

ಮುಂಬೈ: ಗಜಲ್ ಗಾಯನದಲ್ಲಿ ದೊಡ್ಡ ಹೆಸರು ಮಾಡಿರುವ ಗಾಯಕರಲ್ಲಿ ಅನೂಪ್ ಜಲೋಟ ಸಹ ಒಬ್ಬರು. 67 ವರ್ಷದ ಅನೂಪ್ ಇದುವರೆಗೂ ಮೂರು ಬಾರಿ ಮದುವೆಯಾಗಿದ್ದಾರೆ. ಆದರೆ, ಮೂರೂ ಮದುವೆಗಳು ಡೈವೋರ್ಸ್ನಲ್ಲಿ ಅಂತ್ಯವಾಗಿವೆ. ಇದೀಗ ಅವರು ಇನ್ನೊಂದು ಮದುವೆಯಾಗಿದ್ದಾರೆ ಎಂಬ ಸುದ್ದಿಯೊಂದು ಎಲ್ಲೆಡೆ ಹರಿದಾಡುತ್ತಿದೆ.
ಇದನ್ನೂ ಓದಿ: VIDEOS| ಹರಿಪ್ರಿಯಾ ಹೊಸ ಹೊಸ ಅವತಾರಗಳು…
ಅನೂಪ್ ಜಲೋಟ ಮದುವೆಯಾಗಿದ್ದಾರೆನ್ನುವ ಹುಡುಗಿಯ ಹೆಸರು ಜಸ್ಲೀನ್ ಮತಾರು. ಅನೂಪ್ ಮತ್ತು ಜಸ್ಲೀನ್ ಕಳೆದ ವರ್ಷ 'ಬಿಗ್ ಬಾಸ್'ನಲ್ಲಿ ಜೋಡಿಯಾಗಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಅವರಿಬ್ಬರೂ ಗುರು-ಶಿಷ್ಯೆಯಾಗಿ ಭಾಗವಹಿಸಿದ್ದು ಸಾಕಷ್ಟು ಚರ್ಚೆಯಾಗಿತ್ತು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ, ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂಬ ಮಾತುಗಳೆಲ್ಲಾ ಕೇಳಿ ಬಂದಿತ್ತು.
ಆದರೆ, 'ಬಿಗ್ ಬಾಸ್' ಮುಗಿದು ಹಲವು ತಿಂಗಳುಗಳಾದರೂ ಅನೂಪ್ ಮತ್ತು ಜಸ್ಲೀನ್ ದೂರವೇ ಇದ್ದರು. ಇದೀಗ ಅವರಿಬ್ಬರ ಮದುವೆ ಫೋಟೋವೊಂದು ಬಿಡುಗಡೆಯಾಗಿದ್ದು, ಇದನ್ನು ನೋಡಿ ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ. ಈ ಫೋಟೋ ಹಂಚಿಕೊಂಡಿದ್ದು ಬೇರೆ ಯಾರೋ ಅಲ್ಲ, ಸ್ವತಃ ಜಸ್ಲೀನ್ ಅವರೇ ತಮ್ಮ ಇನ್ಸ್ಟಾ ಖಾತೆಯ ಮೂಲಕ ಈ ಫೋಟೋ ಹಂಚಿಕೊಂಡಿದ್ದಾರೆ.
ಅಂದಹಾಗೆ, ಇದೊಂದು ಫೇಕ್ ಫೋಟೋ ಎಂದು ಹೇಳಲಾಗುತ್ತಿದೆ. ಜಸ್ಲೀನ್, ಇದೀಗ 'ಯೇ ಮೇರಿ ಸ್ಟೂಡೆಂಟ್ ಹೇ' ಎಂಬ ಚಿತ್ರದಲ್ಲಿ ನಟಿಸುತ್ತಿದ್ದು, ಅದರಲ್ಲಿ ಅನೂಪ್ ಜಲೋಟ ಸಹ ನಟಿಸುತ್ತಿದ್ದಾರೆ. ಈ ಚಿತ್ರದ ಫೋಟೋ ಇದು ಎಂದು ಹೇಳಲಾಗುತ್ತಿದೆ. ಅನೂಪ್ ಆಗಲೀ, ಜಸ್ಲೀನ್ ಆಗಲೀ ಈ ಬಗ್ಗೆ ಯಾವೊಂದು ಸ್ಪಷ್ಟೀಕರಣವನ್ನೂ ಕೊಟ್ಟಿಲ್ಲ. ಈ ವಿಷಯವನ್ನು ಇಬ್ಬರೂ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.