ಟಾಲಿವುಡ್​ ಡ್ರಗ್ಸ್ ವ್ಯಸನಿಗಳ ಪಟ್ಟಿ ಕೊಡುತ್ತೇನೆ, ನನಗೆ ಸರ್ಕಾರದಿಂದ ಭದ್ರತೆ ಬೇಕು: ಶ್ರೀರೆಡ್ಡಿ

srireddy-1555309849
Published on

ಹೈದರಾಬಾದ್​: ಸದ್ಯ ಇಡೀ ಭಾರತೀಯ ಸಿನಿಮಾರಂಗದಲ್ಲಿ ಡ್ರಗ್ಸ್ ಮಾಫಿಯಾದ್ದೇ ಚರ್ಚೆ ನಡೆಯುತ್ತಿದೆ. ನಿತ್ಯ ಒಂದಲ್ಲ ಒಂದು ಹೊಸ ಹೊಸ ಸುದ್ದಿ ಹೊರಬರುತ್ತಿವೆ. ಸ್ಟಾರ್ ನಟ ನಟಿಯರ ಹೆಸರೂಗಳೂ ಆಚೆ ಬರುತ್ತಿವೆ. ಇದೀಗ ಟಾಲಿವುಡ್​ ಅಂಗಳದಲ್ಲಿ ಹೊಸ ಬಾಂಬ್​ ಹಾಕಲು ಕಾಂಟ್ರವರ್ಸಿಯಲ್​ ನಟಿ ಶ್ರೀರೆಡ್ಡಿ ಮುಂದಾಗಿದ್ದಾರೆ.

ಸ್ಯಾಂಡಲ್​ವುಡ್​ನಲ್ಲಿ ರಾಗಿಣಿ ಮತ್ತು ಸಂಜನಾ ಗಲ್ರಾನಿ ಅವರಿಗೆ ಸಿಸಿಬಿ ಈಗಾಗಲೇ ಬಿಸಿ ಮುಟ್ಟಿಸಿದೆ. ಪರಪ್ಪನ ಅಗ್ರಹಾರದಲ್ಲಿ ರಾಗಿಣಿ ಮುದ್ದೆ ಮುರಿಯುತ್ತಿದ್ದಾರೆ. ಇತ್ತ ಗಲ್ರಾನಿಯನ್ನು ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.

ಹೀಗಿರುವಾಗಲೇ ‘ಟಾಲಿವುಡ್​ನಲ್ಲಿಯೂ ಸಾಕಷ್ಟು ಸ್ಟಾರ್ ಕಲಾವಿದರು ಡ್ರಗ್​ ಸೇವನೆಯಲ್ಲಿ ಮುಂದಿದ್ದಾರೆ. ಅವರೆಲ್ಲರ ಪಟ್ಟಿ ನೀಡುತ್ತೇನೆ. ನನಗೆ ಸರ್ಕಾರದಿಂದ ಬೆಂಬಲ ಮತ್ತು ಭದ್ರತೆ ಬೇಕು’ ಎಂದು ಶ್ರೀ ರೆಡ್ಡಿ ಹೊಸ ಬಾಂಬ್​ ಹಾಕಿದ್ದಾರೆ.

‘ಟಾಲಿವುಡ್​ನಲ್ಲಿ ಟಾಪ್​ ನಟ ನಟಿಯರು ಡ್ರಗ್​ ವ್ಯಸನದಲ್ಲಿ ಪಾಲ್ಗೊಂಡಿದ್ದಾರೆ. ಆ ಎಲ್ಲರ ಹೆಸರುಗಳು ನನಗೆ ಗೊತ್ತಿದೆ. ಅವರ ಹೆಸರು ಹೇಳುತ್ತಿದ್ದಂತೆ ನನ್ನ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ತೆಲಂಗಾಣ ಸರ್ಕಾರ ನನಗೆ ಭದ್ರತೆ ನೀಡುವ ಜವಾಬ್ದಾರಿ ಹೊತ್ತರೆ ನಾನು ಪೂರ್ಣ ಪಟ್ಟಿಯನ್ನು ನೀಡುವೆ’ ಎಂದು ಸರ್ಕಾರದ ಮುಂದೆಯೇ ಪ್ರಶ್ನೆ ಇಟ್ಟಿದ್ದಾರೆ.

ಅದೇ ರೀತಿ ರಾಕುಲ್​ ಪ್ರೀತ್​ಗೆ ಎನ್​ಸಿಬಿ ವಿಚಾರಣೆಗೆ ಒಳಪಡಿಸಿದರೆ, ಅವರ ಮೂಲಕ ಡ್ರಗ್ ಮಾಫಿಯಾದಲ್ಲಿ ಪಾಲ್ಗೊಂಡ ಸ್ಟಾರ್ ಕಲಾವಿದರ ಬಣ್ಣ ಕಳಚುತ್ತದೆ ಎಂದೂ ಹೇಳಕೆ ಕೊಟ್ಟಿದ್ದಾರೆ ಶ್ರೀರೆಡ್ಡಿ. ಈ ಮೊದಲು ಸೌತ್​ ಸ್ಟಾರ್​ಗಳಾದ ನಾಣಿ, ವಿಶಾಲ್, ರಾಘವ್​ ಲಾರೆನ್ಸ್ ಸೇರಿ ಹಲವು ನಟರ ವಿರುದ್ಧ ಕಾಸ್ಟಿಂಗ್​ ಕೌಚ್​ ಕುರಿತು ಆರೋಪ ಮಾಡಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net