

ಟೋಕಿಯೋ: ಜಪಾನ್ನ ಪ್ರಧಾನಮಂತ್ರಿ ಸ್ಥಾನಕ್ಕೆ ಮತ್ತು ಸಚಿವ ಸಂಪುಟಕ್ಕೆ ಶಿಂಜೋ ಅಬೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ನೂನ ಪ್ರಧಾನಮಂತ್ರಿಯಾಗಿ ಚೀಫ್ ಕ್ಯಾಬಿನೆಟ್ ಸೆಕ್ರೆಟರಿಯಾಗಿದ್ದ ಯೋಷಿಹಿಡೆ ಸುಗಾ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಅಲ್ಲಿನ ಸಂಸತ್ ಮೂಲಗಳು ತಿಳಿಸಿವೆ.
ಶಿಂಜೋ ಅಬೆ ಅವರು ಅನಾರೋಗ್ಯಕಾರಣಕ್ಕೆ ಪ್ರಧಾನಿ ಪಟ್ಟ ತೊರೆಯುತ್ತಿರುವುದಾಗಿ ಕಳೆದ ತಿಂಗಳು ಘೋಷಿಸಿದ್ದರು. ಜಪಾನಿನ ಸುದೀರ್ಘ ಅವಧಿಯ ಪ್ರಧಾನಿ ಎಂಬ ಕೀರ್ತಿಗೂ ಅವರು ಭಾಜನರು. ಚೀಫ್ ಕ್ಯಾಬಿನೆಟ್ ಸೆಕ್ರೆಟರಿಯಾಗಿದ್ದ ಯೋಷಿಹಿಡೆ ಸುಗಾ ಅವರು ಅಬೆ ಅವರ ಆಪ್ತವಲಯದಲ್ಲಿದ್ದು, ಆಡಳಿತ ಕಾರ್ಯದಲ್ಲಿ ಸಂಪೂರ್ಣ ನೆರವಾಗುತ್ತಿದ್ದರು. ಅವರಿಗೆ ಉತ್ತಮ ಆಡಳಿತ ಅನುಭವವಿದ್ದು, ಪಕ್ಷದ ವಲಯದಲ್ಲೂ ಉತ್ತಮ ಹೆಸರು ಉಳಿಸಿಕೊಂಡಿದ್ದಾರೆ. ಪ್ರಸಿದ್ಧರಲ್ಲದೇ ಹೋದರೂ ಅವರ ನಡವಳಿಕೆ, ಕಾರ್ಯವೈಖರಿಯೇ ಅವರಿಗೆ ಪ್ರಧಾನಿ ಪಟ್ಟ ಸಿಗುವಂತೆ ಮಾಡಿದೆ.
ಸುಗಾ ಅವರು ಸ್ಟ್ರಾಬೆರಿ ಬೆಳೆಗಾರನ ಮಗನಾಗಿದ್ದು, ಸಾಮಾನ್ಯ ಮತ್ತು ಗ್ರಾಮೀಣ ಹಿನ್ನೆಲೆಯಲ್ಲಿ ಬೆಳೆದವರು. ಅವರಿಗೆ ಜನಸಾಮಾನ್ಯರ ಸುಖ ದುಃಖಗಳ ಅರಿವು ಚೆನ್ನಾಗಿದೆ. ಅಬೆ ಅವರು ಆರಂಭಿಸಿದ ನೀತಿ, ಯೋಜನೆಗಳನ್ನು ಸುಗಾ ಪೂರ್ಣಗೊಳಿಸಲಿದ್ದಾರೆ. ಅಬೆ ಅವರ ನಿಷ್ಠರಾಗಿದ್ದ ಅವರು 2006-07ರಲ್ಲೇ ಜತೆಗಿದ್ದವರು. ಅನಾರೋಗ್ಯ ಕಾರಣ ಅವರ ಅವಧಿ ಪೂರ್ಣಗೊಳಸಿಲಾಗಿರಲಿಲ್ಲ. ಆದರೆ, ಮತ್ತೆ 2012ರಲ್ಲಿ ಪ್ರಧಾನಿ ಪಟ್ಟಕ್ಕೇರಲು ಅಬೆಗೆ ನೆರವಾಗಿದ್ದರು. ಅಲ್ಲಿಂದೀಚೆಗೆ ಅಬೆ ಅವರ ನಿಷ್ಠರಾಗಿಯೆ ನಡೆದುಕೊಂಡಿದ್ದಾರೆ. (ಏಜೆನ್ಸೀಸ್)