

ಬೆಂಗಳೂರು: 'ಇಂಡಿಯನ್ ಈಸ್ ಬ್ಯಾಕ್..' ಹೀಗೆಂದು ಸೇನಾಪತಿಗೆ ಇಂದು ಚಿತ್ರರಂಗದ ದಿಗ್ಗಜರು ಸ್ವಾಗತ ಕೋರಿ ಬರಮಾಡಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೆ, ಬಾಲಿವುಡ್, ಕಾಲಿವುಡ್, ಟಾಲಿವುಡ್, ಮಾಲಿವುಡ್ನ ಸಿನಿದಿಗ್ಗಜರು ಸೇನಾಪತಿಗಾಗಿ ಕೈಜೋಡಿಸಿದ್ದಾರೆ.
ಅರ್ಥಾತ್, ತಮಿಳಿನ ಖ್ಯಾತ ನಿರ್ದೇಶಕ ಎಸ್. ಶಂಕರ್ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ 'ಇಂಡಿಯನ್ 2' ಫಸ್ಟ್ ಗ್ಲಿಂಪ್ಸ್ಗೆ ಇಂದು ವಿವಿಧ ಭಾಷೆಗಳ ಸಿನಿಮಾ ಸ್ಟಾರ್ಗಳಿಂದ ಭರ್ಜರಿ ಸ್ವಾಗತ ಹಾಗೂ ಪ್ರತಿಕ್ರಿಯೆ ಸಿಕ್ಕಿದೆ. ನಟ ಕಮಲ ಹಾಸನ್ ಸೇನಾಪತಿಯ ಪಾತ್ರದಲ್ಲಿ ಹೇಗೆಲ್ಲ ಹೋರಾಡುತ್ತಾರೆ ಎನ್ನುವುದನ್ನು ಈ ಸೀಕ್ವೆಲ್ನಲ್ಲಿ ಕಟ್ಟಿಕೊಡಲಾಗಿದೆ.
'ಇಂಡಿಯನ್ 2' ಚಿತ್ರ 1996ರಲ್ಲಿ ಮೂಡಿಬಂದ 'ಇಂಡಿಯನ್'ನ ಮುಂದುವರಿದ ಭಾಗ. ನಟ ಕಮಲ ಹಾಸನ್ ಈ ಚಿತ್ರದಲ್ಲಿ ಸೇನಾಪತಿ ಪಾತ್ರದಲ್ಲಿ ಮಿಂಚಿದ್ದರು. ಅದರ ಮುಂದುವರಿದ ಭಾಗವಾಗಿರುವ ಇಂಡಿಯನ್-2 ಇಂಟ್ರೋ ವೀಡಿಯೋ ಇಂದು ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ.
ನಟ ಕಿಚ್ಚ ಸುದೀಪ್ ಕನ್ನಡ, ಸೂಪರ್ಸ್ಟಾರ್ ರಜಿನಿಕಾಂತ್ ತಮಿಳು, ನಟ ಆಮಿರ್ ಖಾನ್ ಹಿಂದಿ, ನಿರ್ದೇಶಕ ರಾಜಮೌಳಿ ತೆಲುಗು ಮತ್ತು ನಟ ಮೋಹನ್ ಲಾಲ್ ಮಲಯಾಳಂ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಇವರೆಲ್ಲರೂ ಇಂಡಿಯನ್ ಈಸ್ ಬ್ಯಾಕ್ ಎಂಬ ಒಕ್ಕಣಿಕೆಯೊಂದಿಗೆ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ಈ ಚಿತ್ರದಲ್ಲಿ ಸಿದ್ಧಾರ್ಥ್, ಕಾಜಲ್ ಅಗರ್ವಾಲ್, ರಾಕುಲ್ ಪ್ರೀತ್ ಸಿಂಗ್, ಪ್ರಿಯಾ ಭವಾನಿ ಶಂಕರ್, ಕಾಳಿದಾಸ್ ಜಯರಾಮ್, ಗುಲ್ಶನ್ ಗ್ರೋವರ್, ನೆಡುಮುಡಿ ವೇಣು, ವಿವೇಕ್, ಸಮುದ್ರಖನಿ, ಬಾಬಿ ಸಿಂಹ, ಗುರು ಸೋಮಸುಂದರಂ, ದೆಹಲಿ ಗಣೇಶ್, ಜಯಪ್ರಕಾಶ್, ಮನೋಬಾಲಾ, ವೆನ್ನೆಲ ಕಿಶೋರ್, ದೀಪಾ ಶಂಕರ್ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ, ರವಿವರ್ಮನ್ ಮತ್ತು ರತ್ನವೇಲು ಅವರ ಸಿನಿಮಾಟೋಗ್ರಫಿ ಮತ್ತು ಎ. ಶ್ರೀಕರ್ ಪ್ರಸಾದ್ ಅವರ ಎಡಿಟಿಂಗ್ ಇರಲಿದೆ.