

ವಿಜಯವಾಡ: ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಅವರೇ ತಮ್ಮ ಚಿಕ್ಕಪ್ಪ ವಿವೇಕಾನಂದ ರೆಡ್ಡಿ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಎಪಿ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಪುತ್ರ ನಾರಾ ಲೋಕೇಶ್ ಗಂಭೀರ ಆರೋಪ ಮಾಡಿದ್ದಾರೆ.
ಜಗನ್ ಮೋಹನ್ ರೆಡ್ಡಿ ತಮ್ಮ ಸ್ವಂತ ಚಿಕ್ಕಪ್ಪನನ್ನು ಕೊಂದಿದ್ದಾರೆ. ಅವರು ಕುಟುಂಬದ ಮತ್ತಷ್ಟು ಸದಸ್ಯರನ್ನು ಸಹ ಕೊಲ್ಲಲು ಸಿದ್ಧರಿದ್ದಾರೆಯೇ? ರಾಜ್ಯವನ್ನು ನಾಶ ಮಾಡಲು ಅವರು ಸಿದ್ಧರಾಗಿದ್ದಾರೆಯೇ ಎಂದು ಜಗನ್ ಅವರನ್ನು ನಾನು ಕೇಳುತ್ತಿದ್ದೇನೆ ಎಂದು ಅವರು ಶ್ರೀಕಾಕುಳಂನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವಾಗ್ದಾಳಿ ನಡೆಸಿದರು.
ಆಂಧ್ರ ಪ್ರದೇಶದ ಮಾಜಿ ಸಚಿವರಾದ ವೈ.ಎಸ್ ವಿವೇಕಾನಂದ ರೆಡ್ಡಿ ಅವರು 2019ರ ಮಾರ್ಚ್ನಲ್ಲಿ ಕಡಪ ಜಿಲ್ಲೆಯ ತಮ್ಮ ಹುಟ್ಟೂರು ಪುಲಿವೆಂದುಲ ಗ್ರಾಮದಲ್ಲಿ ಹತ್ಯೆಯಾಗಿದ್ದರು.
ನನ್ನ ಚಿಕ್ಕಪ್ಪ, ಮಾಜಿ ಸಚಿವ ವೈಎಸ್ ವಿವೇಕಾನಂದ ರೆಡ್ಡಿ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿಗಳಲ್ಲೊಬ್ಬರು ಎಂದು ಸಿಬಿಐ ಹೆಸರಿಸಿರುವ ವೈಎಸ್ ಶರ್ಮಿಳಾ, ರಾಜಕೀಯ ಕಾರಣಕ್ಕಾಗಿ ಈ ಕೊಲೆ ನಡೆದಿರಬಹುದು ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಬೇರೆ ಬೇರೆ ಆಯಾಮಗಳಿಗೆ ಆಸ್ಪದ ಮಾಡಿಕೊಟ್ಟಿದೆ. ಶರ್ಮಿಳಾ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ.
ಸಿಎಂ ಜಗನ್ ಮೋಹನ್ರೆಡ್ಡಿ ನೇತೃತ್ವದ ವೈಎಸ್ಆರ್ಸಿಪಿ ಸರ್ಕಾರವು ತಮ್ಮ ತಂದೆ ಹಾಗೂ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರನ್ನು 'ಅಕ್ರಮವಾಗಿ' 53 ದಿನಗಳ ಕಾಲ ಜೈಲಿನಲ್ಲಿ ಇರಿಸಿತ್ತು ಎಂದು ನಾರಾ ಲೋಕೇಶ್ ಆರೋಪ ಮಾಡಿದರು.
ಕಳೆದ ನಾಲ್ಕು ವರ್ಷಗಳಲ್ಲಿ ಟಿಡಿಪಿ ಕಾರ್ಯಕರ್ತರ ವಿರುದ್ಧ ಅನೇಕ ಪ್ರಕರಣಗಳನ್ನು ದಾಖಲಿಸಲಾಗಿದೆ. ನನ್ನ ಮೇಲೆಯೇ 22 ಕೇಸ್ಗಳನ್ನು ಹಾಕಲಾಗಿದೆ. ಇದರಲ್ಲಿ ಕೊಲೆ ಪ್ರಯತ್ನ ಮತ್ತು ದೌರ್ಜನ್ಯ ಆರೋಪಗಳೂ ಇವೆ. ಅಧಿಕಾರಿಗಳು ಮತ್ತು ವೈಎಸ್ಆರ್ಸಿಪಿ ನಾಯಕರು ಉದ್ದೇಶಪೂರ್ವಕವಾಗಿ ಟಿಡಿಪಿ ನಾಯಕರಿಗೆ ತೊಂದರೆ ನೀಡುತ್ತಿದ್ದಾರೆ. ಅವರ ಹೆಸರನ್ನು ಸಂಕೇತದ ರೂಪದಲ್ಲಿ 'ರೆಡ್ ಬುಕ್'ನಲ್ಲಿ ದಾಖಲಿಸಲಾಗಿದೆ ಎಂದು ಸವಾಲ್ ಹಾಕಿದರು.
ಸಿಎಂ ಜಗನ್ ವಿರುದ್ಧ ವಾಗ್ದಾಳಿ ಮುಂದುವರಿಸಿದ ನಾರಾ ಲೋಕೇಶ್, ಅವರು ರಾಜ್ಯವನ್ನು ಭಾರತದ ಗಾಂಜಾ ರಾಜಧಾನಿಯನ್ನಾಗಿ ಮಾಡಿದ್ದಾರೆ ಎಂದು ಆರೋಪಿಸಿದರು.
ಸಿಎಂ ಜಗನ್ ಮೋಹನ್ ರೆಡ್ಡಿ ಅವರನ್ನು ಜೈಲಿಗೆ ಕಳುಹಿಸಲು ಜನರು ಸಿದ್ಧರಿದ್ದೀರಾ ಎಂದು ನಾರಾ ಲೋಕೇಶ್ ಪ್ರಶ್ನಿಸಿದರು. ಅಮರನಾಥ ಗೌಡ್ರಂತಹ ಹಿಂದುಳಿದ ವರ್ಗದ ಮತ್ತಷ್ಟು ಮಕ್ಕಳನ್ನು ಹಾಗೂ ಡಾ.ಸುಧಾಕರ್ ಅವರಂತಹ ದಲಿತರನ್ನು ಕೊಲ್ಲಲು ಜಗನ್ ರೆಡ್ಡಿ ಸಿದ್ಧರಾಗಿದ್ದಾರಾ? ಎಂದು ಪ್ರಶ್ನಿಸಿದರು.
ಅಧಿಕಾರಿಗಳ ಸಾವಿಗೆ ಜಗನ್ ಕಾರಣ: ಭೂ ಕಬಳಿಕೆಯಲ್ಲಿ ತಮಗೆ ಸಹಕಾರ ನೀಡದ ಕಾರಣಕ್ಕೆ ತಹಶೀಲ್ದಾರ್ ರಾಮಯ್ಯ ಅವರನ್ನು ವಿಶಾಖಪಟ್ಟಣಂದಲ್ಲಿ ಅವರು ಕೊಂದು ಹಾಕಿದರು. ಬಾಪಟ್ಲಾ ಜಿಲ್ಲೆಯ ಆರ್ಬಿಕೆಯಲ್ಲಿ (ರೈತು ಭರೋಸಾ ಕೇಂದ್ರ) ಕೆಲಸ ಮಾಡುತ್ತಿದ್ದ ಕೃಷಿ ಸಹಾಯಕ ಅಧಿಕಾರಿ ಪೂಜಿತಾ ಅವರು ಆತ್ಮಹತ್ಯೆ ಮಾಡಿಕೊಂಡರು. ವಿಜಿಯನಗರಂ ಜಿಲ್ಲೆಯ ಪಂಚಾಯತ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಜೆಇ ರಾಮಕೃಷ್ಣ ಅವರು ಫ್ಯಾನ್ಗೆ ನೇಣು ಹಾಕಿಕೊಂಡರು. ವೈಎಸ್ಆರ್ಸಿಪಿ ನಾಯಕರು ಮರಳು ಮತ್ತು ಕಬ್ಬಿಣ ಕದಿಯುವುದಕ್ಕೆ ಅವರು ವಿರೋಧ ವ್ಯಕ್ತಪಡಿಸಿದಾಗ ಅವರಿಗೆ ಕಿರುಕುಳ ನೀಡಿದರು. ಅವರು ಈ ದುಡುಕಿನ ನಿರ್ಧಾರ ತೆಗೆದುಕೊಳ್ಳುವಂತಾಯಿತು" ಎಂದು ಲೊಕೇಶ್ ಹೇಳಿದರು.
ಸಿಎಂ ಜಗನ್ ಆಂಧ್ರಪ್ರದೇಶದ ಯುವಕರನ್ನು ಮೋಸ ಮಾಡಿದ್ದಾರೆ ಎಂದು ಆರೋಪಿಸಿರುವ ನಾರಾ ಲೋಕೇಶ್, ಅವರು ಕಳೆದ ನಾಲ್ಕು ವರ್ಷಗಳಲ್ಲಿ ಡಿಎಸ್ಸಿ (ಜಿಲ್ಲಾ ಆಯ್ಕೆ ಸಮಿತಿ) ಅಧಿಸೂಚನೆಯನ್ನು ಬಿಡುಗಡೆ ಮಾಡಿಲ್ಲ ಎಂದು ಕಿಡಿಕಾಡಿದರು.
ಸಿಎಂ ಜಗನ್ 6,100 ಹುದ್ದೆಗಳಿಗೆ ಡಿಎಸ್ಸಿ ಅಧಿಸೂಚನೆಯನ್ನು ಬಿಡುಗಡೆ ಮಾಡುವ ಭರವಸೆಯೊಂದಿಗೆ ಜನರನ್ನು ಮರುಳು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಟಿಡಿಪಿ ಸರ್ಕಾರವನ್ನು ರಚಿಸುತ್ತದೆ ಮತ್ತು ಪ್ರತಿ ವರ್ಷ ಡಿಎಸ್ಸಿ ಪರೀಕ್ಷೆಯನ್ನು ನಡೆಸುತ್ತದೆ ಎಂದು ನಾರಾ ಲೋಕೇಶ್ ಹೇಳಿದರು.