

ಮುಂಬೈ: 'ನಾನು ಯಾರಲ್ಲೂ ಕ್ಷಮೆ ಕೇಳಿಲ್ಲ. ಕೇಳೋದೂ ಇಲ್ಲ. ಏಕೆಂದರೆ, ನಾನು ಯಾವ ತಪ್ಪನ್ನೂ ಮಾಡಿಲ್ಲ ...' ಎಂದು ಇತ್ತೀಚೆಗೆ ನಟಿ ಪಾಯಲ್ ಘೋಶ್ ಸೋಷಿಯಲ್ ಮೀಡಿಯಾದಲ್ಲಿ ಘೋಷಿಸಿದ್ದರು. ಹೀಗೆ ಹೇಳಿದ ಮರುದಿನವೇ, ರಿಚಾ ನ್ಯಾಯಾಲಯದ ಆದೇಶವೊಂದನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ಪಾಯಲ್ ಕ್ಷಮೆ ಕೇಳಿದ್ದು ನಮೂದಾಗಿದೆ. ಈ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಅವರು, ತಾನು ಗೆದ್ದೆ ಎಂದು ಖುಷಿಪಟ್ಟಿದ್ದಾರೆ.
ಏನಿದು ಪ್ರಕರಣ ಎಂದು ತಿಳಿದುಕೊಳ್ಳುವುದಕ್ಕೆ ಒಂದು ಸಣ್ಣ ಫ್ಲಾಶ್ಬ್ಯಾಕ್ಗೆ ಹೋಗಬೇಕು ಕಳೆದ ತಿಂಗಳಷ್ಟೇ, ನಟ-ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ನಟಿ ಪಾಯಲ್ ಘೋಶ್ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದರು. ಈ ಸಂದರ್ಭದಲ್ಲಿ ಅನುರಾಗ್ ಕಶ್ಯಪ್ ಖುದ್ದು ತಮ್ಮ ಬಳಿ ತಮಗೆ ನಟಿಯರಾದ ರಿಚಾ ಚಡ್ಢಾ, ಮಾಹಿ ಗಿಲ್ ಮತ್ತು ಹ್ಯೂಮಾ ಖುರೇಷಿ ಮುಂತಾದವರು ಸಹಕರಿಸಿದ್ದಾಗಿ ಹೇಳಿಕೊಂಡಿದ್ದರು.
ಇದನ್ನೂ ಓದಿ: ಸರ್ಪ್ರೈಸ್ ಕೊಡ್ತೀನಿ ಎಂದ ಶರಣ್ ಮಾಡಿದ್ದೇನು?
ಈ ಪ್ರಕರಣದಲ್ಲಿ ತಮ್ಮ ಹೆಸರನ್ನು ಅನಾವಶ್ಯಕವಾಗಿ ತರಲಾಗುತ್ತಿದೆ ಎಂದು ರಿಚಾ ಬೇಸರ ವ್ಯಕ್ತಪಡಿಸುವುದರ ಜತೆಗೆ, ಪಾಯಲ್ ವಿರುದ್ಧ ಮುಂಬೈ ಹೈಕೋರ್ಟ್ನಲ್ಲಿ ರಿಚಾ ಮಾನನಷ್ಟ ಮೊಕ್ಕದ್ದಮೆಯನ್ನು ಹೂಡಿದ್ದಾರೆ. ಅಷ್ಟೇ ಅಲ್ಲ, ಈ ಪ್ರಕರಣದಿಂದ ತಮ್ಮ ಮಾನಹಾನಿಯಾಗಿರುವುದರಿಂದ ಒಂದು ಕೋಟಿ 10 ಲಕ್ಷ ರೂಪಾಯಿಗಳನ್ನು ಕಟ್ಟಿಕೊಡಬೇಕು ಎಂದು ಕೇಸ್ ಹಾಕಿದ್ದಾರೆ.
ಇತ್ತೀಚೆಗೆ ಈ ಪ್ರಕರಣವವು ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದ ಸಮಯದಲ್ಲಿ, ಪಾಯಲ್ ಕ್ಷಮೆ ಕೇಳಿದ್ದಾರೆ ಎಂದು ಅವರ ವಕೀಲರು ಹೇಳಿದ್ದಾರೆ ಎಂದು ಸುದ್ದಿಯಾಗಿತ್ತು. ಪಾಯಲ್ ಅವರು ತಾವು ರಿಚಾ ವಿರುದ್ಧ ನೀಡಿರುವ ಹೇಳಿಕೆಯನ್ನು ಹಿಂಪಡೆಯುವುದಕ್ಕೆ ಸಿದ್ಧರಾಗಿರುವುದರ ಜತೆಗೆ, ಕ್ಷಮೆಯನ್ನೂ ಕೇಳಿದ್ದಾರೆ ಎಂದು ಪಾಯಲ್ ಪರ ವಕೀಲ ನಿತಿನ್ ಸಾತ್ಪುಟೆ ಅವರು ನ್ಯಾಯಾಲಯಕ್ಕೆ ಹೇಳಿದ್ದಾರೆ ಎಂದು ಹೇಳಲಾಗಿತ್ತು.
ಇದನ್ನೂ ಓದಿ: PHOTOS/ VIDEO| KGF-2 ಮೇಕಿಂಗ್ ಫೋಟೋಗಳು ವೈರಲ್…
ಆದರೆ, ಇದು ಅಪ್ಪಟ ಸುಳ್ಳು ಎಂದು ಪಾಯಲ್ ಹೇಳಿದ್ದರು. ಈ ಕುರಿತು ಟ್ವೀಟ್ ಮಾಡಿರುವ ಅವರು, 'ನಾನು ಕ್ಷಮೆ ಕೇಳಿಲ್ಲ. ನನಗೂ ರಿಚಾಗೂ ಸಂಬಂಧವಿಲ್ಲ. ಕಷ್ಟದಲ್ಲಿರುವಾಗ ಮಹಿಳೆಯರು ಪರಸ್ಪರ ಒಬ್ಬರಿಗೊಬ್ಬರು ಹೆಗಲು ನೀಡಬೇಕು. ನಾನು ರಿಚಾ ವಿರುದ್ಧ ಯಾವುದೇ ಕೆಟ್ಟ ಮಾತೂ ಆಡಿಲ್ಲ. ನನ್ನ ಹೋರಾಟವೇನಿದ್ದರೂ ಅನುರಾಗ್ ಕಶ್ಯಪ್ ವಿರುದ್ಧ. ಆತನ ನಿಜವಾದ ಮುಖವನ್ನು ಜಗತ್ತಿಗೆ ತೋರಿಸುವುದಕ್ಕೆ ಹೊರಟಿದ್ದೇನೇ ಹೊರತು ಬೇರೆ ಯಾರ ವಿರುದ್ಧವೂ ಪೈಪೋಟಿ ಮಾಡುವುದಕ್ಕೆ ನನಗೆ ಇಷ್ಟವಿಲ್ಲ' ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.
ಇದಕ್ಕೆ ಪ್ರತಿಯಾಗಿ ರಿಚಾ ಇದೀಗ ಕೋರ್ಟ್ ಆದೇಶವನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಪಾಯಲ್ ಬೇಷರತ್ ಕ್ಷಮೆ ಕೇಳಿದ್ದಾರೆ ಎಂದು ನಮೂದಾಗಿದೆ. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ರಿಚಾ ವಿರುದ್ಧ ಏನೂ ಮಾತಾಡುವುದಿಲ್ಲ ಎಂದು ಅವರು ನ್ಯಾಯಾಲಕ್ಕೆ ಹೇಳಿರುವುದು ಸಹ ದಾಖಲಾಗಿದೆ. ಈ ಪ್ರತಿಯನ್ನು ಬಿಡುಗಡೆ ಮಾಡಿರುವ ರಿಚಾ, ಗೆಲುವು ತಮ್ಮದಾಗಿದೆ ಎಂದು ಹೇಳಿಕೊಂಡಿದ್ದಾರೆ.