

ಕಳೆದ ಮೂರು ತಿಂಗಳುಗಳಿಂದ ಸುಶಾಂತ್ ಸಿಂಗ್ ರಜಪೂತ್, ನೆಪೋಟಿಸಂ, ಬಾಲಿವುಡ್ ಮಾಫಿಯಾ ಎಂದು ಜಪ ಮಾಡುತ್ತಿದ್ದ ಕಂಗನಾ ರಣಾವತ್, ಈಗ ಬಹಳ ದಿನಗಳ ನಂತರ ತಮ್ಮ ಹೊಸ ಚಿತ್ರದ ಬಗ್ಗೆ ಮಾತನಾಡಿದ್ದಾರೆ. 'ಮಣಿಕರ್ಣಿಕಾ' ಚಿತ್ರದ ನಂತರ ಕಂಗನಾ ನಿರ್ದೇಶಿಸುತ್ತಿರುವ ಈ ಚಿತ್ರ ಸದ್ಯದಲ್ಲೇ ಪ್ರಾರಂಭವಾಗಲಿದ್ದು, ಈ ಬಗ್ಗೆ ಮೊದಲ ಬಾರಿಗೆ ಒಂದಿಷ್ಟು ವಿಷಯಗಳನ್ನು ಹೇಳಿಕೊಂಡಿದ್ದಾರೆ.
ಅಂದಹಾಗೆ, ಕಂಗನಾ ನಿರ್ದೇಶಿಸುತ್ತಿರುವ ಹೊಸ ಚಿತ್ರದ ಹೆಸರೇನು ಗೊತ್ತಾ? 'ಅಪರಾಜಿತ ಅಯೋಧ್ಯಾ'. ರಾಮಜನ್ಮ ಭೂಮಿ ವಿಷಯವನ್ನಿಟ್ಟುಕೊಂಡು ಕಂಗನಾ ಈ ಬಾರಿ ಚಿತ್ರ ಮಾಡುತ್ತಿದ್ದು, 'ಬಾಹುಬಲಿ' ಖ್ಯಾತಿಯ ವಿಜಯೇಂದ್ರ ಪ್ರಸಾದ್ ಈ ಚಿತ್ರಕ್ಕೆ ಕಥೆ-ಚಿತ್ರಕಥೆ ರಚಿಸಿದ್ದಾರೆ.
ಆಗಸ್ಟ್ 5ರಂದು ಒಂದು ಸರಳ ಪೂಜೆಯೊಂದಿಗೆ ಚಿತ್ರದ ಕೆಲಸಗಳನ್ನು ಅಧಿಕೃತವಾಗಿ ಪ್ರಾರಂಭಿಸಲಾಗಿದೆ. ಅಂದು ರಾಮ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ಅತ್ತ ಅಯೋಧ್ಯೆಯಲ್ಲಿ ನಡೆದರೆ, ಇತ್ತ ಕಂಗನಾ ತಮ್ಮ ಊರಲ್ಲಿ ಒಂದು ಸರಳ ಪೂಜೆಯೊಂದಿಗೆ ಮಾಡಿ, ಚಿತ್ರದ ಕೆಲಸವನ್ನು ಪ್ರಾರಂಭಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, 'ರಾಮ ಮಂದಿರ ಎನ್ನುವುದು ಬರೀ ದೇವಸ್ಥಾನವಲ್ಲ. ಅದೊಂದು ಎಮೋಷನ್. ಈ ದೇವಸ್ಥಾನದ ವಿಷಯವಾಗಿ ಆರು ಶತಮಾನಗಳ ಹೋರಾಟವಿದೆ. ಆರು ವರ್ಷಗಳ ಹಿಂದೆ ಶುರುವಾದ ಹೋರಾಟ, ಈಗ ದೇವಸ್ಥಾನದ ಶಂಕುಸ್ಥಾಪನೆಯವರೆಗೂ ಬಂದಿದೆ. ಇದೊಂದು ಬಹಳ ಕಷ್ಟವಾದ ಸ್ಕ್ರೀನ್ಪ್ಲೇ. ಏಕೆಂದರೆ, 600 ವರ್ಷಗಳ ಇತಿಹಾಸವನ್ನು ಈ ಚಿತ್ರದಲ್ಲಿ ಹೇಳಬೇಕಾಗಿದೆ' ಎಂದು ಅವರು ಹೇಳಿದ್ದಾರೆ.
ಇನ್ನು ಅಗಸ್ಟ್ ಐದರಂದೇ ಚಿತ್ರದ ಕೆಲಸಗಳು ಪ್ರಾರಂಭವಾಗಿರುವ ಬಗ್ಗೆ ಮಾತನಾಡಿ5ರುವ ಅವರು, 'ಲೋಗೋ ಬಿಡುಗಡೆ ಮಾಡುವ ಮೂಲಕ ಕೆಲಸ ಶುರುವಾಗಿದೆ. ನಿಜ ಹೇಳಬೇಕೆಂದರೆ, ಇದು ನಮಗೆ ಬಹಳ ಒಳ್ಳೆಯ ದಿನ. ಸದ್ಯಕ್ಕೆ ವಿಜಯೇಂದ್ರ ಪ್ರಸಾದ್ ಅವರು ಬರವಣಿಗೆ ಮುಗಿಸಿದ್ದು, ಇನ್ನು ಪ್ರೊಡಕ್ಷನ್ ಕೆಲಸಗಳು ಶುರುವಾಗಬೇಕಿದೆ. ಚಿತ್ರವನ್ನು ನಾನೇ ನಿರ್ದೇಶಿಸುತ್ತೇನೆ' ಎಂದು ಅವರು ಹೇಳಿಕೊಂಡಿದ್ದಾರೆ.