ಕುಂಬಳೆ: ಕಂಬಾರು ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ 2025ರ ಜನವರಿ 28ರಿಂದ ಫೆಬ್ರವರಿ 2ರ ತನಕ ಜರುಗಲಿರುವ ಪುನಃಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವದ ಯಶಸ್ಸಿಗಾಗಿ ಇತ್ತೀಚೆಗೆ ಕುಡಾಲು ಬಾಡೂರು ಗ್ರಾಮಸ್ಥರ ಸಭೆ ನಡೆಸಿ ಸಮಿತಿ ರಚಿಸಲಾಯಿತು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಇ.ಎಸ್.ಮಹಾಬಲೇಶ್ವರ ಭಟ್ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರದ ಆಡಳಿತ ಮೊಕ್ತೇಸರ ಬಾಡೂರು ಯಜಮಾನ ಕುಂಞಣ್ಣ ಭಂಡಾರಿ, ಮೊಕ್ತೇಸರರಾದ ರವಿಶಂಕರ್ ಭಟ್ ಹಾಗೂ ಕುಡಾಲು ಗುತ್ತು ದಿವಾಕರ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಿದ್ಧತೆ ಹಾಗೂ ಅನುಷ್ಠಾನಕ್ಕೆ ಮಾರ್ಗದರ್ಶಕ ಮಂಡಳಿ, ಜೀರ್ಣೋದ್ಧಾರ ಸಮಿತಿ ಹಾಗೂ ಹದಿನಾರು ಉಪಸಮಿತಿಗಳನ್ನು ರಚಿಸಲಾಯಿತು. ವಿವಿಧ ಸಮಿತಿಗಳ ವಿಸ್ತರಣೆ ಹಾಗೂ ಜವಾಬ್ದಾರಿ ಹಂಚಿಕೆಗಾಗಿ ನವೆಂಬರ್ 16ರಂದು ಮಧ್ಯಾಹ್ನ 3ಕ್ಕೆ ಎಲ್ಲ ಸಮಿತಿಗಳು ಹಾಗೂ ಕಾರ್ಯಕರ್ತರ ಸಭೆ ನಡೆಸಲು ನಿರ್ಧರಿಸಲಾಯಿತು.
ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಕೋಳಾರು ಸತೀಶ್ಚಂದ್ರ ಭಂಡಾರಿ ಸ್ವಾಗತಿಸಿದರು. ಮೊಕ್ತೇಸರ ನೆರಿಯ ಹೆಗಡೆ ಲಕ್ಷ್ಮೀನಾರಾಯಣ ಭಟ್ ಪ್ರಾರ್ಥನೆ ಸಲ್ಲಿಸಿದರು. ರಾಜಾರಾಮ ಶೆಟ್ಟಿ ಕುಡಾಲು ವಂದಿಸಿದರು.