More

    ವಿಮಾನ ನಿಲ್ದಾಣಗಳಿಗೆ ಗಣ್ಯರ ಹೆಸರು ಶಿಫಾರಸು ಅಂಗೀಕರಿಸಲಿ; ಕೇಂದ್ರಕ್ಕೆ ಡಾ. ವಿಜಯ ಸಂಕೇಶ್ವರ ಮನವಿ

    ಹುಬ್ಬಳ್ಳಿ: ಕರ್ನಾಟಕ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ಮುಖ್ಯಸ್ಥ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ ಅವರು ಹುಬ್ಬಳ್ಳಿ ಸೇರಿ ರಾಜ್ಯದ ನಾಲ್ಕು ಪ್ರಮುಖ ವಿಮಾನ ನಿಲ್ದಾಣಗಳಿಗೆ ಗಣ್ಯರ ಹೆಸರು ಇಡುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದರು. ಇದಕ್ಕಾಗಿ ಸಾಕಷ್ಟು ಹೋರಾಟಗಳನ್ನೂ ಕೈಗೊಂಡಿದ್ದರು.

    ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚನ್ನಮ್ಮ, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಹಾಗೂ ವಿಜಯಪುರ ವಿಮಾನ ನಿಲ್ದಾಣಕ್ಕೆ ಜಗಜ್ಯೋತಿ ಶ್ರೀ ಬಸವೇಶ್ವರರ ಹೆಸರು ಇಡುವಂತೆ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ಕೋರಿತ್ತು. ಅನೇಕ ಸಂಘ ಸಂಸ್ಥೆಗಳು ಕೂಡಾ ಈ ಹೆಸರು ಮುಖ್ಯವಾಹಿನಿಗೆ ಬರಲು ಕಾರಣೀಕರ್ತರಾಗಿದ್ದವು.

    ಈ ಎಲ್ಲ ಪ್ರಯತ್ನಗಳ ಫಲವಾಗಿ ಮನವಿಯನ್ನು ರಾಜ್ಯ ಸರ್ಕಾರ ಪುರಸ್ಕರಿಸಿದೆ. ಸೂಚಿತ ಹೆಸರನ್ನು ವಿಮಾನ ನಿಲ್ದಾಣಗಳಿಗೆ ಇಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಆದ್ದರಿಂದ ಕೇಂದ್ರ ಸರ್ಕಾರವು ಶಿಫಾರಸಿಗೆ ಶೀಘ್ರವೇ ಅಂಗೀಕಾರ ನೀಡಬೇಕೆಂದು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ಕೋರಿದ್ದಾರೆ.

    ಮರು ನಾಮಕರಣಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ: ಶಿವಮೊಗ್ಗ, ವಿಜಯಪುರ, ಹುಬ್ಬಳ್ಳಿ ಹಾಗೂ ಬೆಳಗಾವಿ ವಿಮಾನ ನಿಲ್ದಾಣಗಳಿಗೆ ಮಹನೀಯರ ಹೆಸರಿಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ನಿರ್ಣಯಕ್ಕೆ ರಾಜ್ಯ ವಿಧಾನಸಭೆ ಡಿ. 14ರಂದು ಸರ್ವಾನುಮತದ ಒಪ್ಪಿಗೆ ಸೂಚಿಸಿತ್ತು. ಶಾಸಕರಾದ ಅರವಿಂದ ಬೆಲ್ಲದ ಹಾಗೂ ಎನ್.ಎಚ್. ಕೋನರಡ್ಡಿ ನಿರ್ಣಯ ಕೈಗೊಳ್ಳುವ ಬೇಡಿಕೆ ಇಟ್ಟಿದ್ದರು. ಅಧಿವೇಶನದಲ್ಲಿಯೇ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು. ಇದಕ್ಕೆ ಸಿಎಂ ಸಹಮತ ವ್ಯಕ್ತಪಡಿಸಿದರೆ, ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ನಿರ್ಣಯ ಮಂಡಿಸಿದ್ದರು. ಪ್ರತಿಪಕ್ಷದವರೂ ನಿರ್ಣಯವನ್ನು ಸ್ವಾಗತಿಸಿದ್ದರು. ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಬೆಳಗಾವಿ ನಿಲ್ದಾಣಕ್ಕೆ ಕಿತ್ತೂರು ರಾಣಿ ಚನ್ನಮ್ಮ, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಹಾಗೂ ವಿಜಯಪುರ ವಿಮಾನ ನಿಲ್ದಾಣಕ್ಕೆ ಶ್ರೀ ಜಗಜ್ಯೋತಿ ಬಸವೇಶ್ವರರ ನಾಮಕರಣ ಮಾಡಲು ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts