ನಟ ಕಮಲ್​ ಹಾಸನ್​ ಜನ್ಮದಿನ: ಇದೇ ನನಗೆ ಉಡುಗೊರೆ ಎಂದು ಕೇಳಿದ್ದೇನು?

kamalhaasan
Published on

ಚೆನ್ನೈ: ಹಿರಿಯ ನಟ ಕಮಲ್​ ಹಾಸನ್​ ಇಂದು 67ನೇ ಹುಟ್ಟಿದಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಚಿತ್ರರಂಗದ ಗಣ್ಯರಿಂದ ಹಾಗೂ ಅಭಿಮಾನಿಗಳಿಂದ ಅವರಿಗೆ ಶುಭಾಶಯಗಳು ಹರಿದುಬರುತ್ತಿವೆ. ಈ ಸಂದರ್ಭಕ್ಕೆ ಅವರು ತಮ್ಮ ಅಭಿಮಾನಿಗಳಿಂದ ಒಂದು ವಿಶೇಷ ಉಡುಗೊರೆಯನ್ನು ಕೇಳಿದ್ದಾರೆ.

ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ 2015 ರ ನಂತರದ ಅತಿ ಹೆಚ್ಚು ಪ್ರಮಾಣದ ಮಳೆ ಸುರಿಯುತ್ತಿದೆ. ಭಾನುವಾರದಂದು ಸ್ಥಳೀಯ ಆಡಳಿತ ಜನರಿಗೆ ಪ್ರವಾಹದ ಎಚ್ಚರಿಕೆಯನ್ನೂ ನೀಡಿದೆ. ಹೀಗಿರುವಾಗ, ಪ್ರವಾಹಗಳಿಂದಾಗಿ ನರಳುತ್ತಿರುವ ಬಡವರಿಗೆ ಮತ್ತು ಅಗತ್ಯವಿರುವ ಜನರಿಗೆ ಸಹಾಯ ಮಾಡಿ ಎಂದು ಕಮಲ್​​​ ಟ್ವಿಟರ್​​ ಮೂಲಕ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಇದೇ ನನಗೆ ನೀವು ನೀಡಬಲ್ಲ ಅತ್ಯುತ್ತಮ ಉಡುಗೊರೆ ಎಂದೂ ಹೇಳಿದ್ದಾರೆ.

ಪ್ರಸ್ತುತ ಲೋಕೇಶ್​ ಕನಕರಾಜ್​ ನಿರ್ದೇಶನದ ವಿಕ್ರಮ್​ ಚಿತ್ರದಲ್ಲಿ ನಟಿಸುತ್ತಿರುವ ಕಮಲ್​, ಆ್ಯಕ್ಷನ್​ ಹೀರೋ ಪಾತ್ರ ವಹಿಸುತ್ತಿದ್ದಾರೆ. ಅವರ ಜನ್ಮದಿನಕ್ಕೆ ಪುಟ್ಟ ಉಡುಗೊರೆ ಎಂದು ಹೇಳಿ ಶನಿವಾರ ಆ ಚಿತ್ರದ ಹೊಸ ಪ್ರೋಮೋ ಬಿಡುಗಡೆ ಮಾಡಲಾಗಿದೆ. ರಾಜ್​ ಕಮಲ್​ ಫಿಲಂಸ್​ ಇಂಟರ್​ನ್ಯಾಷನಲ್​ ನಿರ್ಮಿಸುತ್ತಿರುವ ಈ ಚಿತ್ರ 2022 ರಲ್ಲಿ ತೆರೆ ಕಾಣಲಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net