ(Mammootty) ಅವರ ಮುಂದಿನ ಸಿನಿಮಾದ ಬದಲಿಗೆ ಅವರ ಆರೋಗ್ಯದ ಬಗ್ಗೆ ಸುದ್ದಿಗಳು ಹರಿದಾಡಿವೆ.
ಇತ್ತೀಚೆಗೆ ನಟ ಮಮ್ಮುಟ್ಟಿ ಅವರಿಗೆ ಕೊಲೊನ್ ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದು ಅದರ ಚಿಕಿತ್ಸೆಗಾಗಿ ಅವರು ಚಲನಚಿತ್ರಗಳಿಂದ ವಿರಾಮ ತೆಗೆದುಕೊಂಡಿದ್ದಾರೆ ಎಂಬ ಸುದ್ದಿ ಹೊರಬಿದ್ದಿತ್ತು. ಈ ಮಾಹಿತಿ ವೈರಲ್ ಆದ ನಂತರ ಅಭಿಮಾನಿಗಳು ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಸುದ್ದಿ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆ ಅಂತಿಮವಾಗಿ ನಟರಿಂದ ಅಧಿಕೃತ ಪ್ರತಿಕ್ರಿಯೆ ಬಂದಿದೆ.
ವೈರಲ್ ಆಗಿರುವ ಸುದ್ದಿಗೆ ಮಮ್ಮುಟ್ಟಿ ಅವರ ಪಿಆರ್ ತಂಡ ಸ್ಪಷ್ಟನೆ ನೀಡಿದೆ. ರಂಜಾನ್ ಸಮಯದಲ್ಲಿ ಉಪವಾಸ ಆಚರಿಸಲು ನಟ ಮಮ್ಮುಟ್ಟಿ ಕೆಲಸದಿಂದ ವಿರಾಮ ತೆಗೆದುಕೊಂಡಿದ್ದಾರೆ. ವಿರಾಮ ಮುಗಿದ ತಕ್ಷಣ ಅವರು ಮಹೇಶ್ ನಾರಾಯಣನ್ ಅವರ ಚಿತ್ರದಲ್ಲಿ ಮೋಹನ್ ಲಾಲ್ ಅವರೊಂದಿಗೆ ಚಿತ್ರೀಕರಣ ಮಾಡಲಿದ್ದಾರೆ. ಮಮ್ಮುಟ್ಟಿ ಅವರು ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ ಎಂದು ನಟನ ತಂಡ ಸ್ಪಷ್ಟಪಡಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಹಬ್ಬಿರುವುದು ನಕಲಿ ಸುದ್ದಿ ಎಂದು ತಂಡವು ತಿಳಿಸಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.
ಮಮ್ಮುಟ್ಟಿ ಅವರ ಮುಂಬರುವ ಚಿತ್ರದ ಬಗ್ಗೆ ಹೇಳುವುದಾದರೆ ವಿರಾಮದ ನಂತರ ಅವರು ಚಿತ್ರೀಕರಣವನ್ನು ಪ್ರಾರಂಭಿಸಲಿದ್ದಾರೆ. ಇದಕ್ಕಾಗಿ ಮಮ್ಮುಟ್ಟಿ ಮತ್ತು ಮೋಹನ್ ಲಾಲ್ ಒಟ್ಟಾಗಿ ಕೆಲಸ ಮಾಡಲಿದ್ದಾರೆ. ಚಿತ್ರದ ಮೊದಲ ಹಂತದ ಚಿತ್ರೀಕರಣ ಶ್ರೀಲಂಕಾದಲ್ಲಿ ನಡೆಯಲಿದೆ. ಚಿತ್ರೀಕರಣದ ವೇಳಾಪಟ್ಟಿ 150 ದಿನಗಳಾಗಿರುತ್ತದೆ. ಇದನ್ನು ಹಲವು ಸ್ಥಳಗಳಲ್ಲಿ ಚಿತ್ರೀಕರಿಸಲಾಗುವುದು. ಚಿತ್ರದ ಶೀರ್ಷಿಕೆಯನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ ಎಂದು ಹೇಳಲಾಗುತ್ತಿದೆ.(ಏಜೆನ್ಸೀಸ್)