

ಮುಂಬೈ: ಸೆ.07 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಗೊಂಡ ಬಾಲಿವುಡ್ ಕಿಂಗ್ ಖಾನ್ ಅಭಿನಯದ 'ಜವಾನ್' ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ದಾಖಲೆಗಳನ್ನು ನಿರ್ಮಿಸುವ ಜತೆಗೆ ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿತು.
ಇದೀಗ ಚಿತ್ರ ರಿಲೀಸ್ ಆಗಿ ಇಂದಿಗೆ 6 ವಾರಗಳು ಕಳೆದಿದ್ದು, 6ನೇ ವಾರವೂ ಕೂಡ 'ಜವಾನ್' ವೀಕ್ಷಿಸಲು ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಗಳಿಗೆ ತೆರಳುತ್ತಿರುವುದು ಸದ್ಯ ಚಿತ್ರತಂಡಕ್ಕೆ ಭಾರೀ ಸಂತಸ ಕೊಟ್ಟಿದೆ.
ಇತ್ತೀಚಿನ ದಿನಗಳಲ್ಲಿ ಯಾವುದೇ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡರೆ ಅದು ಒಂದು ತಿಂಗಳೊಳಗೆ ಥಿಯೇಟರ್ನಿಂದ ಹೊರ ಉಳಿದು, ಸ್ವಲ್ಪ ದಿನಗಳ ಬಳಿಕ ಒಟಿಟಿ ಪ್ಲಾಟ್ಫಾರ್ಮ್ಗಳಲ್ಲಿ ಹಾಜರಾಗುವುದು ನಮಗೆಲ್ಲಾ ತಿಳಿದೇ ಇದೆ. ಸದ್ಯ ಇದೀಗ ಈ ಸಾಲಿಗೆ ಸೇರದ 'ಜವಾನ್' ಸತತ ಆರನೇ ವಾರದಲ್ಲೂ ಕೂಡ ಥಿಯೇಟರ್ಗಳತ್ತ ಸಿನಿಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಶುಕ್ರವಾರ (ಅಕ್ಟೋಬರ್ 13) ದೇಶದೆಲ್ಲೆಡೆ ರಾಷ್ಟ್ರೀಯ ಸಿನಿಮಾ ದಿನವನ್ನು ಬಹುತೇಕ ಚಿತ್ರಮಂದಿರಗಳಲ್ಲಿ ಆಯೋಜಿಸಲಾಗಿತ್ತು. ಈ ವೇಳೆ 'ಜವಾನ್' ಚಿತ್ರಕ್ಕೆ ಹೆಚ್ಚಿನ ಮನ್ನಣೆ ಲಭಿಸಿತು. ಇತ್ತೀಚೆಗೆ ಬಿಡುಗಡೆಗೊಂಡ 'ಫ್ಯೂರೆಕಿ 3', 'ಮಿಷನ್ ರಾಣಿಗಂಜ್', 'ಥ್ಯಾಂಕ್ಯೂ ಫಾರ್ ಕಮಿಂಗ್'ನಂತಹ ಹೊಸ ಚಿತ್ರಗಳ ಮಧ್ಯೆಯೂ ಜವಾನ್ ಸಿನಿಪ್ರಿಯರನ್ನು ಆಕರ್ಷಿಸುವಲ್ಲಿ ಮುಂಚೂಣಿಯಲ್ಲಿದೆ.
ಜವಾನ್ ಹಿಂದಿ ಆವೃತ್ತಿಯಲ್ಲಿ ಸುಮಾರು 576 ಕೋಟಿ ರೂ. ನಿವ್ವಳ ಸಂಗ್ರಹಿಸುವ ಮೂಲಕ ಇದೀಗ ಬಾಲಿವುಡ್ನಲ್ಲಿ ಇಂಡಸ್ಟ್ರಿ ಹಿಟ್ ಸಿನಿಮಾವಾಗಿ ಹೊರಹೊಮ್ಮಿದೆ. ಚಿತ್ರ ಜಾಗತಿಕವಾಗಿ ಒಟ್ಟು 1,135 ಕೋಟಿ ರೂ. ಕಲೆಕ್ಷನ್ ಮಾಡಿದೆ.
ಚಿತ್ರದಲ್ಲಿ ಶಾರೂಖ್ ಖಾನ್ ಮತ್ತು ನಯನತಾರ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಪ್ರಿಯಾಮಣಿ, ದೀಪಿಕಾ ಪಡುಕೋಣೆ, ವಿಜಯ್ ಸೇತುಪತಿ, ಪ್ರಿಯಾಮಣಿ, ಸನ್ಯಾ ಮಲ್ಹೋತ್ರಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ,(ಏಜೆನ್ಸೀಸ್).