ಸಾವಿರ ಕೋಟಿ ಕ್ಲಬ್​ ಸೇರಿದ ಬೆನ್ನಲ್ಲೇ ಟಿಕೆಟ್ ದರ ಇಳಿಕೆ! ಕೇವಲ 100 ರೂ.ಗೆ ನೋಡಿ ಪ್ರಭಾಸ್ 'ಕಲ್ಕಿ'​

ವಿಜಯವಾಣಿ - 2024-08-02T110500.186
Published on

ಹೈದರಾಬಾದ್: ಜಾಗತಿಕವಾಗಿ ಜೂ. 27ರಂದು ಬಹುತೇಕ ಚಿತ್ರಮಂದಿಗಳಲ್ಲಿ ಬಿಡುಗಡೆಗೊಂಡ ಟಾಲಿವುಡ್ ರೆಬೆಲ್​ ಸ್ಟಾರ್​, ನಟ ಪ್ರಭಾಸ್​ ಅಭಿನಯದ ಸೈನ್ಸ್​ ಫಿಕ್ಷನ್ ಆಧರಿತ ಪ್ಯಾನ್ ಇಂಡಿಯಾ ‘ಕಲ್ಕಿ 2898 ಎಡಿ’ ಚಿತ್ರ ಇದೀಗ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಗಳಿಕೆ ಕಂಡಿದೆ. ಮೊದಲ ದಿನವೇ ಸಿನಿಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆದ ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರ ಇದೀಗ ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ 1100 ಕೋಟಿ ರೂ. ಕಲೆಕ್ಷನ್​ ಮಾಡಿದೆ. ಸಾವಿರ ಕೋಟಿ ಕ್ಲಬ್​ ಸೇರಿದ ಕಲ್ಕಿ ಈಗ ಟಾಲಿವುಡ್​ನಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದೆ.

ಟಾಲಿವುಡ್​ ರೆಬೆಲ್ ಸ್ಟಾರ್​ ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಬ್ಲಾಕ್‌ಬಸ್ಟರ್ 'ಕಲ್ಕಿ 2898 AD' ಇದೀಗ ಸಾರ್ವಕಾಲಿಕ ದಾಖಲೆ ಬರೆದಿದ್ದು, ಅತಿ ಹೆಚ್ಚು ಹಣ ಗಳಿಸಿದ ಭಾರತೀಯ ಚಲನಚಿತ್ರವಾಗಿ ಹೊರಹೊಮ್ಮಿದೆ. ಈ ವಿಷಯಕ್ಕೆ ಮನದಾಳದಿಂದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಪ್ರಭಾಸ್​, “ನನ್ನ ಅಭಿಮಾನಿಗಳೇ, ನನಗೆ ಇಷ್ಟು ದೊಡ್ಡ ಹಿಟ್ ಕೊಟ್ಟಿದ್ದಕ್ಕಾಗಿ ತುಂಬಾ ಧನ್ಯವಾದಗಳು. ನೀವಿಲ್ಲದೆ ನಾನು ಶೂನ್ಯ. ಈ ಸಿನಿಮಾಗಾಗಿ ನಿರ್ದೇಶಕ ನಾಗ್ ಅಶ್ವಿನ್ ಐದು ವರ್ಷ ತುಂಬಾ ಕಷ್ಟಪಟ್ಟಿದ್ದಾರೆ. ಇಷ್ಟೊಂದು ಹಣವನ್ನು ಧೈರ್ಯದಿಂದ ಚಿತ್ರದ ಮೇಲೆ ಸುರಿದ ನಮ್ಮ ನಿರ್ಮಾಪಕರು ಅಶ್ವಿನಿ ದತ್ ಅವರಿಗೆ ಥ್ಯಾಂಕ್ಯೂ" ಎಂದು ಹೃತ್ಪೂರ್ವಕ ಧನ್ಯವಾದ ಅರ್ಪಿಸಿದ್ದರು. ಇದೆಲ್ಲದರ ಮಧ್ಯೆ ಚಿತ್ರತಂಡ ಏಕಾಏಕಿ ಟಿಕೆಟ್ ದರದಲ್ಲಿ ಕಡಿತಗೊಳಿಸಿದೆ.

ಇದೀಗ ಯಶಸ್ವಿ 6ನೇ ವಾರಕ್ಕೆ ಕಾಲಿಟ್ಟಿರುವ ಕಲ್ಕಿ ಚಿತ್ರವನ್ನು ಪ್ರೇಕ್ಷಕರು ಈಗಾಗಲೇ ಗೆಲ್ಲಿಸಿದ್ದಾರೆ. ಈ ಸಂತೋಷವನ್ನು ಚಿತ್ರರಸಿಕರೊಂದಿಗೆ ಸಂಭ್ರಮಿಸಲು ಸಜ್ಜಾಗಿರುವ ಚಿತ್ರತಂಡ, 500,700ರಿಂದ 1000 ರೂ. ತಲುಪಿದ್ದ ಟಿಕೆಟ್​ ದರವನ್ನು ದಿಢೀರ್​ 100 ರೂಪಾಯಿಗೆ ಇಳಿಸಿದೆ. ಥಿಯೇಟರ್​​ಗಳಲ್ಲಿ ಇನ್ನೂ 'ಕಲ್ಕಿ' ನೋಡದವರಿಗೆ ಈ ಅವಕಾಶ ಕಲ್ಪಿಸಿಕೊಟ್ಟಿರುವ ಚಿತ್ರ ತಯಾರಕರು, ದೇಶಾದ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿ ಕೇವಲ 100 ರೂ.ಗೆ ಸಿನಿಮಾ ನೋಡುವ ಆಫರ್​ ಅನ್ನು ಒದಗಿಸಿದೆ.

ಚಿತ್ರಮಂದಿರಗಳಲ್ಲಿ 100 ರೂ.ಗೆ ಸಿನಿಮಾ ನೋಡುವ ಆಫರ್ ಆಗಸ್ಟ್​ 09ರವರೆಗೆ ಮಾತ್ರ ಎಂಬ ವಿಷಯ ಇಲ್ಲಿ ಗಮನಾರ್ಹ. ಅದಾದ ನಂತರ ಟಿಕೆಟ್ ದರವು ಯತಾಸ್ಥಿತಿಗೆ ಮರಳಲಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net