ಯುಗಾದಿ ಬಳಿಕ ಮತ್ತೆ ಪಕ್ಷ ಸಂಘಟನೆ: ಮಾಜಿ ಪ್ರಧಾನಿ ದೇವೇಗೌಡ ಹೇಳಿಕೆ

HD Deve gowda
Published on

ಬೆಂಗಳೂರು: ಯುಗಾದಿ ಹಬ್ಬದ ಬಳಿಕ ಪಕ್ಷ ಸಂಘಟನೆ, ಚುನಾವಣೆ ಎದುರಿಸುವ ಬಗ್ಗೆ ಮುಖಂಡರ ಜತೆ ಚರ್ಚಿಸುವುದಾಗಿ ಮಾಜಿ ಪ್ರಧಾನಿ ದೇವೇಗೌಡ ಹೇಳಿದರು.

ರಾಜ್ಯ ಸಭಾ ಸದಸ್ಯ ಒಬೇದುಲ್ಲಾ ಜೆಡಿಎಸ್ ಸೇರ್ಪಡೆ ಬಳಿಕ ಮಾತನಾಡಿದ ಎಚ್​ಡಿಡಿ, ಒಬೇದುಲ್ಲಾ ಅವರು ನನ್ನ ಹಳೆಯ ಸ್ನೇಹಿತರು. ಅವರು‌ ನಾವು ಒಟ್ಟಿಗೆ ಕೆಲಸ ಮಾಡಿದ್ದೇವೆ. ಈ ಸಂಕಷ್ಟ ಕಾಲದಲ್ಲಿ ನಾನು ನಿಮ್ಮ ಜತೆ ಇರುತ್ತೇನೆ ಎಂದು ಬಂದಿದ್ದಾರೆ. ಉದಾರವಾದ ಮನಸ್ಸು ಅವರದ್ದು ಎಂದರು. ಪ್ರಚಾರಕ್ಕೆ ಹೋಗೋದನ್ನು ಕಾದು ನೋಡಿ ಎಂದು ತಮಾಷೆ ಮಾಡಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಇಬ್ರಾಹಿಂ ಮಾತನಾಡಿ, ದೇವೇಗೌಡರ ಸಮ್ಮುಖದಲ್ಲಿ ಒಬೇದುಲ್ಲಾ ಅವರು ಸೇರ್ಪಡೆಯಾಗಿದ್ದಾರೆ. ಮುಸ್ಲಿಂ ಸಮುದಾಯದಲ್ಲಿ ತಮ್ಮದೇ ಆದ ಹೆಸರು ಮಾಡಿರುವವರು. ಸರ್ವ ಧರ್ಮ ಸಮನ್ವಯ ಮಾಡುವಲ್ಲಿ ಇವರು ಎತ್ತಿದ ಕೈ. ವಿ.ಪಿ. ಸಿಂಗ್, ಜಯಪ್ರಕಾಶ್ ನಾರಾಯಣ್ ಒಡನಾಡಿಯಾಗಿದ್ದವರು. ಅವರು ಸೇರ್ಪಡೆಯಾದ ಪಕ್ಷಕ್ಕೆ ಶಕ್ತಿ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಂಚರತ್ನದಂಥ ಪ್ರಣಾಳಿಕೆಯನ್ನು ಹಿಂದೆ ಯಾವ ಸರ್ಕಾರ ಕೂಡ ಜನರ ಮುಂದೆ ಇಟ್ಟಿಲ್ಲ. ಕುಮಾರಸ್ವಾಮಿ ಅವರು ಜನರಿಗೆ ಅಂಥ ಪ್ರಣಾಳಿಕೆ ಇಟ್ಟಿದ್ದಾರೆ. ಇದನ್ನು ಮೆಚ್ಚಿ ಅವರು ಬಂದಿದ್ದಾರೆ. ಮುಂದಿನ ತಿಂಗಳಿನಿಂದ ಅವರನ್ನು ರಾಜ್ಯ ಪ್ರವಾಸ ಮಾಡಿಸುತ್ತೇವೆ. ಅವರಷ್ಟೆ ಅಲ್ಲ ಅವರ ಟೀಂ ಕೂಡ ಬರಲಿದೆ. ಅವರ ಸೇರ್ಪಡೆಯಿಂದ ನಮಗೆ ಒಂದು ಶಕ್ತಿ ಬಂದಿದೆ ಎಂದರು.

ಅಲ್ಪಸಂಖ್ಯಾತರು ಜೆಡಿಎಸ್​ಗೆ ಬೆಂಬಲ ನೀಡ್ತಾ ಇದ್ದಾರೆ. ಕುಪೇಂದ್ರ ರೆಡ್ಡಿಯವರು ರಾಜ್ಯ ಸಭಾಗೆ ನಿಂತಾಗ ನಮ್ಮ ಎರಡು ಎಂಎಲ್​ಎಗೆ ದುಡ್ಡು ಕೊಟ್ಟು ಬಿಜೆಪಿಗೆ ಮತ ಹಾಕ್ಸಿದ್ದು ಕಾಂಗ್ರೆಸ್ ಅಲ್ವಾ? ಎನ್ಆರ್​ಸಿ, ಹಿಜಾಬ್ ಬಗ್ಗೆ ಕುಮಾರಸ್ವಾಮಿ ಅವರು ಮಾತಾಡಿದ್ರೆ ಹೊರತು ಕಾಂಗ್ರೆಸ್ ಅವರು ಅಲ್ಲ. ನಾನು ಈ ವಿಚಾರ ಎತ್ತಿದಾಗ ಈ ಬಗ್ಗೆ ಮಾತಾಡಬಾರದು ಅಂತ ಡಿಕೆಶಿ ಸೂಚನೆ ಕೊಟ್ರು. ನೀವು, ನಾವೆಲ್ಲ ಇದ್ದಾಗಲೇ ಸ್ಥಾನ‌ ಕೊಡಲಿಲ್ಲ, ಈಗ ನಿಮ್ಮ ಬಳಿ ಒಬ್ಬ ಅಲ್ಪಸಂಖ್ಯಾತ ಮುಖಂಡರು ಇಲ್ಲ. ಜತೆಗೆ ಕರ್ಕೊಂಡು ಹೋಗಲಿಕ್ಕೆ ಒಬ್ಬ ಮುಸ್ಲಿಂ ನಾಯಕ ಇಲ್ಲ. ಅಲ್ಪಸಂಖ್ಯಾತ ಅನ್ನೋ ಕಾರಣಕ್ಕಾಗಿಯೇ ನನಗೆ ಸ್ಥಾನ ಕೊಟ್ಟಿಲ್ಲ ಕಾಂಗ್ರೆಸ್​ನವರು. ಜೆಡಿಎಸ್ ಮೂರು ಬಾರಿ ಅಲ್ಪಸಂಖ್ಯಾತರನ್ನು ಅಧ್ಯಕ್ಷರಾಗಿ ಮಾಡಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಶಾಸಕ ಗುಬ್ಬಿ ಶ್ರೀನಿವಾಸ್ ಅವರನ್ನು ಪಕ್ಷಕ್ಕೆ ಆಹ್ವಾನ ಅನ್ನೋ ಇಬ್ರಾಹಿಂ ಹೇಳಿಕೆ ವಿಚಾರವಾಗಿ, ನಾನು ಯಾರನ್ನೂ ಕೂಡ ಆಹ್ವಾನ ಮಾಡಿಲ್ಲ. ಅದನ್ನು ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ತೀರ್ಮಾನ ಮಾಡ್ತಾರೆ ಅಂತಾನೆ ಹೇಳಿದ್ದೀನಿ ಎಂದು ಪ್ರತಿಕ್ರಿಯಿಸಿದರು.

ರಾಮನಗರದಲ್ಲಿ ಡಿ.ಕೆ. ಸುರೇಶ್ ಸ್ಪರ್ಧೆ ಕುರಿತ ಪ್ರಶ್ನೆಗೆ, ನಿಖಿಲ್ ಅವರು ರಾಮನಗರಕ್ಕೆ ಹೊಸಬರಲ್ಲ. ಅಲ್ಲೇ ಮನೆ ಇದೆ. ಅದೇ ಕ್ಷೇತ್ರದಲ್ಲಿ ತಿರುಗಾಡ್ತಾ ಇದ್ದಾರೆ. ಕಾಂಗ್ರೆಸ್​ನಿಂದ ಯಾರೇ ನಿಂತರೂ ಸ್ವಾಗತ. ಹೆದರಿಕೆ, ಆತಂಕ ಇಲ್ಲ ಎಂದು ಸ್ಪಷ್ಟಪಡಿಸಿದರು.

ಜೆಡಿಎಸ್​ನಿಂದ ಒಗ್ಗೂಡಿಸುವ ಕೆಲಸ:

ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಒಬೇದುಲ್ಲಾ ಖಾನ್, ನನ್ನ ಬಗ್ಗೆ ನಮ್ಮ ಸರ್ವೋಚ್ಚ ನಾಯಕ ದೇವೆಗೌಡ, ಸಿಎಂ ಇಬ್ರಾಹಿಂ ಅನೇಕ ವಿಚಾರ ಹೇಳಿದ್ದಾರೆ. ಜನತಾದಳದ ಮೂಲ ಉದ್ದೇಶ ಸಾಮಾಜಿಕ ನ್ಯಾಯ. ಜನತಾದಳ ಸರ್ಕಾರ ಕೇಂದ್ರದಲ್ಲಿ ಇದ್ದಾಗ ದೇಶದಲ್ಲಿ ಸಾಮಾಜಿಕ ನ್ಯಾಯ ಉಳಿಸಿದೆ. ಹಿಂದು, ಮುಸ್ಲಿಂ ಎಲ್ಲರ ಒಗ್ಗೂಡಿಸಿ ದೇಶ ಒಂದೇ ಎಂಬ ಸಂದೇಶ ನೀಡಿದ್ದು ಜನತಾದಳ. ಜನತಾದಳ ಒಡೆದು ಅನೇಕ ಪಕ್ಷಗಳಾಯಿತು. ಆದ್ರೆ ದೇವೆಗೌಡರು ಮಾತ್ರ ಜನತಾದಳದ ನಿಜವಾದ ವಾರಸುದಾರರಾಗಿ ಉಳಿದುಕೊಂಡರು. ಜನತಾ ದಳ ಎಂದಿಗೂ ಕೂಡ ಭ್ರಷ್ಟರಾಗಲು ದೇವೆಗೌಡರು ಬಿಡಲಿಲ್ಲ. ಅಲ್ಪಸಂಖ್ಯಾತರಿಗೆ ಇಂದು ಏನೆ ಉಪಯೋಗ ಆಗಿದ್ದರೂ, ಅಭಿವೃದ್ಧಿ ಆಗಿದ್ದರೂ ಅದು ಜನತಾದಳ ಮತ್ತು ದೇವೆಗೌಡರಿಂದ ಮಾತ್ರ. ಭಾರತ ಜಾತ್ಯಾತೀತ ರಾಷ್ಟ್ರ. ಹಿಂದು, ಮುಸ್ಲಿಂ ಎಲ್ಲರೂ ಸೇರಿ ದೇಶವನ್ನು ಒಂದೇ ಎಂದು ಹೇಳೋದು ಉದ್ದೇಶ. ಬಿಜೆಪಿ ಹಿಂದುತ್ವ, ಕಾಂಗ್ರೆಸ್ ಮೃದು ಹಿಂದುತ್ವದ ಹೆಸರಲ್ಲಿ ದೇಶವನ್ನು ಒಡೆಯುತ್ತಿದೆ. ಜನತಾದಳ ಒಗ್ಗೂಡಿಸುವ ಕೆಲಸ ಮಾಡಲಿದೆ ಎಂದು ಒಬೇದುಲ್ಲಾ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net