

Jemimah Rodrigues : ಆಕೆ ತನ್ನ ನಾಲ್ಕನೇ ವಯಸ್ಸಿನಲ್ಲೇ ಬ್ಯಾಟ್ ಹಿಡಿದಳು. ಈ ವೇಳೆ ಆಕೆಯ ಬೆನ್ನಿಗೆ ನಿಂತಿದ್ದು ಅವಳ ತಂದೆ. ತನಗೆ ಸಿಕ್ಕ ಪ್ರೋತ್ಸಾಹದಿಂದ ಬಂದ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡಳು. ಕಲಿಕೆಯ ಹಾದಿಯಲ್ಲಿ ಎದುರಾದ ಎಲ್ಲ ಸವಾಲುಗಳನ್ನು ಮೆಟ್ಟಿನಿಂತು ಹಂತ ಹಂತವಾಗಿ ಬೆಳೆದಳು. ಅಂತಿಮವಾಗಿ ಭಾರತ ತಂಡದಲ್ಲಿ ಆಡುವ ಮಟ್ಟಕ್ಕೆ ಆಕೆ ಬೆಳೆದಳು. ಈಕೆ ಕೇವಲ ಬ್ಯಾಟ್ಸ್‌ಮನ್ ಮಾತ್ರವಲ್ಲ, ತಂಡಕ್ಕೆ ಅಗತ್ಯವಿದ್ದಾಗ ತನ್ನ ಸ್ಪಿನ್ ಬೌಲಿಂಗ್ನಿಂದ ಮ್ಯಾಜಿಕ್ ಕೂಡ ಮಾಡಬಲ್ಲರು. ಅಲ್ಲದೇ, ಮಿಂಚಿನಂತೆ ಡೈವ್ ಹೊಡೆದ ಕ್ಯಾಚ್ ಕೂಡ ಹಿಡಿಯಬಲ್ಲಳು.
ಯಾವುದೇ ದಾರಿಯಲ್ಲಿ ಏರಿಳಿತಗಳು ಇರುವಂತೆ ಆಕೆಯ ಜೀವನದಲ್ಲೂ ಅನಿರೀಕ್ಷಿತ ತಿರುವುಗಳಿದ್ದವು. ಕೆಲವು ವರ್ಷಗಳ ಹಿಂದೆ, ಯಾವುದೋ ಕಾರಣಕ್ಕಾಗಿ ಜಿಮ್ಖಾನಾ ಕ್ಲಬ್‌ನಲ್ಲಿ ಆಕೆಯ ಸದಸ್ಯತ್ವವನ್ನೇ ರದ್ದುಗೊಳಿಸಲಾಯಿತು. ಆಕೆಯ ತಂದೆ ಧಾರ್ಮಿಕ ಸಭೆಗಳನ್ನು ನಡೆಸುವ ಮೂಲಕ ಆಟಗಾರರ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂಬ ಕಾರಣಕ್ಕೆ ಆಕೆಯನ್ನು ಮೈದಾನಕ್ಕೆ ಬರದಂತೆ ಬಹಿಷ್ಕರಿಸಲಾಯಿತು. ಇದು ಆಕೆಯನ್ನು ಖಿನ್ನತೆಗೆ ದೂಡಿತು. ತುಂಬಾ ಖಿನ್ನತೆಗೆ ಒಳಗಾಗಿ ಕೊನೆಗೂ ಕ್ರಿಕೆಟ್ ಬಿಡಬೇಕೆಂಬ ನಿರ್ಧಾರಕ್ಕೆ ಬಂದಿದ್ದಳು. ಆ ಸಮಯದಲ್ಲಿ, ಆಕೆಯ ಸ್ನೇಹಿತರು ಅವಳ ಬೆಂಬಲಕ್ಕೆ ನಿಂತರು. ಆಕೆಯ ಚಿಕಿತ್ಸೆಗೆ ನೆರವಾಗಿದ್ದಲ್ಲದೆ, ಬ್ಯಾಟ್‌ನೊಂದಿಗೆ ಮೈದಾನದಲ್ಲಿ ಮತ್ತೆ ಮಿಂಚಲು ಪ್ರೋತ್ಸಾಹಿಸಿದರು. ಅದೇ ರೀತಿ ಆಕೆಯೂ ಚೇತರಿಸಿಕೊಂಡಳು. ಏನೇ ಸವಾಲುಗಳು ಬಂದರು ಕೂಡ ದೇಶಕ್ಕಾಗಿ ಆಡುವ ತನ್ನ ದೃಢಸಂಕಲ್ಪವನ್ನು ಮಾತ್ರ ಆಕೆ ಬಿಟ್ಟುಕೊಡಲಿಲ್ಲ. ಆಕೆಯ ನಿರಂತರ ಶ್ರಮ ಇಂದು ದೇಶವೇ ಹೆಮ್ಮೆಪಡುವಂತೆ ಮಾಡಿದೆ. ಅಂದಹಾಗೆ, ಇಷ್ಟೊತ್ತು ನಾವು ಹೇಳಿದ್ದು ಬೇರೆ ಯಾರ ಬಗ್ಗೆಯೂ ಅಲ್ಲ, ನಿನ್ನೆ ಆಸ್ಟ್ರೇಲಿಯಾ ವಿರುದ್ಧ ಮಹಿಳಾ ಏಕದಿನ ವಿಶ್ವಕಪ್ನ ಸೆಮಿಫೈನಲ್ ಪಂದ್ಯದಲ್ಲಿ ಅಜೇಯ ಶತಕ ಸಿಡಿಸಿ ಭಾರತ ಫೈನಲ್ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದ ಜೆಮಿಮಾ ರೊಡ್ರಿಗಸ್ ( Jemimah Rodrigues ) ಅವರ ಬಗ್ಗೆ.
ಐಸಿಸಿ ಮಹಿಳಾ ಏಕದಿನ ವಿಶ್ವಕಪ್-2025ರ ಸೆಮಿಫೈನಲ್‌ನಲ್ಲಿ ಭಾರತ ತಂಡವು ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ವೀರೋಚಿತ ಹೋರಾಟದೊಂದಿಗೆ ಸೋಲಿಸಿತು. ಬೃಹತ್ ಗುರಿ ಮತ್ತು ಹೆಡ್-ಟು-ಹೆಡ್ ದಾಖಲೆಗಳ ಒತ್ತಡದ ಹೊರತಾಗಿಯೂ, ತವರಿನಲ್ಲಿ (ನವಿ ಮುಂಬೈ) ಪ್ರೇಕ್ಷಕರ ಬೆಂಬಲದೊಂದಿಗೆ ತಮ್ಮ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನವನ್ನು ರೊಡ್ರಿಗಸ್ ನೀಡಿದರು. ಅನಿರೀಕ್ಷಿತವಾಗಿ ಒನ್ ಡೌನ್ನಲ್ಲಿ ಬ್ಯಾಟಿಂಗ್ ಮಾಡಬೇಕಾಗಿ ಬಂದರೂ, ಆತ್ಮವಿಶ್ವಾಸದಿಂದಲೇ ಕ್ರೀಸ್ಗೆ ಪ್ರವೇಶಿಸಿ ಅಜೇಯ ಶತಕ ಗಳಿಸಿದರು. 134 ಎಸೆತಗಳಲ್ಲಿ 14 ಬೌಂಡರಿಗಳ ಸಹಾಯದಿಂದ 127 ರನ್ ಗಳಿಸಿ ಅಜೇಯರಾಗಿ ಉಳಿದರು. ಭಾರತದ ಫೈನಲ್ ಪ್ರವೇಶವನ್ನು ಖಚಿತಪಡಿಸುವ ಮೂಲಕ ಪಂದ್ಯದ ಆಟಗಾರ್ತಿ ಪ್ರಶಸ್ತಿಯನ್ನು ಪಡೆದರು.
ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ರೊಡ್ರಿಗಸ್ ಪಂದ್ಯದ ಬಳಿಕ ತುಂಬಾ ಭಾವುಕರಾಗಿ ಕಣ್ಣೀರು ಕೂಡ ಹಾಕಿದರು. ಕಳೆದ ಕೆಲವು ತಿಂಗಳುಗಳಿಂದ ಅವಳು ಅನುಭವಿಸಿದ ಮಾನಸಿಕ ಯಾತನೆಯೇ ಈ ಕಣ್ಣೀರಿಗೆ ಕಾರಣ. ಪಂದ್ಯವನ್ನು ಗೆಲ್ಲಿಸಿದ ಬಳಿಕ ತನ್ನ ತಂದೆಯನ್ನು ಅಪ್ಪಿಕೊಂಡು ಭಾವುಕರಾದರು.
ಪಂದ್ಯದ ಆಟಗಾರ್ತಿ ಪ್ರಶಸ್ತಿ ಪಡೆದ ನಂತರ ಮಾತನಾಡಿದ ಜೆಮಿಮಾ ರೊಡ್ರಿಗಸ್, ನಾನು ಯೇಸುವಿಗೆ ಧನ್ಯವಾದ ಹೇಳುತ್ತೇನೆ. ಅವರ ಬೆಂಬಲವಿಲ್ಲದಿದ್ದರೆ, ಇದು ನನ್ನಿಂದ ಸಾಧ್ಯವಾಗುತ್ತಿರಲಿಲ್ಲ. ಪಂದ್ಯದ ಕೊನೆಯ ಕ್ಷಣಗಳಲ್ಲಿ, ನೀವು ದೃಢವಾಗಿ ನಿಂತರೆ, ದೇವರೇ ನಿಮಗಾಗಿ ಹೋರಾಡುತ್ತಾನೆ ಎಂಬ ಸಾಲುಗಳನ್ನು ನಾನು ಬೈಬಲ್‌ನಲ್ಲಿ ಮತ್ತೆ ಮತ್ತೆ ಓದಿದೆ. ನಾನಿಲ್ಲಿ ಸ್ವಂತವಾಗಿ ಏನನ್ನೂ ಮಾಡದ ಕಾರಣ ನಾನು ಗೆದ್ದೆ ಎಂದು ಹೇಳುವುದಿಲ್ಲ. ಏಕೆಂದರೆ, ಈ ಪಂದ್ಯಾವಳಿಯ ಉದ್ದಕ್ಕೂ ನಾನು ತುಂಬಾ ಮಾನಸಿಕ ನೋವನ್ನು ಅನುಭವಿಸಿದ್ದೇನೆ. ನಾನು ಬಹುತೇಕ ಪ್ರತಿದಿನ ಅಳುತ್ತಿದ್ದೆ. ಆದರೆ, ದೇವರು ಎಲ್ಲವನ್ನೂ ನೋಡಿಕೊಂಡನು ಎಂದು ರೊಡ್ರಿಗಸ್ ಭಾವುಕರಾದರು.
ಪಂದ್ಯಕ್ಕೂ ಮುನ್ನ ನಾನು ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುತ್ತೇನೆ ಎಂದು ನನಗೆ ತಿಳಿದಿರಲಿಲ್ಲ. ಇಲ್ಲಿ ನನ್ನ ಶತಕ ಮುಖ್ಯವಲ್ಲ. ತಂಡದ ಗೆಲುವು ಮಾತ್ರ ಮುಖ್ಯ. ನಾನು ಕ್ರೀಸ್‌ನಲ್ಲಿ ಕಷ್ಟಪಡುತ್ತಿದ್ದಾಗ, ನನ್ನ ತಂಡದ ಸದಸ್ಯರು ನನ್ನ ಬೆಂಬಲಕ್ಕೆ ನಿಂತರು. ಅಭಿಮಾನಿಗಳ ಪ್ರೋತ್ಸಾಹ ನನ್ನ ನೋವನ್ನು ದೂರ ಮಾಡಿತು. ಅದಕ್ಕೇ ನಾನು ಗೆದ್ದಾಗ ನನ್ನ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ ಮತ್ತು ತುಂಬಾ ಅಳುತ್ತಿದ್ದೆ ಎಂದು ರೊಡ್ರಿಗಸ್ ಭಾವುಕರಾಗಿ ಹೇಳಿದರು. (ಏಜೆನ್ಸೀಸ್)