

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಭದ್ರತಾ ಪಡೆ ಕಾರ್ಯಾಚರಣೆ ನಡೆಸುತ್ತಿದೆ. ರಿಯಾಸಿಯಲ್ಲಿ ನಡೆದ ಉಗ್ರರ ದಾಳಿಯ ನಂತರ ಜಮ್ಮು ವಿಭಾಗದಲ್ಲಿ ಉಗ್ರರ ದಾಳಿ ಹೆಚ್ಚಾಗಿದೆ. ಈ ಅನುಕ್ರಮದಲ್ಲಿ ಭದ್ರತಾ ಸಿಬ್ಬಂದಿ ಮತ್ತು ಭಯೋತ್ಪಾದಕರ ನಡುವೆ ಹಲವಾರು ಎನ್ಕೌಂಟರ್ಗಳು ನಡೆದಿವೆ. ಈ ಮಧ್ಯೆ ಜಮ್ಮು ಮತ್ತು ಕಾಶ್ಮೀರದ ಕಥುವಾ ಪೊಲೀಸರು ಶನಿವಾರ(ಆಗಸ್ಟ್ 10) ನಾಲ್ವರು ಭಯೋತ್ಪಾದಕರ ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ.
ಸಿಕ್ಕಿರುವ ಮಾಹಿತಿಯ ಪ್ರಕಾರ, ಕಥುವಾ ಪೊಲೀಸರು ಬಿಡುಗಡೆ ಮಾಡಿರುವ ಈ ಸ್ಕೆಚ್ನಲ್ಲಿ ಕಂಡುಬರುವ ಭಯೋತ್ಪಾದಕರು ಕೊನೆಯದಾಗಿ ಮಲ್ಹಾರ್, ಬಾನಿ ಮತ್ತು ಸಿಯೋಜ್ಧಾರ್ನ ಧೋಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಈ ಭಯೋತ್ಪಾದಕರ ಬಗ್ಗೆ ಮಾಹಿತಿ ನೀಡಿದವರಿಗೆ 20 ಲಕ್ಷ ರೂಪಾಯಿ ನಗದು ಬಹುಮಾನವನ್ನೂ ನೀಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಭಯೋತ್ಪಾದಕರ ಬಗ್ಗೆ ವಿಶ್ವಾಸಾರ್ಹ ಮಾಹಿತಿ ನೀಡುವ ಯಾರಿಗಾದರೂ ಸೂಕ್ತ ಬಹುಮಾನ ನೀಡಲಾಗುವುದು. ಪ್ರತಿ ಭಯೋತ್ಪಾದಕನ ಸುಳಿವಿಗೆ 5 ಲಕ್ಷಗಳ ಬಹುಮಾನ ನೀಡಲಾಗುವುದು ಎಂದು ರೇಖಾಚಿತ್ರ ಬಿಡುಗಡೆ ಮಾಡಿರುವ ಕಥುವಾ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
ಜಮ್ಮು ವಿಭಾಗದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಭಯೋತ್ಪಾದಕ ದಾಳಿಯಿಂದಾಗಿ ಭದ್ರತಾ ಪಡೆಗಳು ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ಈ ಯೋಜನೆಯನ್ನು ರೂಪಿಸಿದೆ. ವಿಭಾಗದಲ್ಲಿ 48 ಸ್ಥಳಗಳನ್ನು ಗುರುತಿಸಲಾಗಿದ್ದು ಅಲ್ಲಿ ಸೇನೆ, ಅರೆಸೇನಾ ಪಡೆ ಮತ್ತು ಪೊಲೀಸರನ್ನು ನಿಯೋಜಿಸಲಾಗಿದೆ. (ಏಜೆನ್ಸೀಸ್)