ಪ್ರಧಾನಿ ಮೋದಿಗೆ ಉಡುಗೊರೆಯಾಗಿ ಹೊಸ ತಳಿಯ ತಾವರೆ; 'ನಮೋಃ 108' ಅನಾವರಣ

Namoh 108
Published on

ಉತ್ತರಪ್ರದೇಶ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೆಸರನ್ನು ನೆನಪಿಸುವಂಥ ಹೊಸ ತಳಿಯ ತಾವರೆಯೊಂದನ್ನು ಅಭಿವೃದ್ಧಿ ಪಡಿಸಲಾಗಿದೆ. ವಿಶೇಷವಾದ ಈ ತಾವರೆಯನ್ನು ಇಂದು ಅಧಿಕೃತವಾಗಿ ಅನಾವರಣಗೊಳಿಸಲಾಗಿದೆ.

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್ ಇಂದು ಉತ್ತರಪ್ರದೇಶದ ಲಕ್ನೋದಲ್ಲಿ ಈ ವಿನೂತನ ತಾವರೆಯ ತಳಿಯನ್ನು ಅನಾವರಣಗೊಳಿಸಿದರು. ಲಕ್ನೋದ ನ್ಯಾಷನಲ್ ಬೊಟಾನಿಕಲ್ ರಿಸರ್ಚ್ ಇನ್​ಸ್ಟಿಟ್ಯೂಟ್ ಈ ತಳಿಯನ್ನು ಅಭಿವೃದ್ಧಿಪಡಿಸಿದೆ.

ಈ ವಿಶಿಷ್ಟ ಕಮಲದ ಪ್ರಭೇದವನ್ನು "ನಮೋಃ 108" ಎಂದು ಹೆಸರಿಸಿದ್ದಕ್ಕಾಗಿ ಜಿತೇಂದ್ರ ಸಿಂಗ್ ಎನ್​ಬಿಆರ್​ಐಯನ್ನು ಶ್ಲಾಘಿಸಿದರು. ಇದು ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅವರ ಅಧಿಕಾರಾವಧಿಯ ಹತ್ತನೇ ವರ್ಷದಲ್ಲಿ ಬಂದಿದೆ. ಇದು ನರೇಂದ್ರ ಮೋದಿಯವರ ಅವಿರತ ಉತ್ಸಾಹಕ್ಕೆ ದೊಡ್ಡ ಉಡುಗೊರೆ ಎಂದು ಅವರು ಹೇಳಿದರು.

ನೆಲಂಬೊ ನ್ಯೂಸಿಫೆರ ಎಂಬ ವೈಜ್ಞಾನಿಕ ಹೆಸರು ಹೊಂದಿರುವ ಈ ಕಮಲದ ಹೂವು 108 ದಳಗಳನ್ನು ಹೊಂದಿದೆ. ಗರಿಷ್ಠ ಹತ್ತು ಇಂಚು ವ್ಯಾಸ ಗಾತ್ರದ ಈ ಹೂವು ಮಾರ್ಚ್​-ಡಿಸೆಂಬರ್​ನಲ್ಲಿ ಅರಳುತ್ತದೆ. ಇದನ್ನು ಸರೋವರ, ತೊಟ್ಟಿ, ಕುಂಡದಲ್ಲೂ ಬೆಳೆಯಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net