

ಹುಬ್ಬಳ್ಳಿ: ಹೊಸಬರಿಗೆ ಅವಕಾಶ ಕೊಡಿ ಎಂದು ಹೈಕಮಾಂಡ್ನಿಂದ ಕರೆ ಬಂದಿದೆ. ನಾನು ಆರು ಬಾರಿ 25 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದೇನೆ. ಟಿಕೆಟ್ ಕೈ ತಪ್ಪಿಸಲು ಕಾರಣ ಏನೆಂಬುದು ನನಗೆ ತಿಳಿಯಬೇಕಿದೆ. ಈವರೆಗೂ ನನ್ನ ಮೇಲೆ ಯಾವುದೇ ಕಪ್ಪು ಚುಕ್ಕೆ ಇಲ್ಲ. ರಾಯಲ್ ಆಗಿ ಕೆಲಸ ಮಾಡಿದವರಿಗೆ ಗೌರವ ಇಲ್ಲವೇನೋ ಅನ್ನಿಸುತ್ತಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೇರೆಯವರಿಗೆ ಅವಕಾಶ ಕೊಡಿ ಎಂದು ಹೇಳಿದ್ದಾರೆ. ಆದರೆ ಬೇರೆ ಯಾರು ಎನ್ನುವ ಬಗ್ಗೆ ಹೆಸರು ಹೇಳಿಲ್ಲ. ನಾನು ಯಡಿಯೂರಪ್ಪ ಅವರೊಂದಿಗೆ ಮಾತನಾಡಿದ್ದು, ರಾಜಕಾರಣದಲ್ಲಿ ಯಾವಾಗ ಏನು ಆಗುತ್ತದೆ ಗೊತ್ತಿಲ್ಲ. ವೇಟ್ ಆ್ಯಂಡ್ ಸಿ. ಟೈಮ್ ಬಂದಾಗ ಎಲ್ಲಾ ಹೇಳುತ್ತೇನೆ. ವರಿಷ್ಠರ ತೀರ್ಮಾನ ನೋಡಿ ಮುಂದಿನ ನಿರ್ಧಾರ ತಿಳಿಸುತ್ತೇನೆ. ಜನರ ಆಶಿರ್ವಾದವಿದೆ, ನಾನು ಚುನಾವಣೆಗೆ ಸ್ಪರ್ಧಿಸುವುದು ಶತಸಿದ್ಧ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಜಗದೀಶ್ ಶೆಟ್ಟರ್ ಮಾತನಾಡುತ್ತಾ, 30 ವರ್ಷಗಳ ಕಾಲ ಪಕ್ಷ ಸಂಘಟನೆ ಮಾಡಿದವರಿಗೆ ಈ ರೀತಿ ಮಾಡುವುದು ತುಂಬಾ ನೋವು ತಂದಿದೆ. ನಾನು ಚುನಾಣೆಗೆ ನಿಲ್ಲಬಾರದು ಎಂಬ ನಿರ್ಧಾರ ಇದ್ದರೆ ಎರಡು ಮೂರು ತಿಂಗಳ ಹಿಂದೆಯೇ ಹೇಳಬಹುದಿತ್ತು. ವರಿಷ್ಠರು ಈ ನಿರ್ಧಾರವನ್ನ ಹಿಂಪಡೆಯಬೇಕು. ಈ ನಿರ್ಧಾರಕ್ಕೆ ನನ್ನ ಒಪ್ಪಿಗೆ ಇಲ್ಲ ಎಂದು ಹೇಳಿದರು.
ನನಗೆ ಪಕ್ಷದ ಹಾಗೂ ವರಿಷ್ಠರ ಮೇಲೆ ವಿಶ್ವಾಸವಿದ್ದು, ಸ್ಪರ್ಧೆ ಮಾಡಲು ಅವಕಾಶ ನೀಡುತ್ತಾರೆ ಎಂಬ ಅಚಲ ನಂಬಿಕೆ ಇದೆ. ಪಕ್ಷದ ವರಿಷ್ಠರು ಇನ್ನೊಂದು ಬಾರಿ ಚರ್ಚೆ ಮಾಡುವುದಾಗಿ ಹೇಳಿದ್ದಾರೆ. ಹೀಗಾಗಿ ಟಿಕೆಟ್ ಲಭಿಸುವೆ ಭರವಸೆ ಇದೆ. ನಮ್ಮದು ಜನಸಂಘದಿಂದ ಬಂದಂತಹ ಕುಟುಂಬವಾಗಿದ್ದು, ಇನ್ನೂ ಹತ್ತು ವರ್ಷಗಳ ಕಾಲ ನಾನು ಕ್ರಿಯಾಶೀಲವಾಗಿ ಕೆಲಸ ಮಾಡುತ್ತೇನೆ. ರಾಜಕೀಯದಿಂದ ಹಿಂದೆ ಸರಿಯುವ ಮಾತೇ ಇಲ್ಲ. ಪಕ್ಷದ ವರಿಷ್ಠರೊಂದಿಗೆ ಈ ಬಗ್ಗೆ ಮಾತನಾಡಿದ್ದೇನೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ಕೈತಪ್ಪಿದೆ ಎಂಬ ಬಗ್ಗೆ ಮಾಹಿತಿ ಹೊರಬೀಳುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಬೆಂಬಲಿಗರು, ಕಾರ್ಯಕರ್ತರು ಅವರ ಮನೆ ಮುಂದೆ ದೌಡಾಯಿಸಿದ್ದಾರೆ.