ಬೈಕ್​ಗೆ​ ಡಿಕ್ಕಿ ಹೊಡೆದು 10 ಕಿ.ಮೀ ಎಳೆದೊಯ್ದ ಕಾರು: ರಸ್ತೆಯಲ್ಲೆಲ್ಲ ರಕ್ತದ ಕಲೆ, ಯುವಕರಿಬ್ಬರ ದುರ್ಮರಣ

Car Bike
Published on

ಹೈದರಾಬಾದ್: ಇತ್ತೀಚೆಗೆ ವಾಹನಗಳಲ್ಲಿ ಎಳೆದೊಯ್ದು ಅಮಾನವೀಯವಾಗಿ ಸಾವಿಗೀಡಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ತೆಲಂಗಾಣದ ಜಗ್ತಿಯಾಲ್​ ಜಿಲ್ಲೆಯಲ್ಲಿ ಕಾರೊಂದು ಬೈಕ್​ ಅನ್ನು ಸುಮಾರು 10 ಕಿ.ಮೀ ಎಳೆದೊಯ್ದ ಪರಿಣಾಮ ಇಬ್ಬರು ಯುವಕರು ದುರಂತ ಸಾವಿಗೀಡಾಗಿದ್ದಾರೆ.

ಈ ಘಟನೆ ಜಗ್ತಿಯಾಲ್​ ಜಿಲ್ಲೆಯ ಮಲ್ಯಾಲ ಮಂಡಲದ ಮುತ್ಯಂಪೇಟೆಯಲ್ಲಿ ನಡೆದಿದೆ. ಮೃತರನ್ನು ಮೊಹಮ್ಮದ್​ ಲತೀಫ್​ ಮತ್ತು ಆತನ ಸ್ನೇಹಿತ ಮೊಹಮ್ಮದ್​ ಹಮೀದ್​ ಖಾನ್​ ಎಂದು ಗುರುತಿಸಲಾಗಿದೆ. ಇಬ್ಬರು ಕೂಡ ಕರೀಮ್​ನಗರ ಜಿಲ್ಲೆಯ ಮಾನಕೊಂಡೂರು ಮೂಲದವರು.

ಇಬ್ಬರು ಜ. 26ರಂದು ಮೆಟಪಲ್ಲಿಗೆ ಹಿಂತಿರುಗುತ್ತಿದ್ದರು. ಇದೇ ಸಂದರ್ಭದಲ್ಲಿ ವೇಗವಾಗಿ ಬಂದ ಕಾರೊಂದು ಬೈಕ್​ ಡಿಕ್ಕಿ ಹೊಡೆದಿದೆ. ಈ ವೇಳೆ ಕಾರಿನ ಅಡಿಯಲ್ಲಿ ಬೈಕ್​ ಸಿಲುಕಿದೆ. ಕಾರು ನಿಲ್ಲಿಸದೇ ಸುಮಾರು 10 ಕಿ.ಮೀ ಹಾಗೇ ಎಳೆದುಕೊಂಡ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ.

ಹಮೀದ್​ ಖಾನ್​ ಬೈಕ್​ ಓಡಿಸುತ್ತಿದ್ದ. ಆತನನ್ನು ಬೈಕ್​ ಸಮೇತ ಕಾರು ಚಾಲಕ ಎಳೆದೊಯ್ದಿದ್ದು, ಹಮೀದ್​ ಖಾನ್​ ರಕ್ತ ರಸ್ತೆಯಲ್ಲಿ ಚೆಲ್ಲಿದೆ. ಹಿಂದೆ ಕುಳಿತಿದ್ದ ಅಬ್ದುಲ್ ಲತೀಫ್, ಕಾರು ಡಿಕ್ಕಿಯಾದ ಕೆಳಗಡೆ ಬಿದ್ದಿದ್ದ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಹಮೀದ್​ ಖಾನ್​ ಕೊನೆಯುಸಿರೆಳೆದನು. ಉತ್ತಮ ಚಿಕಿತ್ಸೆಗಾಗಿ ಅಬ್ಧುಲ್​ ಲತೀಫ್​ನನ್ನು ಹೈದರಾಬಾದ್​ನ ನಿಮ್ಸ್​ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸಿದೇ ಮೃತಪಟ್ಟಿದ್ದಾನೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕಾರು ಚಾಲಕ ಸಾಯಿವರ್ಧನ್​ನನ್ನು ಬಂಧಿಸಲಾಗಿದೆ. ಸಾಯಿವರ್ಧನ್ ಜಗಿತಿಯಾಸ್​ ಮೂಲದ ವ್ಯಕ್ತಿ ಎಂದು ಗುರುತಿಸಲಾಗಿದೆ. ಅಪಘಾತಕ್ಕೆ ಅತಿವೇಗವೇ ಕಾರಣ ಎಂದು ಪೊಲೀಸರು ಪ್ರಾಥಮಿಕವಾಗಿ ತನಿಖೆಯಲ್ಲಿ ಪತ್ತೆ ಮಾಡಿದ್ದಾರೆ. ಅಪಘಾತದ ನಿಖರ ಕಾರಣ ತಿಳಿಯಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net