

ಸುಬ್ರಹ್ಮಣ್ಯ: ಕಡಬ ತಾಲೂಕಿನ ಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವದ ನಂತರ ಶ್ರೀ ದೇವರ ಜಾತ್ರೋತ್ಸವವ ಸಂಪನ್ನವಾಯಿತು. ಭಕ್ತರು ದೇವರ ಉತ್ಸವಾಧಿಗಳನ್ನು ವೀಕ್ಷಿಸಿ ಪ್ರಸಾದ ಸ್ವೀಕರಿಸಿದರು. ಕ್ಷೇತ್ರ ತಂತ್ರಿ ಕೆಮ್ಮಿಂಜೆ ನಾಗೇಶ ತಂತ್ರಿಗಳು ವೈದಿಕ ವಿಧಿವಿಧಾನಗಳನ್ನು ನಡೆಸಿದರು. ದೇವಳದ ಪ್ರಧಾನ ಅರ್ಚಕ ಶ್ರೀಹರಿ ಕುಂಜೂರಾಯ ಸಹಕರಿಸಿದರು.
ದರ್ಶನ ಬಲಿ ಉತ್ಸವ:
ಬೆಳಗ್ಗೆ ಮಹಾಗಣಪತಿ ಹೋಮ, ಕಲಶ ಪೂಜೆ, ದೇವರ ಬಲಿ ಹೊರಟು ಉತ್ಸವ ನಡೆಯಿತು. ಬಳಿಕ ದರ್ಶನಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಕಲಶಾಭಿಷೇಕ, ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ನಡೆಯಿತು. ಸಂಜೆ ಕೇರ್ಪಡದ ಗೌಡ ಮನೆತನದ ಭಂಡಾರ ಮನೆಯಿಂದ ರಕ್ತೇಶ್ವರಿ ಮತ್ತು ಪರಿವಾರ ದೈವಗಳ ಭಂಡಾರ ದೇವಸ್ಥಾನಕ್ಕೆ ಆಗಮಿಸಿತು. ದೇವಳದಲ್ಲಿ ರಕ್ತೇಶ್ವರಿ ಮತ್ತು ಪರಿವಾರ ದೈವಗಳಾದ ಪಂಜುರ್ಲಿ, ಮಹಿಷಂತಾಯ ಮತ್ತು ಗುಳಿಗ ದೈವಗಳಿಗೆ ನೇಮೋತ್ಸವ ನಡೆಯಿತು. ಪ್ರಸಾದ ವಿತರಣೆ ನೆರವೇರಿತು.
ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷೆ ಶಾಸಕಿ ಭಾಗೀರಥಿ ಮುರುಳ್ಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ನಡುಬೈಲು, ವ್ಯವಸ್ಥಾಪನಾ ಸದಸ್ಯರಾದ ವೆಂಕಪ್ಪ ಗೌಡ ಆಲಾಜೆ, ರೂಪರಾಜ ರೈ ಕೆ.ಪಜಿಂಬಿಲ, ನಾಗೇಶ್ ಆಳ್ವ ಕಟ್ಟಬೀಡು, ಯೋಗಾನಂದ ಉಳ್ಳಲಾಡಿ, ಭಾಗ್ಯ ಪ್ರಸನ್ನ ಎಣ್ಮೂರು, ರಘುನಾಥ ಎಂಜೀರು, ವಾರಿಜಾಕ್ಷಿ ಕೇರ್ಪಡ, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಶಿವಾನಂದ ಬೊಳ್ಕಜೆ, ಪ್ರಧಾನ ಕಾರ್ಯದರ್ಶಿ ಅನೂಪ್ ಕುಮಾರ್ ಆಳ್ವ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.