

ನವದೆಹಲಿ: ಬಾರ್ಬಡೋಸ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಟೀಮ್ ಇಂಡಿಯಾ, 2024ರ ಐಸಿಸಿ ಟಿ20 ವಿಶ್ವಕಪ್ ಚಾಂಪಿಯನ್ಸ್ ಆಗಿ ಹೊರಹೊಮ್ಮಿದ್ದಲ್ಲದೇ 17 ವರ್ಷಗಳ ಬಳಿಕ ಭಾರತಕ್ಕೆ ಟಿ20 ವಿಶ್ವಕಪ್ ಟ್ರೋಫಿಯನ್ನು ತಂದುಕೊಟ್ಟಿದ್ದು ಮರೆಯಲಾಗದ ಕ್ಷಣ. ವಿಶ್ವಕಪ್ ಗೆದ್ದ ಹೀರೋಗಳಿಗೆ ಮುಂಬೈನಲ್ಲಿ ವಿಶೇಷವಾಗಿ ಸನ್ಮಾನಿಸಿ, ಪ್ರಶಸ್ತಿ ಪ್ರದಾನ ಕೂಡ ಮಾಡಲಾಯಿತು. ಭಾರತದ ಕೀರ್ತಿ ಪತಾಕೆ ಎತ್ತಿಹಿಡಿದ ಟೀಮ್ ಇಂಡಿಯಾ ಆಟಗಾರರಿಗೆ ಈ ಗೆಲುವಿನಿಂದ ಯಶಸ್ಸು ಉತ್ತುಂಗಕ್ಕೆ ಏರಿತು. ಎಲ್ಲಿ ಹೋದರೂ ಸನ್ಮಾನ, ಬಹುಮಾನವೇ ತುಂಬಿರುವ ಕಾರಣ, ಟಿ20 ವಿಶ್ವಕಪ್ ಗೆದ್ದ ಹೀರೋಗಳಿಗೆ ಇದರಿಂದ ಹೊರಬರುವುದು ಕೊಂಚ ಕಷ್ಟವೇ. ಸದ್ಯ ಇದನ್ನು ಅರಿತ ಸಕ್ಸಸ್ಫುಲ್ ಕ್ಯಾಪ್ಟನ್ ರೋಹಿತ್ ಶರ್ಮ, ತಮ್ಮ ತಂಡದ ಸದಸ್ಯರಿಗೆ ಕಳಕಳಿಯ ಮನವಿಯೊಂದನ್ನು ಮಾಡಿದ್ದಾರೆ.
ಪ್ರಸಕ್ತ ಅತಿಥೇಯ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿ ಗೆದ್ದಿರುವ ಭಾರತ ತಂಡಕ್ಕೆ ವ್ಯಾಪಕ ಅಭಿನಂದನೆಗಳು ಹರಿದುಬಂದ ಬೆನ್ನಲ್ಲೇ ಇದೀಗ ಇಂದಿನಿಂದ ನಡೆಯಲಿರುವ ಏಕದಿನ ಸರಣಿಯ ಗೆಲುವಿನತ್ತ ಟೀಮ್ ಇಂಡಿಯಾ ಮುಖಮಾಡಿದೆ. ಈ ತಂಡಕ್ಕೆ ನಾಯಕರಾಗಿರುವ ರೋಹಿತ್ ಶರ್ಮ, ಟಿ20 ವಿಶ್ವಕಪ್ ಗೆದ್ದ ರೀತಿಯಲ್ಲೇ ಇಲ್ಲಿಯೂ ತಮ್ಮ ಟೀಮ್ನ ಗೆಲುವಿನೆಡೆಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಕ್ರಿಕೆಟ್ ಅಭಿಮಾನಿಗಳು ಭಾರೀ ಭರವಸೆ ವ್ಯಕ್ತಪಡಿಸಿದ್ದಾರೆ. ಸದ್ಯ ನಾಯಕತ್ವ ವಹಿಸಿರುವ 'ಹಿಟ್ಮ್ಯಾನ್' ತಮ್ಮ ಸಹ ಆಟಗಾರರಿಗೆ ವಿಶ್ವಕಪ್ ಗೆದ್ದ ಸಂಭ್ರಮದಲ್ಲಿಯೇ ಇನ್ನು ಇರಬೇಡಿ, ಅದರಿಂದ ಹೊರಬನ್ನಿ ಎಂದಿದ್ದಾರೆ.
"ವಿಶ್ವಕಪ್ ಗೆದ್ದ ನಂತರ ನಾನು ಚಿಕ್ಕ ವಿರಾಮ ತೆಗೆದುಕೊಂಡೆ. ಭಾರತದಲ್ಲಿರುವ ನಮ್ಮ ಅಭಿಮಾನಿಗಳ ಮಧ್ಯೆ ಟ್ರೋಫಿ ಎತ್ತಿಹಿಡಿದ ದಿನ ನಿಜಕ್ಕೂ ಒಂದೊಳ್ಳೆ ಕ್ಷಣ. ಆದ್ರೆ, ಇದನ್ನೇ ಇಟ್ಟುಕೊಂಡು ನಿಲ್ಲುವುದು ಸರಿಯಲ್ಲ. ಇಲ್ಲಿಂದ ಮುಂದೆ ಹೋಗಬೇಕು. ಮತ್ತಷ್ಟು ಸಾಗಬೇಕು. ಗೆಲುವಿನ ಸಂಭ್ರಮಾಚರಣೆ ಆ ಸಮಯಕ್ಕೆ ಮಾತ್ರ ಸೀಮಿತವಾಗಿತ್ತು. ಸಮಯದ ಜತೆಗೆ ನಾವು ಮುಂದೋಗಬೇಕು" ಎಂದು ತಮ್ಮ ತಂಡದವರಿಗೆ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೂ ಮೊದಲು ರೋಹಿತ್ ಕಿವಿಮಾತು ಹೇಳಿದ್ದಾರೆ,(ಏಜೆನ್ಸೀಸ್).