

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಂಡ್ಯ ರೋಡ್ ಶೋ ಹಾಗೂ ದಶಪಥ ಹೆದ್ದಾರಿ ಉದ್ಘಾಟನಾ ಸಮಾರಂಭದ ಯಶಸ್ಸು ರಾಜ್ಯ ವಿಧಾನಸಭೆ ಚುನಾವಣೆಗೆ ಹೊಸ ತಿರುವು ನೀಡಲಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿಶ್ಲೇಷಿಸಿ ಮಂಡ್ಯ ಜಿಲ್ಲೆಯ ಕಾರ್ಯಕರ್ತರಿಗೆ ಪತ್ರ ಬರೆದಿದ್ದಾರೆ.
ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಪಕ್ಷಕ್ಕೆ ಬೆಂಬಲ ಘೋಷಣೆ, ಪ್ರಧಾನಿ ಕಾರ್ಯಕ್ರಮಕ್ಕೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕೆಂದು ಮಾಡಿದ ಮನವಿ ಬೂಸ್ಟರ್ ಡೋಸ್ ನೀಡಿದೆ. ರೋಡ್ ಶೋ ಹಾಗೂ ಸಾರ್ವಜನಿಕ ಸಮಾವೇಶದ ಸಫಲತೆ ಮಂಡ್ಯ ಜಿಲ್ಲೆಯ ಬಿಜೆಪಿ ಕಾರ್ಯಕರ್ತರ ಮೊಗದಲ್ಲಿ ನಗು ಅರಳಿಸಿದೆ ಎಂದು ಬಿ.ಎಲ್.ಸಂತೋಷ್ ಹೇಳಿದ್ದಾರೆ.
ಪ್ರಧಾನಿಯೊಬ್ಬರು 41 ವರ್ಷಗಳ ನಂತರ ಮಂಡ್ಯ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಜನರ ಅಭೂತಪೂರ್ವ ಸ್ಪಂದನೆ, ಪರಿಶ್ರಮ ಸಾರ್ಥಕವಾಗಿದೆ ಸಂತಸ ವ್ಯಕ್ತಪಡಿಸಿದ್ದಾರೆ. ಮಂಡ್ಯ ಜಿಲ್ಲೆಯ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರಿಗೆ ಪತ್ರ ಬರೆದು ಶಹಬ್ಬಾಸ್ ಎಂದು ಬೆನ್ನು ತಟ್ಟಿದ್ದಾರೆ.
ಭವ್ಯ ರೋಡ್ ಶೋಗಾಗಿ ಮಂಡ್ಯ ಜಿಲ್ಲೆಯ ಪ್ರತಿಯೊಬ್ಬ ಕಾರ್ಯಕರ್ತನಿಗೆ ಮನದಾಳದಿಂದ ಅಭಿನಂದಿಸುವೆ. ಮುಂದಿನ ದಿನಗಳು ಇನ್ನಷ್ಟು ತಾಕತ್ತಿನದಾಗಿರಲಿದೆ. ನಿರೀಕ್ಷೆ ಜತೆ ಜತೆಗೆ ವಿರೋಧವೂ ಇರಲಿದೆ. ಹಿಂದಿನ ಸಂದೇಹಗಳೆಲ್ಲವೂ ತಪ್ಪು ಎಂದು ಸಾಬೀತಾಗಿರುವ ಕಾರಣ ಆರಂಭಿಸಿರುವ ಓಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಬಿ.ಎಲ್.ಸಂತೋಷ್ ಹುರಿದುಂಬಿಸಿದ್ದಾರೆ.
ತವರು ಮಂಡ್ಯ ಜಿಲ್ಲೆಗೆ ಬಿ.ಎಸ್.ಯಡಿಯೂರಪ್ಪ ಮಾರ್ಗದರ್ಶನ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಪಕ್ಷದ ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷ ಉಮೇಶ್, ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ, ಕಾರ್ಯದರ್ಶಿ ತುಳಸಿ ಮುನಿರಾಜುಗೌಡ, ವಿಭಾಗ ಪ್ರಭಾರಿಗಳ ಪರಿಶ್ರಮ, ಯೋಜನೆಗಳು ಜನರಿಗೆ ತಲುಪಿದ ಅರಿವು ಇವೆಲ್ಲವುಗಳ ಫಲಿತವಾಗಿ ಧೈರ್ಯವಹಿಸಿ ಕಾರ್ಯಕ್ರಮ ಸಂಘಟಿಸಿದ್ದು ಸಾರ್ಥಕಗೊಳಿಸಿದೆ ಎಂದಿದ್ದಾರೆ.