ಉಪ್ಪಿ ಹುಟ್ಟುಹಬ್ಬಕ್ಕೆ 'ಕಬ್ಜ' ಚಿತ್ರದ ಥೀಮ್ ಪೋಸ್ಟರ್ ...

Kabza - Final
Published on

ಉಪೇಂದ್ರ ಅಭಿನಯಿಸುತ್ತಿರುವ 'ಕಬ್ಜ' ಚಿತ್ರದ ಚಿತ್ರೀಕರಣ ಇದೇ ತಿಂಗಳ ಕೊನೆಯಿಂದ ಪ್ರಾರಂಭವಾಗುವ ನಿರೀಕ್ಷೆ ಇದೆ. ಈ ಮಧ್ಯೆ, ಸೆಪ್ಟೆಂಬರ್ 18ರಂದು ಉಪೇಂದ್ರ ಅವರ ಹುಟ್ಟುಹಬ್ಬವಿದ್ದು, 'ಕಬ್ಜ' ಚಿತ್ರತಂಡವು ಥೀಮ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಉಪೇಂದ್ರ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರುವುದಕ್ಕೆ ಸಜ್ಜಾಗಿದೆ.

ಅಂದಹಾಗೆ, ಈ ಥೀಮ್​ ಪೋಸ್ಟರ್​ ಬಿಡುಗಡೆ ಮಾಡುತ್ತಿರುವವರು ಯಾರು ಗೊತ್ತಾ? ಖ್ಯಾತ ನಿರ್ದೇಶಕ ರಾಮ್​ಗೋಪಾಲ್​ ವರ್ಮಾ. ಅಂಡರ್​​ವರ್ಲ್ಡ್​ ಚಿತ್ರಗಳನ್ಜು ನಿರ್ದೇಶಿಸುವುದಕ್ಕೆ ಹೆಸರಾಗಿರುವ ರಾಮ್​ಗೋಪಾಲ್​ ವರ್ಮಾ, ಈ ಅಂಡರ್​ವರ್ಲ್ಡ್​ ಚಿತ್ರದ ಥೀಮಾ ಪೋಸ್ಟರ್​ನ್ನು ಸೆಪ್ಟೆಂಬರ್​ 17ರ ಸಂಜೆ ಐದು ಗಂಟೆಗೆ ಬಿಡುಗಡೆ ಮಾಡಲಿದ್ದಾರೆ.

'ಕಬ್ಜ' ಚಿತ್ರದ ಚಿತ್ರೀಕರಣ ಈ ವರ್ಷದ ಆರಂಭದಲ್ಲಿ ಶುರುವಾಗಿ, ಶೇ 40ರಷ್ಟು ಮುಕ್ತಾಯವಾಗಿದೆ. ಬೆಂಗಳೂರು, ಹೈದರಾಬಾದ್ ಮುಂತಾದ ಕಡೆ ನಿರ್ಮಿಸಲಾಗಿದ್ದ ಸೆಟ್​​ಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಅಷ್ಟರಲ್ಲಿ ಕರೊನಾ ಹಾವಳಿಯಿಂದ ಲಾಕ್​ಡೌನ್​ ಘೋಷಿಸಲಾದ ಹಿನ್ನೆಲೆಯಲ್ಲಿ ಚಿತ್ರೀಕರಣ ನಿಲ್ಲಿಸಲಾಗಿತ್ತು.

ಇದೀಗ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದ್ದು, ಉಪೇಂದ್ರ ಅವರು ಈ ಚಿತ್ರಕ್ಕಾಗಿ ಪ್ರತಿದಿನ ನಾಲ್ಕು ಘಂಟೆಗೂ ಹೆಚ್ಚು ಕಾಲ ವ್ಯಾಯಾಮ ಮಾಡಿ, ಪಾತ್ರಕ್ಕೆ ಸೂಕ್ತವಾಗಿ ತಮ್ಮ ದೇಹವನ್ನು ರೂಪಿಸಿಕೊಂಡಿದ್ದಾರೆ.

'ಕಬ್ಜ' ಚಿತ್ರಕ್ಕೆ ಆರ್​. ಚಂದ್ರು ಕಥೆ ಬರೆದು ನಿರ್ದೇಶಿಸುತ್ತಿದ್ದು, ಈ ಚಿತ್ರವು ಏಳು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವುದು ವಿಶೇಷ. ಚಿತ್ರದಲ್ಲಿ ಉಪೇಂದ್ರ ಜತೆಗೆ ಕಾಮರಾಜನ್ (ಐ ಮೂವಿ ಖ್ಯಾತಿ), ಜಗಪತಿ ಬಾಬು, ರಾಹುಲ್ ಜಗತಪ್, ಅನೂಪ್ ರೇವಣ್ಣ, ಜಾನ್ ಕೊಕ್ಕೇನ್​, ರಾಹುಲ್ ದೇವ್, ನವೀನ್, ಕೋಟ ಶ್ರೀನಿವಾಸ್ ರಾವ್​, ಜಯಪ್ರಕಾಶ್, ಕಾಟ್ ರಾಜು, ಸುಬ್ಬರಾಜು ಮುಂತಾದವರು ನಟಿಸುತ್ತಿದ್ದಾರೆ.

ಈ ಚಿತ್ರಕ್ಕೆ ರವಿ ಬಸ್ರೂರು ಸಂಗೀತ ಸಂಯೋಜಿಸಿದರೆ, ಎ.ಜೆ.ಶೆಟ್ಟಿ ಛಾಯಾಗ್ರಹಣ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net