ಇನ್ನು ಎಲ್ರಿಗೂ ಸಿಗುತ್ತೆ ಪೆನ್ಶನ್; ಸಾರ್ವತ್ರಿಕ ಪಿಂಚಣಿ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಸಿದ್ಧತೆ

Pension
Published on

ನವದೆಹಲಿ: ಅಸಂಘಟಿತ ವಲಯದ ಜತೆಗೆ ದೇಶದ ಎಲ್ಲ ಹಿರಿಯ ನಾಗರಿಕರ ಬದುಕಿಗೆ ಆರ್ಥಿಕತೆಯ ಸುರಕ್ಷಾ ಕವಚದ ರೂಪದಲ್ಲಿ ಸಾಮಾಜಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ರಾಷ್ಟ್ರವ್ಯಾಪಿ ಸ್ವಯಂಪ್ರೇರಿತ ಪಿಂಚಣಿ ಯೋಜನೆ ರೂಪಿಸುವ ಕಾರ್ಯಕ್ಕೆ ಈಗಾಗಲೇ ಚಾಲನೆ ದೊರೆತಿರುವುದಾಗಿ ಕೇಂದ್ರ ಕಾರ್ವಿುಕ ಸಚಿವಾಲಯದ ಮೂಲಗಳು ಖಚಿತಪಡಿಸಿವೆ.

ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವವರು, ವ್ಯಾಪಾರಿಗಳು, ಸ್ವಯಂ ಉದ್ಯೋಗಿಗಳು ಸೇರಿದಂತೆ 18 ರಿಂದ 60 ವರ್ಷ ವಯೋಮಾನದೊಳಗಿನ ಎಲ್ಲಾ ನಾಗರಿಕರು ಈ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್​ಒ) ಪಿಂಚಣಿ ಯೋಜನೆಯ ರೂಪುರೇಷೆ ಸಿದ್ಧಪಡಿಸುತ್ತಿದೆ. ಇದು ಸ್ವಯಂಪ್ರೇರಿತ ಮತ್ತು ಕೊಡುಗೆ ನೀಡುವ ಯೋಜನೆಯಾಗಿದೆ. ಇದು ಯಾವುದೇ ಉದ್ಯೋಗಕ್ಕೆ ಸಂಬಂಧಿಸಿರುವುದಿಲ್ಲವಾದ್ದರಿಂದ ಪ್ರತಿಯೊಬ್ಬರೂ ಪಿಂಚಣಿ ಯೋಜನೆಯಲ್ಲಿ ನೋಂದಣೆ ಮಾಡಿಕೊಳ್ಳಬಹುದೆಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಯೋಜನೆಗಳ ಸಮಾಗಮ: ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್​ಧನ್ ಮತ್ತು ರಾಷ್ಟ್ರೀಯ ಪಿಂಚಣಿ ಯೋಜನೆ - ವರ್ತಕರು ಸೇರಿದಂತೆ ಹಲವು ಪಿಂಚಣಿ ಯೋಜನೆಗಳನ್ನು ಒಂದುಗೂಡಿಸಿ ಸಮಗ್ರ ಪಿಂಚಣಿ ಯೋಜನೆ ರೂಪಿಸಲು ಸರ್ಕಾರ ಮುಂದಾಗಿದೆ.

ವಂತಿಗೆ ಎಷ್ಟು? ಪೆನ್ಷನ್ ಎಷ್ಟು?: ಯೋಜನೆಯಡಿ 60 ವರ್ಷದ ಬಳಿಕ ಪ್ರತಿ ತಿಂಗಳೂ 3000 ರೂ. ಪಿಂಚಣಿ ದೊರೆಯಲಿದೆ. ಪಿಂಚಣಿ ಪಡೆಯುವುದಕ್ಕೆ ಪ್ರತಿ ತಿಂಗಳೂ ಕನಿಷ್ಠ 55 ರೂ.ನಿಂದ 200 ರೂ.ವರೆಗೆ ಕೊಡುಗೆ ನೀಡಬೇಕಾಗುತ್ತದೆ. ಕೇಂದ್ರ ಸರ್ಕಾರ ಇಷ್ಟೇ ಹಣವನ್ನು ನೀಡುತ್ತದೆ. ಪ್ರಸ್ತುತ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಪಿಎಫ್​ಆರ್​ಡಿಎ) ನಿಯಂತ್ರಣದಲ್ಲಿರುವ ಅಟಲ್ ಪೆನ್ಶನ್ ಯೋಜನೆಯೂ ಹೊಸ ಸಾರ್ವತ್ರಿಕ ಪಿಂಚಣಿ ಯೋಜನೆಯೊಂದಿಗೆ ಸೇರ್ಪಡೆಯಾಗಲಿದೆ ಎನ್ನಲಾಗುತ್ತಿದೆ.

Pension

ಭಾರತದಲ್ಲಿ ಸ್ಥಿತಿ: ಭಾರತದಲ್ಲಿ ಪ್ರಸ್ತುತ ಸಾಮಾಜಿಕ ಭದ್ರತಾ ವ್ಯವಸ್ಥೆ ಭವಿಷ್ಯ ನಿಧಿ ಯೋಜನೆ ಅವಲಂಬಿಸಿದೆ. ಇದರ ಜತೆ ವೃದ್ಧಾಪ್ಯ ಪಿಂಚಣಿ ಯೋಜನೆಗಳು ಮತ್ತು ಕೆಲವು ನಿರ್ದಿಷ್ಟ ಫಲಾನುಭವಿಗಳಿಗೆ ಆರೋಗ್ಯ ವಿಮೆ ಸೌಲಭ್ಯ ದೊರೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ವತ್ರಿಕ ಪಿಂಚಣಿ ಯೋಜನೆ ಸಮಗ್ರ ಮತ್ತು ಸುಸ್ಥಿರ ಪಿಂಚಣಿ ವ್ಯವಸ್ಥೆಯನ್ನು ರೂಪಿಸುವ ಗುರಿಯನ್ನು ಹೊಂದಿದೆ.

ಎಷ್ಟು ಜನರಿಗೆ ಲಾಭ?: ದೇಶದಲ್ಲಿ 2036ರ ವೇಳೆಗೆ 60 ವರ್ಷ ಮೇಲ್ಪಟ್ಟವರ ಸಂಖ್ಯೆ 22.7 ಕೋಟಿಗೆ ತಲುಪಲಿದೆ. ಇದು ಒಟ್ಟು ಜನಸಂಖ್ಯೆಯ ಶೇ.15ರಷ್ಟು ಇರಲಿದೆ. ಈ ಸಂಖ್ಯೆ 2050ರ ವೇಳೆಗೆ 34.7 ಕೋಟಿಗೆ ತಲುಪಲಿದೆ. ಈ ಹಿನ್ನೆಲೆಯಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಸಾಮಾಜಿಕ ಭದ್ರತೆ ಒದಗಿಸಲು ಈ ಯೋಜನೆ ನೆರವಾಗಲಿದೆ.

ಯಾವ್ಯಾವ ರಾಷ್ಟ್ರಗಳಲ್ಲಿದೆ?: ಪ್ರಸ್ತುತ ಅಮೆರಿಕ, ಕೆನಡಾ, ರಷ್ಯಾ, ಚೀನಾ ಮತ್ತು ಯುರೋಪಿನ ಬಹುತೇಕ ರಾಷ್ಟ್ರಗಳು ಪಿಂಚಣಿ, ಆರೋಗ್ಯ ರಕ್ಷಣೆ ಮತ್ತು ನಿರುದ್ಯೋಗ ಭತ್ಯೆ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಗಳನ್ನು ಹೊಂದಿದೆ. ಡೆನ್ಮಾರ್ಕ್, ಸ್ವೀಡನ್, ನಾರ್ವೆ, ನೆದರ್ಲ್ಯಾಂಡ್ಸ್ ಮತ್ತು ನ್ಯೂಜಿಲೆಂಡ್​ನಂತಹ ದೇಶಗಳು ತಮ್ಮ ಹಿರಿಯ ನಾಗರಿಕರಿಗೆ ಆರ್ಥಿಕ ಭದ್ರತೆ ಒದಗಿಸಲು ಸಾರ್ವತ್ರಿಕ ಪಿಂಚಣಿ ಯೋಜನೆಗಳನ್ನು ಒದಗಿಸುತ್ತಿವೆ.

ಯೋಜನೆ ಅಗತ್ಯ?: ಸದ್ಯ ಅಸಂಘಟಿತ ವಲಯದಲ್ಲಿರುವವರು, ನಿರ್ಮಾಣ ಕಾರ್ವಿುಕರು, ಗಿಗ್ ಕೆಲಸಗಾರರು ಸರ್ಕಾರದ ದೊಡ್ಡ ಉಳಿತಾಯ ಯೋಜನೆಗಳಲ್ಲಿ ಪ್ರವೇಶ ಹೊಂದಿಲ್ಲ. ಹೀಗಾಗಿ ಅವರಿಗೆ ಸಾಮಾಜಿಕ ಭದ್ರತೆ ಒದಗಿಸುವುದು ಕೇಂದ್ರದ ಆಶಯ.

ಯಾರಿಗೆ ಅನ್ವಯ?: ಅಸಂಘಟಿತ ವಲಯದ ನೌಕರರು, ವೇತನದಾರರು, ಸ್ವಯಂ ಉದ್ಯೋಗಿಗಳಿಗೂ ಯೋಜನೆ ಅನ್ವಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net