ಕಾಲಕ್ಕೆ ಯಾರೂ ಹೊರತಲ್ಲ ದೈವವೂ ಸಹ

Maharshi Valmiki
Published on
ಸಕಾಲಿಕ
ಹುತ್ತಗಟ್ಟದೇ ಚಿತ್ತ ಮತ್ತೆ ಕೆತ್ತಿತೇನು
ಪುರುಷೋತ್ತಮನ ಆ ಅಂಥ ರೂಪ-ರೇಖೆ?

ಅಡಿಗರ ಪದ್ಯದ ಸಾಲುಗಳಿವು. ಪ್ರಕೃತಿಯ ಸಹಜ ಶಿಶುವಾಗಿದ್ದ ನಿಷಾದನು ತನ್ನ ಚಿತ್ತವನ್ನು ಮತ್ತೆ ಮತ್ತೆ ಹುತ್ತ ಕಟ್ಟಿಸಿಕೊಂಡು ಕೆತ್ತಿದ ರೂಪವೇ ಶ್ರೀರಾಮನದು.

ಬೇಟೆಯ ವೃತ್ತಿಯಿಂದ ಬಂದಂತಹ ರತ್ನಾಕರ ವಾಲ್ಮೀಕಿಯಾಗಿದ್ದು ಯಾಕೆ? ಮತ್ತು ಹೇಗೆ? ಎಂಬ ಪ್ರಶ್ನೆಗಳ ಮೂಲಕ ರಾಮಾಯಣವನ್ನು ನೋಡುವುದಾದರೆ ಅದು ಬರೀ ರಾಮನ ಆಯಣ ಎನಿಸುವುದಿಲ್ಲ. ಬದಲಾಗಿ ಪ್ರಕೃತಿ, ಮಾನವ, ವಾನರ, ರಾಕ್ಷಸರ ಕದನವಾಗಿಯೂ ಕಾಣಿಸುತ್ತದೆ. ವಾಲ್ಮೀಕಿಯು ನಿಷಾದತನದಿಂದ ಸಂತತನದವರೆಗಿನ ದೀರ್ಘ ಕದನವೆನಿಸುತ್ತದೆ. ವಾಲ್ಮೀಕಿಗೆ ಬರೀ ರಾಮನ ಕಥೆಯನ್ನು ಹೇಳುವುದು ಮುಖ್ಯವಾಗಿಲ್ಲ. ಆತನ ತಂದೆಯ, ಸೋದರರ, ಪ್ರಜೆಗಳ ಮತ್ತು ಆತನ ಅಧೀನಕ್ಕೆ ಒಳಪಡದ ವಾನರರ ಕಥೆಯನ್ನು ಹೇಳುವುದು ಮುಖ್ಯವಾಗಿದೆ. ಹೀಗಾಗಿ ವಾಲ್ಮೀಕಿ ಎಲ್ಲಿಯೂ ರಾಮನನ್ನು ಪವಾಡಪುರುಷನನ್ನಾಗಿ ಚಿತ್ರಿಸಿಲ್ಲ. ಆತನೂ ನಮ್ಮಂತೆ ಕಷ್ಟಗಳನ್ನು, ನೋವನ್ನು, ವಿರಹವನ್ನು ಅನುಭವಿಸಿದ ನಂತರವೇ ತನ್ನ ರಾಜ್ಯಕ್ಕೆ ಮರಳುವುದು. ಕಾಡಲ್ಲಿದ್ದೂ ರಾವಣನನ್ನು ಗೆದ್ದ ರಾಮ ನಾಡಲಿದ್ದೂ, ಸಿಂಹಾಸನ, ಸೈನ್ಯ ಎಲ್ಲವೂ ಇದ್ದು ತನ್ನ ಮಕ್ಕಳು ಸೋಲುವ ಒಂದು ಅನುಭವವನ್ನು ಪಡೆದದ್ದು ಅಥವಾ ಕಲ್ಪಿಸಿಕೊಟ್ಟದ್ದು ವಾಲ್ಮೀಕಿಯ ಲೋಕದೃಷ್ಟಿಯೇ ಆಗಿದೆ. ನಿಸರ್ಗದ ಶಿಶುವಾಗಿ ಬೆಳೆದ ವಾಲ್ಮೀಕಿ ಅಂತಿಮವಾಗಿ ಒಪ್ಪಿಕೊಂಡದ್ದು ನಿಸರ್ಗನ್ಯಾಯವನ್ನೇ!

ದಶರಥ ರಾಮನ ಮತ್ತು ಲವಕುಶರ ತಲೆಮಾರುಗಳಿಗೆ ಸಾಕ್ಷಿಪ್ರಜ್ಞೆಯಂತೆ ವಾಲ್ಮೀಕಿ ತನ್ನ ರಾಮಾಯಣವನ್ನು ಸೃಜಿಸಿದ್ದಾನೆ. ಸಾಹಿತ್ಯ ಎನ್ನುವುದು ಕೇವಲ ಮಾನವನ ಗೆಲವುಗಳಲ್ಲ. ಅಲ್ಲಿ ಸೋಲುಗಳೂ ಇರುತ್ತವೆ ಎನ್ನುವುದಕ್ಕೆ ದಶರಥ, ರಾಮ, ರಾವಣರನ್ನು ಒಂದು ಪಾತ್ರರೂಪದಲ್ಲಿ ಚಿತ್ರಿಸಿದ ವಾಲ್ಮೀಕಿಯ ದಾರ್ಶನಿಕತೆಯನ್ನು ತಲೆಮಾರುಗಳ ಹಿನ್ನೆಲೆಯಲ್ಲಿ ನಾವು ರ್ಚಚಿಸಿಲ್ಲ. ಸಾಹಿತ್ಯವನ್ನು ಬರೀ ದೇವರ ಕೃಪೆಗಾಗಿ, ಮೋಕ್ಷಕ್ಕಾಗಿ, ಹೊಗಳಿಕೆಗಾಗಿ ಮೀಸಲಿಟ್ಟ ಕಾಲದಲ್ಲಿ ವಾಲ್ಮೀಕಿ ಆ ಸಾಹಿತ್ಯವನ್ನು ‘ಮಾನವ ಚರಿತ್ರೆ’ಯನ್ನಾಗಿಸಿದ. ಹೀಗಾಗಿಯೇ ರಾಮಾಯಣ ಮನುಷ್ಯರನ್ನು ದೈವತ್ವಕ್ಕೇರಿಸಿದ ಪ್ರಥಮ ಲಿಖಿತ ಸಾಹಿತ್ಯವಾಗಿದೆ.

ರಾಮನ ಆಸ್ಥಾನಕವಿ ಚ್ಯವನ. ಆದರೆ ಆತನಿಗೆ ರಾಮನ ಕಥೆಯನ್ನು ಬರೆಯಲು ಸಾಧ್ಯವಾಗಲಿಲ್ಲ. ರಾಮನ ಗುಣ-ದೋಷಗಳನ್ನು ಹೇಳುವ ಧೈರ್ಯವೂ ಆತನಿಗಿರಲಿಲ್ಲ. ದಶರಥನ ರಾಜ್ಯದ ಮೂಲಕ ರಾಮನನ್ನು ನೋಡುವ ಸಂದರ್ಭವನ್ನು ಆ ಕವಿ ಕಲ್ಪಿಸಿಕೊಳ್ಳಬಹುದೆ ಹೊರತು ಅದಕ್ಕಿಂತ ಭಿನ್ನವಾಗಿ ಅಲ್ಲ. ಆದರೆ ವಾಲ್ಮೀಕಿಯದು ಸ್ವತಂತ್ರ ವ್ಯಕ್ತಿತ್ವ, ಬುಡಕಟ್ಟಿನ ಸಂಸ್ಕೃತಿಯೇ ಹಾಗೇ. ಯಾರ ಅಧೀನಕ್ಕೂ ಒಳಗಾಗದ ಜೀವನ ವಿಧಾನ ಅವರದು. ಆ ಸಂಸ್ಕೃತಿಯಿಂದ ಬಂದಂಥ ವಾಲ್ಮೀಕಿಯಿಂದ ನಮ್ಮ ಸಂಸ್ಕೃತ ಮೀಮಾಂಸೆ ಬಹಳಷ್ಟು ಪಡೆದಿದೆ. ಆದರೆ, ನಮ್ಮ ಕಾವ್ಯ ಮೀಮಾಂಸೆ ಅದನ್ನು ನೆನಪಿಸಿಕೊಂಡಿಲ್ಲ. ಭಾರತದ ಮೊದಲ ಕಾವ್ಯವೇ ಬುಡಕಟ್ಟು ಕಾವ್ಯ ಎನ್ನುವುದನ್ನು ಮತ್ತೆ ಮತ್ತೆ ನೆನಪಿಸಬೇಕಾಗಿದೆ. ನಿಸರ್ಗದಿಂದ ಹುಟ್ಟಿದ ಈ ಅನುಭವ ಲೋಕವೇ ಮುಂದೆ ನಮ್ಮ ನಾಗರಿಕ ಸಮಾಜದ ಬಹುಮುಖ್ಯ ಮಾದರಿಗಳಾಗಿದ್ದರೆ, ಇಂದು ರಾಮ ರಾಜಕಾರಣಕ್ಕೆ ಬಳಕೆಯಾಗುತ್ತಿರಲಿಲ್ಲ. ಪರ ಮತ್ತು ವಿರೋಧ ಎನ್ನುವ ಎರಡು ಅತಿರೇಕಗಳ ಮಧ್ಯೆ ವಾಲ್ಮೀಕಿಯ ರಾಮ ಕಳೆದುಹೋಗುತ್ತಿದ್ದಾನೆ. ಸಕುಟುಂಬ ಪರಿವಾರ ಸಮೇತನಾಗಿದ್ದ ರಾಮ ಇಂದು ಒಂಟಿಯಾಗಿದ್ದಾನೆ. ರಾಮಾಯಣವನ್ನು ವಾಲ್ಮೀಕಿಯ ಆಶಯಕ್ಕೆ ತಕ್ಕಂತೆ ಧ್ಯಾನಿಸದೆ, ನಮ್ಮ ನಮ್ಮ ಹಿತಾಸಕ್ತಿಗಳಿಗೆ ಅನುಗುಣ ‘ಪಾತ್ರ ಕೇಂದ್ರಿತವಾಗಿ’ ಮಾಡುತ್ತಿದ್ದೇವೆ. ಇದರಿಂದಾಗಿ ಹನುಮಂತನೂ ಏಕಾಂಗಿಯಾಗಿದ್ದಾನೆ.

ಇಂತಹ ಬಿಕ್ಕಟ್ಟುಗಳಲ್ಲಿ ವಾಲ್ಮೀಕಿಯ ಜಯಂತಿಯನ್ನು ನಾವು ಆಚರಿಸುತ್ತಿದ್ದೇವೆ. ಈ ನೆಲ ಎಲ್ಲವನ್ನೂ ಪುರಾಣದ ಮೂಲಕ, ಚರಿತ್ರೆಯ ಮೂಲಕ ನಿರ್ವಚನ ಮಾಡಲು ಪ್ರಯತ್ನಿಸಿದೆ ನಿಜ. ಆದರೆ ನಮಗೆ ಇಂದು ಬೇಕಾಗಿರುವ ವರ್ತಮಾನದ ಚರಿತ್ರೆಯೇ ಹೊರತು ಭೂತದ ಚರಿತ್ರೆಯೂ ಅಲ್ಲ. ಇತಿಹಾಸ ಬರೀ ದೈವತ್ವದಿಂದ, ಸಮೃದ್ಧಿ, ಸುಭಿಕ್ಷೆಯಿಂದ ಕೂಡಿರಲಿಲ್ಲ. ಅಲ್ಲಲ್ಲಿ ಅದು ಮನುಷ್ಯನನ್ನು ಅತ್ಯಂತ ದಾರುಣವಾಗಿ ಹಿಂಸಿಸಿದೆ. ಆ ಹಿಂಸೆಯಿಂದ ಹೊರತಾದ ಕಾವ್ಯವನ್ನು, ಬದುಕನ್ನು ನಮಗೆ ವಾಲ್ಮೀಕಿಯೂ ಕೊಟ್ಟಿದ್ದಾನೆ. ವಾಲ್ಮೀಕಿಯ ಮನಸ್ಸು ಎಷ್ಟು ಪ್ರಬುದ್ಧವೆಂದರೆ ‘ಕೈಕೆ’ಯ ಪಾತ್ರವನ್ನು ಎಲ್ಲಿಯೂ ದೂಷಿಸಿಲ್ಲ. ಮನುಷ್ಯ ಸ್ವಭಾವದ ಸಹಜತೆಗಳನ್ನು ಮೊದಲ ಕಾವ್ಯವೇ ನಮಗೆ ಪರಿಚಯಿಸಿದೆ. ಹೀಗಾಗಿಯೇ ನಮ್ಮಲ್ಲಿ ಇಷ್ಟೊಂದು ರಾಮಾಯಣಗಳು ಹುಟ್ಟಿವೆ. ಆದರೆ ಅಲ್ಲೆಲ್ಲ ನಮಗೆ ಕಾಡುವುದು ದಾರ್ಶನಿಕ ವಾಲ್ಮೀಕಿ. ಅದಕ್ಕೆಂದೆ ಕುವೆಂಪು ಹೇಳುವುದು, ‘ವಾಲ್ಮೀಕಿ ರಚಿಸಿದ ಈ ರಾಮಾಯಣ ಒಂದು ದಂಡಕಾರಣ್ಯ. ಉದ್ಯಾನವಲ್ಲ. ಯಾಕೆಂದರೆ ಅರಣ್ಯದ ಬೃಹತ್ ಸಂಪತ್ತು ವಿಪತ್ತುಗಳು ಉದ್ಯಾನಕ್ಕೆ ಎಂದಿಗೂ ಬರಲಾರವು. ಆದರೆ ಅವರು ದಂಡಕಾರಣ್ಯಕ್ಕೆ ದಾರಿ ಕಡಿದಿದ್ದಾರೆ’ ಎಂದು. ಆದರೆ ಈ ದಂಡಕಾರಣ್ಯದಲ್ಲಿ ದಾರಿ ತಪ್ಪದೆ ಹೇಗೆ ಸಂಚರಿಸಬೇಕು. ಅಲ್ಲಿ ನಿಜವಾದ ಮರ ಯಾವುದು? ಬಂದಳಿಕೆ ಯಾವುದು? ಕೋಗಿಲೆ ಯಾವುದು? ಅದರಂತೆ ವೇಷ ಹಾಕಿಕೊಂಡಿರುವ ಅನ್ಯಪಕ್ಷಿ ಯಾವುದು? ಎನ್ನುವುದನ್ನು ವಾಲ್ಮೀಕಿಯನ್ನು ಪೂಜಿಸುವವರು, ಆರಾಧಿಸುವವರು ಯೋಚಿಸಬೇಕಿದೆ. ಸಾಂಪ್ರದಾಯಿಕ ನೋಟಗಳಿಂದ ರಾಮಾಯಣವನ್ನು ನೋಡದೆ ಬುಡಕಟ್ಟಿನ ಒಂದು ಲೋಕದೃಷ್ಟಿಯೆಂದು ಅದನ್ನು ಭಾವಿಸಿದರೆ, ಅಲ್ಲಿ ನಮಗೆ ಸಿಗುವ ಮಾದರಿಗಳು ತುಂಬ ಭಿನ್ನವಾಗಿವೆ. ಒಬ್ಬ ನಿಷಾದನ ರಾಜನ ಕಲ್ಪನೆ, ರಾಜ್ಯದ ಕಲ್ಪನೆ, ಪ್ರಜೆಗಳ ಕಲ್ಪನೆಯನ್ನು ವಾಲ್ಮೀಕಿ ನಮಗೆ ಕೊಟ್ಟಿದ್ದಾನೆ. ಅದನ್ನು ನಾವು ಯಥಾವತ್ತಾಗಿ ಅಲ್ಲದೆ, ನಮ್ಮ ಕಾಲದ ಮನೋಧರ್ಮಕ್ಕೆ ಅನುಗುಣವಾಗಿ ಅದನ್ನು ರೂಪಾಂತರಿಸಿಕೊಳ್ಳಬೇಕಿದೆ. ಆಗ ಇವೆಲ್ಲವೂ ನಮ್ಮ ಪೂರ್ವಚರಿತ್ರೆಯ ಮಾದರಿಗಳಾಗಿ ಕಾಣುತ್ತವೆ. ಅಂತಹ ಮಾದರಿಯ ರಾಮಾಯಣವನ್ನು ಮಹಾಕವಿ ಕುವೆಂಪು ನಮಗೆ ಕೊಟ್ಟಿದ್ದಾರೆ. ಭಿನ್ನಗೊಳಿಸಿ ನೋಡುವ ಅಗತ್ಯಕ್ಕಿಂತಲೂ ಇಡಿಯಾಗಿ ನೋಡುವ ಅಗತ್ಯವನ್ನು ರಾಮಾಯಣವೂ ಒತ್ತಾಯಿಸುತ್ತದೆ. ರಾಮ-ರಾವಣ ಎರಡೂ ವಾಲ್ಮೀಕಿಯ ಕಲ್ಪನೆಗಳೇ, ನಮ್ಮ ನಡುವಿರುವ ಜೀವನ ವಿಧಾನಗಳೇ ಇವಾಗಿವೆ. ಇದನ್ನು ಬಹುಹಿಂದೆಯೇ ರಾಮಾಯಣದ ಮೂಲಕ ಹೇಳಿದ್ದಾರೆ. ಪಶು, ಪಕ್ಷಿ, ಪ್ರಾಣಿ, ನದಿ, ಬೆಟ್ಟ, ಸಸ್ಯಸಂಪತ್ತು, ಗುಹ, ಹನುಮಂತ, ಶಬರಿ, ವಾಲಿ, ಸುಗ್ರೀವ, ಜಟಾಯು ಎಲ್ಲವೂ ಇಲ್ಲಿ ಪಯಣಿಸುವ ಕಥೆಗಳೇ. ಹೀಗಾಗಿ ರಾಮಾಯಣ ಇರುವುದಲ್ಲ. ಅದು ಆಗುವ ಪ್ರಕ್ರಿಯೆ. ಇಂತಹ ಪ್ರಕ್ರಿಯೆಗೆ ಒಳಗು ಮಾಡುತ್ತಿರುವ ವಾಲ್ಮೀಕಿಯ ಲೋಕದೃಷ್ಟಿ, ಕಾವ್ಯಶಕ್ತಿ ಅಸಾಧಾರಣವಾದದ್ದು. ಕುವೆಂಪು ಹೇಳುವಂತೆ ಕಾವ್ಯ ಸರಸ್ವತಿ ತನ್ನ ಮೊದಲ ಕಾವ್ಯಕ್ಕೆ ನಿಷಾದನನ್ನೇ ಆಯ್ಕೆ ಮಾಡಿಕೊಂಡದ್ದು ಸೂಕ್ತವಾಗಿದೆ.

ಸಾಮಾನ್ಯ ಪ್ರಜೆಯ ಮೂಲಕ ರಾಜ್ಯವನ್ನು, ರಾಜನನ್ನು ನೋಡುವ ಕ್ರಮವನ್ನು ವಾಲ್ಮೀಕಿ ನಮಗೆ ರಾಮಾಯಣದ ಮೂಲಕ ಹೇಳುತ್ತಿದ್ದಾರೆ. ಹೀಗಾಗಿ ಇಲ್ಲಿ ರಾಜ ಕೇಂದ್ರವಲ್ಲ, ಪ್ರಜೆಗಳು ಕೇಂದ್ರವಾಗಿದ್ದಾರೆ. ಇದರಿಂದಾಗಿಯೇ ಇದನ್ನು ಸುಭಿಕ್ಷೆ ಕಾಲವೆಂದದ್ದು. ವರ್ತಮಾನದ ಚರಿತ್ರೆಗೆ ಮತ್ತೆ ಬರುವುದಾದರೆ, ಮಹರ್ಷಿ ವಾಲ್ಮೀಕಿ ಜಯಂತಿಯ ನೆಪದಲ್ಲಿ ಶೋಷಿತ ಸಮುದಾಯಗಳು ನಮ್ಮ ಕಾಲದ ಬಿಕ್ಕಟ್ಟುಗಳನ್ನು ಅರ್ಥಮಾಡಿಕೊಂಡು, ಅವುಗಳನ್ನು ವೈಚಾರಿಕವಾಗಿ ಎದುರಿಸಬೇಕಾಗಿದೆ. ಅದಕ್ಕಿರುವ ಮಾದರಿಯೆಂದರೆ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಶಿಕ್ಷಣ, ಸಂಘಟನೆ, ಹೋರಾಟ. ಅವರ ಅಪಾರವಾದ ಅಧ್ಯಯನ, ಮಾನವೀಯತೆ, ಅಹಿಂಸೆಯ ಗುಣ ಈ ದೇಶವನ್ನು ರಕ್ಷಿಸುತ್ತಿದೆ. ವಾಲ್ಮೀಕಿಯನ್ನು ಪರಿವರ್ತಿಸಿದ್ದು ರಾಮಾಯಣವಾದರೆ, ನಮ್ಮನ್ನು ಪರಿವರ್ತಿಸಬೇಕಾದ್ದು ಸಂವಿಧಾನ. ಈ ಬೆಳಕಿನಲ್ಲಿ ‘ಜಯಂತಿ’ಗಳು ಆಚರಣೆಗೊಳ್ಳಬೇಕು. ಇದು ವಾಲ್ಮೀಕಿಗೆ ನಾವು ಸಲ್ಲಿಸುವ ಗೌರವ.

(ಲೇಖಕರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net