ಏನಿದು ಬ್ರೋ? ನಟ, ಟಿವಿಕೆ ಪಕ್ಷದ ಸಂಸ್ಥಾಪಕ ವಿಜಯ್​ ವಿರುದ್ಧ ವಾಗ್ದಾಳಿ ನಡೆಸಿದ ಕೆ. ಅಣ್ಣಾಮಲೈ! K Annamalai

K Annamalai
Published on

K Annamalai : ತಮಿಳುನಾಡಿನಲ್ಲಿ "ತ್ರಿಭಾಷಾ ನೀತಿ" ಕುರಿತು ಕೇಂದ್ರ ಸರ್ಕಾರ ಮತ್ತು ಡಿಎಂಕೆ ಸರ್ಕಾರಗಳ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ.

ಮುಖ್ಯಮಂತ್ರಿ ಸ್ಟಾಲಿನ್ ಸೇರಿದಂತೆ ಇಡೀ ಡಿಎಂಕೆ ಪಕ್ಷ, ಕೇಂದ್ರ ಸರ್ಕಾರ ಹಿಂದಿ ಭಾಷೆಯನ್ನು ನಮ್ಮ ಮೇಲೆ ಬಲವಂತವಾಗಿ ಹೇರಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಭಾಗವಾಗಿ ಹಿಂದಿಯನ್ನು ಬಳಸಲು ಒತ್ತಾಯಿಸಲಾಗುತ್ತಿದೆ ಎಂದು ಎಲ್ಲ ತಮಿಳು ಪಕ್ಷಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ. ಈ ಸಂಬಂಧ ನಟ ಹಾಗೂ ರಾಜಕಾರಣಿ ವಿಜಯ್​ ನೀಡಿರುವ ಹೇಳಿಕೆಯನ್ನು ಇತ್ತೀಚೆಗಷ್ಟೇ ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಅವರು ಟೀಕಿಸಿದ್ದಾರೆ.

ಹಿಂದಿ ಭಾಷೆಯ ವಿಷಯದಲ್ಲಿ ವಿಜಯ್ ಅವರು ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ ಎಂದು ಅಣ್ಣಾಮಲೈ ಆರೋಪಿಸಿದರು. ವಿಜಯ್ ಅವರನ್ನು "ಸಹೋದರ" ಎಂದು ಸಂಭೋದಿಸಿದ ಅಣ್ಣಾಮಲೈ, ವಿಜಯ್ ಅವರಿಗೆ ಸಂಬಂಧಿದ "ವಿಜಯ್ ವಿದ್ಯಾಶ್ರಮ" ಶಾಲೆಯಲ್ಲಿ ಏಕೆ ತ್ರಿಭಾಷಾ ವ್ಯವಸ್ಥೆಯನ್ನು ಅನುಸರಿಸುತ್ತಿದೆ ಎಂದು ಪ್ರಶ್ನಿಸಿದರು. ಒಳಗೆ ಮಾತ್ರ ತ್ರಿಭಾಷ ನೀತಿ ಅನುಸರಿಸಿ, ಹೊರಗೆ ಮಾತ್ರ ವಿಜಯ್ ಅವರ ಪಕ್ಷ ತಮಿಳು ವೆಟ್ರಿ ಕಳಗಂ (ಟಿವಿಕೆ) ದ್ವಿಭಾಷಾ ವ್ಯವಸ್ಥೆಯ ಬಗ್ಗೆ ಮಾತನಾಡುತ್ತಿದೆ. ಇದು ಅವರ ಪಕ್ಷದ "ದ್ವಿಮುಖ ನೀತಿ" ಎಂದು ಅಣ್ಣಾಮಲೈ ಜರಿದಿದ್ದಾರೆ.

ನಾನು ವಿಜಯ್‌ ಅವರಿಗೆ ಒಂದು ವಿಷಯ ಹೇಳಲು ಬಯಸುತ್ತೇನೆ. ಸಹೋದರ ನೀವು ಏನನ್ನು ಬೋಧಿಸುತ್ತಿರೋ ಅದನ್ನೇ ಅಭ್ಯಾಸ ಮಾಡಿ. ನೀವು ಯಾಕೆ ಸುಳ್ಳು ಹೇಳುತ್ತಿದ್ದೀರಿ? ನೀವು ನಡೆಸುತ್ತಿರುವ ವಿಜಯ ವಿದ್ಯಾಶ್ರಮ ಶಾಲೆಯಲ್ಲಿ ಮೂರು ಭಾಷೆಗಳಿವೆ. ಆದರೆ, ನಿಮ್ಮ ಪಕ್ಷದ ಕಾರ್ಯಕರ್ತರ ಮಕ್ಕಳು ಮಾತ್ರ ಎರಡು ಭಾಷೆಗಳಲ್ಲಿ ಕಲಿಯಬೇಕೇ? ಎಂದು ಕೊಯಮತ್ತೂರಿನಲ್ಲಿ ನಡೆದ ಸಭೆಯಲ್ಲಿ ಅಣ್ಣಾಮಲೈ ಹೇಳಿದರು.

ಇದಕ್ಕೂ ಮೊದಲು ವಿಜಯ್ ಅವರು ತ್ರಿಭಾಷಾ ನೀತಿ ಮತ್ತು ಹಿಂದಿಯನ್ನು ಟೀಕಿಸಿದ್ದರು. ಟಿವಿಕೆಯ ಮೊದಲ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದರು. ಈ ವಿಷಯದ ಬಗ್ಗೆ ಭಿನ್ನಾಭಿಪ್ರಾಯ ಹೊಂದಿರುವಂತೆ ನಟಿಸುತ್ತಾ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. ಅಲ್ಲದೆ, ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಕುರಿತು ಕೇಂದ್ರದ ನಿಲುವನ್ನು ಟೀಕಿಸಿದ ವಿಜಯ್​, ರಾಜಕೀಯ ಹೋರಾಟವನ್ನು ಮಗುವಿನ ಹೋರಾಟಕ್ಕೆ ಹೋಲಿಸಿದರು. ಬಿಜೆಪಿ ಮತ್ತು ಡಿಎಂಕೆ ಸಾಮಾಜಿಕ ಮಾಧ್ಯಮದಲ್ಲಿ "ಹ್ಯಾಶ್‌ಟ್ಯಾಗ್‌"ಗಳೊಂದಿಗೆ ಆಟವಾಡುತ್ತಿವೆ ಎಂದು ವ್ಯಂಗ್ಯವಾಡಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net