ನ್ಯೂಯಾರ್ಕ್: 16 ವರ್ಷದ ಜೀವಿಕಾ ಬೆಂಕಿ ( Jeevika Benki ) ನ್ಯೂಯಾರ್ಕ್ ರಾಜ್ಯದ ರಾಜಧಾನಿ ಆಲ್ಬನಿಯಲ್ಲಿ ನಡೆದ “ಮಿಸ್ ಇಂಡಿಯಾ” ಸ್ಪರ್ಧೆಯಲ್ಲಿ ಗೆದ್ದಿದ್ದಾರೆ. ಈ ಸ್ಪರ್ಧೆ ಕೇವಲ ಸೌಂದರ್ಯದ ಸ್ಪರ್ಧೆ ಅಲ್ಲ. ಇದರಲ್ಲಿ ಅಭ್ಯರ್ಥಿಯ ಶೈಕ್ಷಣಿಕ, ಕ್ರೀಡೆ, ಕಲೆ, ನೃತ್ಯ, ನಾಯಕತ್ವ, ಸಮಾಜ ಸೇವೆ, ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಘಟನೆಗಳ ಪರಿಜ್ಞಾನ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಳನ್ನು ಪರೀಕ್ಷಿಸಿ ಆಯ್ಕೆ ಮಾಡಲಾಗುತ್ತದೆ. ಜೀವಿಕಾ ಬೆಂಕಿ ಅಕ್ಟೋಬರ್ 27 ರಂದು ನಡೆಯಲಿರುವ “ಮಿಸ್ ಫೆಸ್ಟಿವಲ್ ಆಫ್ ನೇಷನ್ಸ್ ” ಸ್ಪರ್ಧೆಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಲಿದ್ದಾರೆ.
“ಮಿಸ್ ಫೆಸ್ಟಿವಲ್ ಆಫ್ ನೇಷನ್ಸ್” ಒಂದು ಸಣ್ಣ ಪ್ರಮಾಣದ “ಮಿಸ್ ಯುನಿವರ್ಸ್” ತರಹದ ಸ್ಪರ್ಧೆಯಾಗಿದ್ದು ಇದರಲ್ಲಿ 30ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. 53 ವರ್ಷಗಳ ಇತಿಹಾಸವಿರುವ “ಫೆಸ್ಟಿವಲ್ ಆಫ್ ನೇಷನ್ಸ್” ನಲ್ಲಿ “ಮಿಸ್ ಇಂಡಿಯಾ” ಗೆದ್ದ ಮೊಟ್ಟಮೊದಲ ಕನ್ನಡತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾಳೆ. ಅಪ್ಪಟ ಕನ್ನಡ ಪ್ರೇಮಿ ಬೆಂಕಿ ಬಸಣ್ಣ ಮತ್ತು ಉಮಾ ಇವರ ಪುತ್ರಿ ಜೀವಿಕಾ ಬೆಂಕಿ ಈಗ ನಿಸ್ಕಯುನಾ ಸರ್ಕಾರಿ ಹೈಸ್ಕೂಲ್ನಲ್ಲಿ 11ನೇ ತರಗತಿ ಓದುತ್ತಿದ್ದಾಳೆ. ಮುಂದೆ “ಪೈಲಟ್” ಆಗುವ ಕನಸು ಹೊಂದಿರುವ ಜೀವಿಕಾ, ತನ್ನ ಹೈಸ್ಕೂಲ್ ಅಭ್ಯಾಸದ ಜೊತೆಗೆ ವೀಕೆಂಡ್ಗಳಲ್ಲಿ ಈಗಾಗಲೇ ರಿಚ್ಮೊರ್ ಫ್ಲೈಟ್ ಸ್ಕೂಲ್ನಲ್ಲಿ ಚಿಕ್ಕ ವಿಮಾನಗಳನ್ನು ಹಾರಿಸುವ ತರಬೇತಿ ಪಡೆಯುತ್ತಿದ್ದಾಳೆ.
ಹೈಸ್ಕೂಲಿನ ಟೆನ್ನಿಸ್ ಮತ್ತು ಲಕ್ರಾಸ್ ತಂಡಗಳ ಕ್ಯಾಪ್ಟನ್ ಆಗಿ ನಾಯಕತ್ವದ ಗುಣ ಪ್ರದರ್ಶಿಸುತ್ತಿದ್ದಾಳೆ. ಸ್ಥಳೀಯ ಅಲ್ಬನಿ ಕನ್ನಡ ಸಂಘದ ಯೂಥ್ ಕ್ಲಬ್ನಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾಳೆ. ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ನಾವಿಕ ಸಂಸ್ಥೆ ರೋಟರಿ ಕ್ಲಬ್ ಮತ್ತು ಪಬ್ಲಿಕ್ ಟಿವಿಯ “ಜ್ಞಾನ ದೀವಿಗೆ” ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಕರ್ನಾಟಕದ ಹಳ್ಳಿಯ ಎಸ್ಎಸ್ಎಲ್ಸಿ ಮಕ್ಕಳಿಗೆ ಟ್ಯಾಬ್ಲೆಟ್ ಹಂಚುವ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾಳೆ.
“ಮಿಸ್ ಫೆಸ್ಟಿವಲ್ ಆಫ್ ನೇಷನ್ಸ್” ನ ಮೊದಲ ಹಂತದ ಸ್ಪರ್ಧೆ ಅಕ್ಟೋಬರ್ 14 ರಂದು ನಡೆಯಿತು. ಇದರ ಕೊನೆಯ ಸ್ಪರ್ಧೆ ಅಕ್ಟೋಬರ್ 27ರ ಭಾನುವಾರದಂದು ಸಾವಿರಾರು ಪ್ರೇಕ್ಷಕರ ಮುಂದೆ ಆಲ್ಬನಿಯ ಎಂಪೈರ್ ಸ್ಟೇಟ್ ಪ್ಲಾಜದ ಕನ್ವೆನ್ಷನ್ ಸೆಂಟರ್ನಲ್ಲಿ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಜೀವಿಕಾ ಗೆದ್ದು “ಮಿಸ್ ಫೆಸ್ಟಿವಲ್ ಆಫ್ ನೇಷನ್ಸ್ ” ಗೆಲ್ಲಲಿ ಎಂದು ನಾವೆಲ್ಲರೂ ಹಾರೈಸುತ್ತೇವೆ.