ಮುಂದೆ ಕಷ್ಟ ಆದರೂ ಪರವಾಗಿಲ್ಲ, ನಾನ್​ ರೆಡಿ ... ಜಾಹ್ನವಿ ತೀರ್ಮಾನ

Jahnavi Kapoor - Final
Published on

ಸುಶಾಂತ್​ ಸಿಂಗ್​ ಸಾವಿನ ನಂತರ ಬಾಲಿವುಡ್​ನಲ್ಲಿ ಹೊರಗಿನವರು ಮತ್ತು ಸ್ಟಾರ್​ ಮಕ್ಕಳ ಕುರಿತಾಗಿ ಚರ್ಚೆ ಜೋರಾಗಿ ನಡೆದಿದ್ದು, ಅದರ ಬಿಸಿ ಬೋನಿ ಕಪೂರ್​ ಮತ್ತು ಶ್ರೀದೇವಿ ಅವರ ಮಗಳು ಜಾಹ್ನವಿ ಕಪೂರ್​ಗೂ ತಟ್ಟಿದೆ.

ಜಾಹ್ನವಿ ಕಪೂರ್​ ಅಭಿನಯದ ಎರಡನೇ ಚಿತ್ರ 'ಗುಂಜನ್​ ಸಕ್ಸೇನಾ - ದಿ ಕಾರ್ಗಿಲ್​ ಗರ್ಲ್​' ಇದೇ ಆಗಸ್ಟ್​ 10ರಂದು ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದ್ದು, ಅದನ್ನು ಬಾಯ್ಕಾಟ್​ ಮಾಡುವುದಕ್ಕೆ ಸೋಷಿಯಲ್​ ಮೀಡಿಯಾದಲ್ಲಿ ಒಂದು ವರ್ಗದ ಜನ ತೀರ್ಮಾನಿಸಿದ್ದಾರೆ.

ಅಷ್ಟೇ ಅಲ್ಲ, ಒಂದು ಅಭಿಯಾನವನ್ನೇ ಪ್ರಾರಂಭಿಸಿರುವ ಅವರು, ಜಾಹ್ನವಿ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಜಾಹ್ನವಿಗೆ ಅಭಿನಯ ಬರದಿದ್ದರೂ, ಅಪ್ಪ-ಅಮ್ಮನ ಹೆಸರಿನಲ್ಲಿ ಬದುಕುತ್ತಿದ್ದಾಳೆ ಎಂಬರ್ಥದ ಮಾತುಗಳನ್ನು ಆಡುತ್ತಿದ್ದಾರೆ. ಅಂತಹವರನ್ನು ಬೆಳೆಯುವುದಕ್ಕೆ ಬಿಡಬೇಡಿ ಎಂದು ಕಿಡಿಕಾರುತ್ತಿರುವ ಅವರು, ಚಿತ್ರವನ್ನು ಬಾಯ್ಕಾಟ್​ ಮಾಡಿ ಎಂದು ಎಂದು ಕರೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಜಾಹ್ನವಿ, 'ಕೆಲವರಿಗೆ ನನ್ನ ಮೇಲೆ ಮತ್ತು ಚಿತ್ರದ ಮೇಲೆ ಯಾವುದೋ ಕಾರಣಕ್ಕೆ ಬೇಸರವಿರಬಹುದು. ಆದರೆ, ನನಗೆ ಚಿತ್ರದ ಬಗ್ಗೆ ಸಂಪೂರ್ಣ ವಿಶ್ವಾಸವಿದೆ. ಒಂದೊಳ್ಳೆಯ ಚಿತ್ರವನ್ನ ಮಾಡಿದ್ದೇವೆ ನಾವು. ಆ ಚಿತ್ರದ ಬಗ್ಗೆ ನನಗಷ್ಟೇ ಅಲ್ಲ, ಇಡೀ ಚಿತ್ರತಂಡಕ್ಕೆ ಹೆಮ್ಮೆ ಇದೆ' ಎಂದು ಅವರು ಹೇಳಿಕೊಂಡಿದ್ದಾರೆ.

ಇನ್ನು ನೆಪೋಟಿಸಂ ಕುರಿತು ಮಾತನಾಡಿರುವ ಅವರು, 'ಬೇರೆಯವರಿಗೆ ಹೋಲಿಸಿದರೆ,ಸ್ಟಾರ್​ಗಳ ಮಕ್ಕಳಿಗೆ ಚಿತ್ರರಂಗಕ್ಕೆ ಬರುವುದಕ್ಕೆ ಸುಲಭ. ಹಾಗಂತ ಮುಂದೆಯೇ ಅದೇ ರೀತಿ ಇರುತ್ತದೆ ಎಂದು ಹೇಳುವುದು ಕಷ್ಟ. ನಾನು ಸುಲಭವಾಗಿ ಚಿತ್ರರಂಗಕ್ಕೆ ಬಂದಿರಬಹುದು. ಆದರೆ, ಮುಂದೆ ತುಂಬಾ ಸವಾಲಿದೆ ಎಂದು ನನಗೆ ಚೆನ್ನಾಗಿ ಗೊತ್ತಿದೆ' ಎನ್ನುತ್ತಾರೆ ಜಾಹ್ನವಿ.

'ಮುಂದೆ ತುಂಬಾ ಸವಾಲುಗಳಿರುತ್ತವೆ ಮತ್ತು ಆ ಸವಾಲುಗಳನ್ನು ಎದುರಿಸುವುದಕ್ಕೂ ನಾನು ಸಿದ್ಧ. ಈಗಾಗಲೇ ನಾನು ಎರಡು ಚಿತ್ರಗಳಲ್ಲಿ ನಟಿಸಿರಬಹುದು. ಆದರೆ, ನನ್ನ ಚಿತ್ರಜೀವನ ನಿಜಕ್ಕೂ ಶುರುವಾಗುವುದು ಇಲ್ಲಿಂದಲೇ' ಎಂದು ಜಾಹ್ನವಿ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net