

ಮಲ್ಟಿಸ್ಟಾರರ್ ಹಿಂದಿ ಚಲನಚಿತ್ರ ಸೂರ್ಯವಂಶಿ ಶುಕ್ರವಾರ(ನ.5) ಸಿನಿಮಾ ಮಂದಿರಗಳಲ್ಲಿ ತೆರೆಕಂಡಿದ್ದು, ಮೊದಲನೇ ದಿನವೇ ಬಾಕ್ಸ್ ಆಫೀಸಿನಲ್ಲಿ ಬರೋಬ್ಬರಿ 26 ಕೋಟಿ ರೂಪಾಯಿ ಸಂಪಾದಿಸಿದೆ. ಅಕ್ಷಯ್ಕುಮಾರ್, ಕತ್ರೀನಾ ಕೈಫ್, ಅಜಯ್ ದೇವಗನ್ ಮತ್ತು ರಣವೀರ್ ಸಿಂಗ್ ಮುಂಚೂಣಿ ಪಾತ್ರಗಳಲ್ಲಿರುವ ಸೂರ್ಯವಂಶಿಗೆ ಚಿತ್ರಪ್ರಿಯರಿಂದ ಮೆಚ್ಚುಗೆ ಕೂಡ ಸಿಕ್ಕಿದೆ.
ತಮ್ಮ ಚಿತ್ರಕ್ಕೆ ಸಿಕ್ಕಿರುವ ಬಂಪರ್ ಪ್ರತಿಕ್ರಿಯೆಗೆ ಧನ್ಯವಾದ ಹೇಳುತ್ತಾ, ಬಾಲಿವುಡ್ ನಟ ಅಕ್ಷಯ್ಕುಮಾರ್ ಇನ್ಸ್ಟಾಗ್ರಾಂನಲ್ಲಿ ಕುಣಿದು ಕುಪ್ಪಳಿಸುತ್ತಿರುವ ತಮ್ಮ ವಿಡಿಯೋ ತುಣುಕನ್ನು ಶೇರ್ ಮಾಡಿದ್ದಾರೆ. ಜೊತೆಗೆ, "ನನಗೆ ಅತಿಯಾದ ಸಂತಸವಾಗಿದೆ. ನಿಮ್ಮ ಜೀವನಗಳಲ್ಲಿ ಸಿನಿಮಾಗಳನ್ನು ಮತ್ತೆ ಆಲಿಂಗಿಸಿಕೊಂಡಿರುವುದಕ್ಕೆ ತುಂಬಾ ಧನ್ಯವಾದ. ಈ ಸೂಪರ್ ಪ್ರತಿಕ್ರಿಯೆ ಸೂರ್ಯವಂಶಿ ತಂಡಕ್ಕೆ ಮಾತ್ರವಲ್ಲ ನಮ್ಮ ಚಿತ್ರೋದ್ಯಮಕ್ಕೇ ಸಂತೋಷ ಮತ್ತು ಸಮೃದ್ಧಿ ತರುತ್ತದೆ ಎನ್ನುವುದರ ಗುರುತು. ನೀವಿಲ್ಲದೇ ನಾವೇನೂ ಅಲ್ಲ. ನಾನು ಚಿರಋಣಿ" ಎಂದು ಬರೆದಿದ್ದಾರೆ.
ಸೂರ್ಯವಂಶಿ ಚಿತ್ರವು ಒಂದೇ ಸಮಯದಲ್ಲಿ ಭಾರತದಾದ್ಯಂತ 3,500 ಸ್ಕ್ರೀನ್ಗಳಲ್ಲಿ ಮತ್ತು ವಿದೇಶಗಳಲ್ಲಿ 1,500 ಸ್ಕ್ರೀನ್ಗಳಲ್ಲಿ ತೆರೆ ಕಂಡಿದೆ. ಅದರ ಬಿಡುಗಡೆಯು ಹಾಲಿವುಡ್ ಚಿತ್ರ 'ಎಟರ್ನಲ್ಸ್'ನೊಂದಿಗೆ ಆಗಿದ್ದು, ಆ ಚಿತ್ರಕ್ಕೆ ಮೊದಲ ದಿನ 8 ಕೋಟಿ ರೂ. ನಿವ್ವಳ ಆದಾಯ ಲಭಿಸಿದೆ ಎನ್ನಲಾಗಿದೆ. ದೀಪಾವಳಿ ರಜೆಯ ಹಿನ್ನೆಲೆಯಲ್ಲಿ ಉತ್ತಮ ಗಲ್ಲಾಪೆಟ್ಟಿಗೆ ಫಲಿತಾಂಶ ಕಂಡುಬಂದಿದೆ. ಮಹಾರಾಷ್ಟ್ರದಲ್ಲಿ ಚಿತ್ರಮಂದಿರಗಳನ್ನು ಅರ್ಧದಷ್ಟು ಸಾಮರ್ಥ್ಯಕ್ಕೆ ಮಾತ್ರ ತುಂಬುವ ಅವಕಾಶವಿದ್ದರೂ ಇಷ್ಟು ಕಲೆಕ್ಷನ್ ಆಗಿರುವುದು ಸಕಾರಾತ್ಮಕ ಬೆಳವಣಿಗೆ ಎನ್ನಲಾಗಿದೆ. (ಏಜೆನ್ಸೀಸ್)