ವಿಷ್ಣುವರ್ಧನ್ ಸ್ಮಾರಕ ಭವನ ನಿರ್ಮಾಣಕ್ಕೆ ಸಿಎಂ ಬಿಎಸ್​​ವೈ ಭೂಮಿ ಪೂಜೆ

vishwardhana smaraka bhumi puja
Published on

ಆನ್ ಲೈನ್ ಮೂಲಕ ಕಾರ್ಯಕ್ರಮ * ಅಪ್ರತಿಮ ನಟ ಯುವ ಜನರಿಗೆ ಸ್ಫೂರ್ತಿ

ಬೆಂಗಳೂರು: ಮೈಸೂರು ತಾಲೂಕು ಎಚ್.ಡಿ.ಕೋಟೆ ರಸ್ತೆಯ ಹಾಲಾಳು ಗ್ರಾಮದ ಬಳಿ ನಿರ್ಮಿಸಲಿರುವ ಖ್ಯಾತ ನಟ ಡಾ.ವಿಷ್ಣುವರ್ಧನ್ ಸ್ಮಾರಕ ಭವನ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆನ್ ಲೈನ್ ಮುಖೇನ ಭೂಮಿ ಪೂಜೆ ಮಂಗಳವಾರ ನೆರವೇರಿಸಿದರು.

ಡಾ.ವಿಷ್ಣುವರ್ಧನ್ ಅವರ 70ನೇ ವರ್ಷದ ಜನ್ಮದಿನದಂದು ಹುಟ್ಟೂರಿನಲ್ಲಿ ಈ ಸ್ಮಾರಕ ನಿರ್ಮಾಣವಾಗುತ್ತಿದ್ದು, ಪೊಲೀಸ್ ವಸತಿ ಗೃಹ ನಿರ್ಮಾಣ ಸಂಸ್ಥೆಗೆ ಈ ಕಾಮಗಾರಿ ಜವಾಬ್ದಾರಿ ಒಪ್ಪಿಸಲಾಗಿದೆ. ಬಜೆಟ್ ನಲ್ಲಿ 11 ಕೋಟಿ ರೂ. ಮಂಜೂರಾಗಿದ್ದು, 5 ಕೋಟಿ ರೂ ಅನುದಾನ ಬಿಡುಗಡೆಯಾಗಿದೆ. ಈಗಾಗಲೇ ತಡವಾಗಿರುವ ತ್ವರಿತ ಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸಿಎಂ ಸೂಚಿಸಿದರು.

ಸ್ಫೂರ್ತಿ ಸೆಲೆ: ನಾಡು ಕಂಡ ಅಪ್ರತಿಮ ಕಲಾವಿದರಲ್ಲಿ ಒಬ್ಬರಾದ ವಿಷ್ಣುವರ್ಧನ್ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದಲ್ಲದೆ, ವ್ಯಕ್ತಿಗತವಾಗಿ ಶಿಸ್ತು, ಸಂಯಮ, ಮಾನವೀಯ ಶ್ರೇಷ್ಠ ಗುಣಗಳನ್ನು ಹೊಂದಿ, ಯುವಜನರಿಗೆ ಸ್ಫೂರ್ತಿಯಾಗಿದ್ದರು. ಅವರ ಪತ್ನಿ, ಪದ್ಮಶ್ರೀ ಡಾ.ಭಾರತಿ ವಿಷ್ಣುವರ್ಧನ್ ಪಂಚ ಭಾಷೆ ತಾರೆಯಾಗಿ ಪ್ರಸಿದ್ಧರು, ನಮ್ಯನಡುವೆ ಇರುವುದು ಸಂತೋಷದ ಸಂಗತಿ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಎಸ್.ಟಿ.ಸೋಮಶೇಖರ್, ಡಾ.ಕೆ.ಸುಧಾಕರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net