

ಬೆಂಗಳೂರು: ಸ್ಯಾಂಡಲ್ವುಡ್ನ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಮತ್ತು ನಟಿ ಆರಾಧನಾ ರಾಮ್ ಮುಖ್ಯಭೂಮಿಕೆಯಲ್ಲಿರುವ ಬಹುನಿರೀಕ್ಷಿತ 'ಕಾಟೇರ' ಸಿನಿಮಾ ಇಂದು ರಾಜ್ಯವ್ಯಾಪಿ ಬಹುತೇಕ ಚಿತ್ರಮಂದಿರಗಳಲ್ಲಿ ಭರ್ಜರಿ ಓಪನಿಂಗ್ ಪಡೆದಿದ್ದು, ಮೊದಲ ದಿನದ ಶೋನಲ್ಲಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳು ಪಡದುಕೊಳ್ಳುವಲ್ಲಿ ಮುಂಚೂಣಿಯಲ್ಲಿದೆ. ಇದೀಗ ಸಿನಿಮಾದಲ್ಲಿನ ದೃಶ್ಯಗಳಿಗಿಂತ ಪರದೆಯ ಮೇಲೆ ಬಂದ ಗೌರವ ಸಮರ್ಪಣೆ ಸಾಲುಗಳನ್ನು ಕಂಡ ಕನ್ನಡಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತರುಣ್ ಸುಧೀರ್ ನಿರ್ದೇಶಿಸಿರುವ, ರಾಕ್ಲೈನ್ ವೆಂಕಟೇಶ್ ನಿರ್ಮಾಣ ಮಾಡಿರುವ 'ಕಾಟೇರ' ಚಿತ್ರಕ್ಕೆ ಉತ್ತಮ ಓಪನಿಂಗ್ ಸಿಕ್ಕಿದ್ದು, ಎಂದಿನಂತೆ ತಮ್ಮ ನೆಚ್ಚಿನ ನಟನ ಚಿತ್ರವನ್ನು ದೊಡ್ಡ ಪರದೆಯ ಮೇಲೆ ಕಣ್ತುಂಬಿಕೊಳ್ಳಲು ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸದ್ಯ ಚಿತ್ರಮಂದಿರಗಳತ್ತ ದೌಡಾಯಿಸುತ್ತಿದ್ದಾರೆ.
ಈ ಮಧ್ಯೆ ಚಿತ್ರತಂಡ ಇತ್ತೀಚೆಗಷ್ಟೇ ಕಾಡಾನೆ ದಾಳಿಗೆ ಮರಣ ಹೊಂದಿದ 8 ಬಾರಿ ಅಂಬಾರಿ ಹೊತ್ತ ದಸರಾ ಆನೆ ಅರ್ಜುನನಿಗೆ ಬೆಳ್ಳಿ ಪರದೆಯ ಮೇಲೆ ಸಲ್ಲಿಸಿದ ಗೌರವ ಸಮರ್ಪಣೆಗೆ ಪ್ರೇಕ್ಷಕರು ಸಂತಸ ಪಟ್ಟಿದ್ದಾರೆ.
ಚಿತ್ರತಂಡ ಪರದೆಯ ಮೇಲೆ ನಟ ದರ್ಶನ್ ಅವರು ಅರ್ಜುನನ ಪಕ್ಕ ನಿಂತಿರುವ ಫೋಟೋ ಹಾಕಿ, ಅದರ ಪಕ್ಕದಲ್ಲಿ, "ನಾಡ ದೇವಿ ಚಾಮುಂಡಿಯ ಅಂಬಾರಿಯನ್ನು ಹೊತ್ತು ದಸರೆಯ ವೈಭವವನ್ನು ಜಗತ್ತಿನಾದ್ಯಂತ ಕಣ್ತುಂಬಿಸಿ, ಕಣ್ಮರೆಯಾದ ದೈತ್ಯ ಮತ್ತು ದೈವ ಜೀವ 'ಅರ್ಜುನ'..ಇದಕ್ಕೆ ನಮ್ಮ ಕಾಟೇರ ಚಿತ್ರ ಅರ್ಪಣೆ" ಎಂದು ಬರೆದಿದ್ದು, ಸದ್ಯ ಈ ಸಾಲುಗಳು ಪ್ರೇಕ್ಷಕರನ್ನು ಭಾವುಕರನ್ನಾಗಿ ಮಾಡಿದೆ.