ಗಾಳಿಯಲ್ಲಿ ಗುಂಡು ಹಾರಿಸಿದ ಗನ್​ಮ್ಯಾನ್!​ ಬಿಗ್ ಬಾಸ್​ ಸ್ಪರ್ಧಿ ಜಗದೀಶ್​ಗೆ ರಕ್ತ ಬರುವಂತೆ ಥಳಿಸಿದ ಪುಂಡರು | Lawyer Jagadish

ವಿಜಯವಾಣಿ - 2025-01-25T070322.957
Published on

Bengaluru: ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುವ ಬಿಗ್ ಬಾಸ್ ಸೀಸನ್​ 11ರ​ ಸ್ಪರ್ಧಿ ಲಾಯರ್​ ಜಗದೀಶ್ (Lawyer Jagadish)​, ಇದೀಗ ಮಾರಣಾಂತಿಕ ಹಲ್ಲೆಗೆ ಸಿಲುಕಿ, ಗಂಭೀರವಾಗಿ ಗಾಯಗೊಂಡಿದ್ದಾರೆ.

ಯುವಕರ ಜತೆಗೆ ಕಿರಿಕ್​

ಮೊನ್ನೆಯಷ್ಟೇ (ಜ.23) ಯುವಕರೊಂದಿಗೆ ಜಟಾಪಟಿ ಮಾಡಿಕೊಂಡಿದ್ದ ಜಗದೀಶ್​, ನಿನ್ನೆ (ಜ.24) ಕೊಡಿಗೆಹಳ್ಳಿಯಲ್ಲಿರುವ ತಮ್ಮ ನಿವಾಸಕ್ಕೆ ತೆರಳುವ ಮಾರ್ಗವನ್ನು ಅಣ್ಣಮ್ಮ ಕೂರಿಸುವ ಸಲುವಾಗಿ ಯುವಕರು ಬಂದ್​ ಮಾಡಿದ್ದನ್ನು ಪ್ರಶ್ನಿಸಿ, ಕಿರಿಕ್​ ಮಾಡಿದ್ದಾರೆ. ಸಾರ್ವಜನಿಕ ರಸ್ತೆಯನ್ನು ಬಂದ್​ ಮಾಡಿದ್ದಕ್ಕಾಗಿ ಸ್ಥಳೀಯ ಯುವಕರ ಜತೆಗೆ ವಾಗ್ವಾದಕ್ಕಿಳಿದ ಜಗದೀಶ್​, ಯುವಕರ ಗುಂಪಿನೊಂದಿಗೆ ಕೆಲ ಸಮಯ ಮಾತಿನ ಚಕಮಕಿಯಲ್ಲಿ ತೊಡಗಿದ್ದರು. ಈ​ ವೇಳೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸುತ್ತುವರೆದರು.

ಮೂಗಿನಿಂದ ರಕ್ತ

ಜಗದೀಶ್​ ನಡೆಯಿಂದ ಕುಪಿತಗೊಂಡ ಸ್ಥಳೀಯ ಯುವಕರು ಅವರ ಸ್ಕಾರ್ಪಿಯೋ ಕಾರಿನ ಮೇಲೆ ದಾಳಿ ನಡೆಸಿದ್ದು, ಕಾರನ್ನು ಹೊಡೆದು ಚಿಂದಿ ಮಾಡಿದ್ದಾರೆ. ಈ ಬೆಳವಣಿಗೆಯನ್ನು ಗಮನಿಸಿದ ಜಗದೀಶ್​ ಗನ್​ಮ್ಯಾನ್​ ತಕ್ಷಣವೇ ತಮ್ಮ ಬಳಿಯಿದ್ದ ಬಂದೂಕಿನಿಂದ ಗಾಳಿಯಲ್ಲಿ ಗುಂಡನ್ನು ಹಾರಿಸಿದ್ದಾರೆ. ಗುಂಡಿನ ಶಬ್ದಕ್ಕೆ ಯುವಕರ ಗುಂಪು ಚದುರಿತು. ತದನಂತರ ಜಗದೀಶ್​ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವುದು ವರದಿಗಳ ಮೂಲಕ ಸ್ಪಷ್ಟವಾಗಿದೆ.

ಜಗದೀಶ್​ ಮುಖಕ್ಕೆ ಗುದ್ದಿ, ರಕ್ತ ಬರುವಂತೆ ಥಳಿಸಿದ ಪುಂಡರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸುವುದಾಗಿ ಹೇಳಿದ್ದಾರೆ. ಮನೆಗೆ ಹಿಂತಿರುಗಿದ ಮೇಲೂ ಕೆಲವರು ಜಗದೀಶ್​ ನಿವಾಸದ ಮುಂದೆ ಗಲಾಟೆ ಮಾಡಿ, ಮತ್ತೊಮ್ಮೆ ಅವರನ್ನು ಜಟಾಪಟಿಗೆ ಇಳಿಯುವಂತೆ ಪ್ರಚೋದಿಸಿದ್ದಾರೆ ಎಂದು ಹೇಳಲಾಗಿದೆ.

ಇಷ್ಟೆಲ್ಲ ರಂಪಾಟಕ್ಕೆ ಕಾರಣವೇನು?

ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿರುವ ತಮ್ಮ ನಿವಾಸವನ್ನು ಸಂಪರ್ಕಿಸುವ ಮಾರ್ಗವೊಂದರಲ್ಲಿ ಸ್ಥಳೀಯ ಯುವಕರು ಅಣ್ಣಮ್ಮ ಕೂರಿಸುವ ಸಲುವಾಗಿ ರಸ್ತೆಯನ್ನು ಬಂದ್​ ಮಾಡಿದ್ದರು. ಇದೇ ವಿಚಾರಕ್ಕೆ ಜಗದೀಶ್​ ಮತ್ತು ಅಲ್ಲಿನ ಯುವಕರ ಮಧ್ಯೆ ಗುದ್ದಾಟ ನಡೆದಿತ್ತು (ಜ.23). ಇದರ ವಿಡಿಯೋ ಕೂಡ ಜಾಲತಾಣಗಳಲ್ಲಿ ಹರಿದಾಡಿತ್ತು. ನಿನ್ನೆ (ಜ.24) ರಾತ್ರಿ ಸುಮಾರು 9 ಗಂಟೆಗೆ ಅದೇ ಮಾರ್ಗದಲ್ಲಿ ತನ್ನ ಕಾರಿನಲ್ಲಿ ಬಂದ ಜಗದೀಶ್​, ರಸ್ತೆ ಬಂದ್​ ಮಾಡಿದ್ದಕ್ಕಾಗಿ ಯುವಕರನ್ನು ತಮ್ಮದೇ ಶೈಲಿಯಲ್ಲಿ ಪ್ರಶ್ನಿಸಿದ್ದಾರೆ. ಈ ವಿಷಯಕ್ಕೆ ಇಬ್ಬರ ನಡುವೆ ಮಾರಾಮಾರಿ ನಡೆದು, ಪುಂಡರು ಜಗದೀಶ್​ ಕಾರನ್ನು ಪುಡಿಗಟ್ಟಿ, ಅವರ ಮೇಲೆ ಗಂಭೀರವಾಗಿ ಹಲ್ಲೆಗೈದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net