

ಮುಂಬೈ: ಅಕ್ರಮ ನಿರ್ಮಾಣ ಎಂಬ ಕಾರಣಕ್ಕೆ ಕಂಗನಾ ರಣಾವತ್ ಅವರ ಕಚೇರಿಯನ್ನು ಬುಧವಾರಷ್ಟೇ ಬೃಹನ್ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಭಾಗಶಃ ಒಡೆದು ಹಾಕಿದ್ದರು. ಹೀಗೆ ಅರ್ಧಂಬರ್ಧ ಒಡೆದುಹಾಕಲಾಗಿರುವ ಈ ಬಿಲ್ಡಿಂಗ್ ರಿಪೇರಿ ಮಾಡಿಸದಿರಲು ಕಂಗನಾ ನಿರ್ಧರಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ನನ್ನ ಈ ಹೊಸ ಆಫೀಸ್ ಪ್ರಾರಂಭವಾಗಿದ್ದು ಜನವರಿ 15ರಂದು. ಪ್ರಾರಂಭವಾದ ಕೆಲವೇ ದಿನಗಳಲ್ಲಿ ಕರೊನಾ ಹಾವಳಿ ಶುರುವಾಯಿತು. ಆ ನಂತರ ಅಲ್ಲಿ ಕೆಲಸ ಮಾಡಿಲ್ಲ. ಈ ಅವಧಿಯಲ್ಲಿ ನಾನು ಯಾವುದೇ ಕೆಲಸ ಮಾಡಿಲ್ಲವಾದ್ದರಿಂದ, ಆಫೀಸ್ ನವೀಕರಣ ಮಾಡಿಸುವುದಕ್ಕೆ ನನ್ನ ಬಳಿ ಹಣ ಇಲ್ಲ. ಅರ್ಧಂಬರ್ಧ ಒಡೆದು ಹಾಕಲಾಗಿರುವ ಆಫೀಸ್ನಲ್ಲೇ ನಾನು ಕೆಲಸ ಮುಂದುವರೆಸುತ್ತೇನೆ. ದುಷ್ಟಶಕ್ತಿಗಳ ವಿರುದ್ಧ ಒಬ್ಬ ಮಹಿಳೆ ಸಿಡಿದೇಳಬಲ್ಲಳು ಎಂದು ಸಾಂಕೇತಿಕವಾಗಿ ಹೇಳುವುದಕ್ಕೆ ಆ ಕಟ್ಟಡವನ್ನು ನವೀಕರಿಸದಿರಲು ನಿರ್ಧರಿಸಿದ್ದೇನೆ' ಎಂದು ಕಂಗನಾ ಹೇಳಿಕೊಂಡಿದ್ದಾರೆ.
ಇನ್ನು, ತಮ್ಮ ಕಚೇರಿಯನ್ನು ಕ್ಷುಲ್ಲಕ ಕಾರಣಕ್ಕೆ ಒಡೆಯಲಾಗಿದೆ ಎಂದು ಬಾಲಿವುಡ್ ನಟಿ ಕಂಗನಾ ರಣಾವತ್, ಆಕ್ರೋಶ ವ್ಯಕ್ತಪಡಿಸುವುದರ ಜತೆಗೆ, ಮಹಾರಾಷ್ಟ್ರ ಸರ್ಕಾರವನ್ನು ಬೆರೆಕೆ ಸರ್ಕಾರ ಎಂದು ಕರೆದಿದ್ದರು. ಅಧಿಕಾರದ ಚುಕ್ಕಾಣಿ ಹಿಡಿದಿರುವ ಶಿವಸೇನಾವನ್ನು ಸೋನಿಯಾ ಸೇನಾ ಎಂದು ಕರೆದಿದ್ದರು.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನಾ ಜತೆಗೆ ಸೇರಿ ಸರ್ಕಾರ ರಚಿಸಬೇಕಿತ್ತು. ಆದರೆ, ಶಿವಸೇನಾದವರು ಇಂಥ ಕ್ಷುಲ್ಲಕ ಕೆಲಸಗಳನ್ನು ಮಾಡುವುದರಿಂದಲೇ, ಅವರ ಸಹವಾಸವೇ ಬೇಡ ಎಂದು ದೇವೇಂದ್ರ ಫಡ್ನವಿಸ್ ಹೇಳಿರಬೇಕು. ಶಿವಸೇನಾದವರು ಚುನಾವಣೆಯಲ್ಲಿ ಸೋತ ನಂತರ ನಾಚಿಕೆ ಇಲ್ಲದೆ ಕಾಂಗ್ರೆಸ್ನವರ ಜತೆಗೆ ಸೇರಿ ಸರ್ಕಾರ ರಚಿಸಿ, ಸೋನಿಯಾ ಸೇನಾ ಆಗಿ ಬದಲಾಗಿದ್ದಾರೆ' ಎಂದು ಆರೋಪಿಸಿದ್ದಾರೆ.