ವಾಷಿಂಗ್ಟನ್: ಜನ್ಮಸಿದ್ಧ ಪೌರತ್ವ ರದ್ದುಪಡಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರಡಿಸಿದ್ದ ಕಾರ್ಯಕಾರಿ ಆದೇಶಕ್ಕೆ ಫೆಡರಲ್ ನ್ಯಾಯಾಧೀಶರು ತಡೆ ನೀಡಿದ್ದಾರೆ.
ಟ್ರಂಪ್ ಆದೇಶ ಪ್ರಶ್ನಿಸಿ 22 ರಾಜ್ಯಗಳು ಒಟ್ಟು 5 ಅರ್ಜಿಗಳನ್ನು ಕೋರ್ಟ್ನಲ್ಲಿ ದಾಖಲಿಸಿದ್ದವು. ಸಂವಿಧಾನದ 14ನೇ ತಿದ್ದುಪಡಿ ಮತ್ತು ಸುಪ್ರೀಂ ಕೋರ್ಟ್ನ ತೀರ್ಪು ಜನ್ಮಸಿದ್ಧ ಪೌರತ್ವ ಹಕ್ಕನ್ನು ದೃಢಪಡಿಸಿವೆ ಎಂದು ಈ ರಾಜ್ಯಗಳು ಅರ್ಜಿಯಲ್ಲಿ ತಿಳಿಸಿದ್ದವು. ವಾಷಿಂಗ್ಟನ್, ಅರಿಜೋನಾ, ಇಲಿನಾಯ್್ಸ ಮತ್ತು ಒರೆಗಾನ್ ರಾಜ್ಯಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಅಮೆರಿಕದ ಸಿಯಾಟಲ್ ಡಿಸ್ಟ್ರಿಕ್ಟ್ ಜಡ್ಜ್ ಜಾನ್ ಸಿ. ಕಫ್ನೌರ್ ಟ್ರಂಪ್ ಆದೇಶಕ್ಕೆ ತಾತ್ಕಾಲಿಕ ತಡೆ ನೀಡಿದ್ದಾರೆ. ಆದೇಶಕ್ಕೆ ಜಡ್ಜ್ ತಡೆ ನೀಡಿರುವ ಹಿನ್ನೆಲೆಯಲ್ಲಿ ಮೇಲ್ಮನವಿ ಸಲ್ಲಿಸಲು ಟ್ರಂಪ್ ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
538 ಜನರ ಬಂಧನ: ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಟ್ರಂಪ್ ಘೋಷಿಸಿದ ಬೆನ್ನಲ್ಲೇ 3 ದಿನದಲ್ಲಿ ಒಟ್ಟು 538 ಅಕ್ರಮ ವಲಸಿಗರನ್ನು ಬಂಧಿಸಲಾಗಿದ್ದು, ನೂರಾರು ವಲಸಿಗರನ್ನು ಗಡಿಪಾರು ಮಾಡಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಶ್ವೇತ ಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೊಲೀನ್ ಲಿವಿಟ್ ‘ಟ್ರಂಪ್ ಆಡಳಿತ 538 ಅಕ್ರಮ ವಲಸಿಗರನ್ನು ಬಂಧಿಸಿದೆ. ಬಂಧಿತರಲ್ಲಿ ಶಂಕಿತ ಭಯೋತ್ಪಾದಕರು, ಟ್ರೇನ್ ಡಿ ಅರುಗುವಾ ಗ್ಯಾಂಗ್ನ ನಾಲ್ವರು ಸದಸ್ಯರು, ಅಪ್ರಾಪ್ತ ವಯಸ್ಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಶಿಕ್ಷೆಗೊಳಗಾಗಿದ್ದವರೂ ಸೇರಿದ್ದಾರೆ. ಈಗಾಗಲೇ ಮಿಲಿಟರಿ ವಿಮಾನಗಳಲ್ಲಿ ನೂರಾರು ಅಕ್ರಮ ವಲಸಿಗರನ್ನು ಗಡಿಪಾರು ಮಾಡಲಾಗಿದೆ. ಇತಿಹಾಸದ ಅತಿದೊಡ್ಡ ಗಡಿಪಾರು ಪ್ರಕ್ರಿಯೆ ಆರಂಭವಾಗಿದೆ’ ಎಂದು ತಿಳಿಸಿದ್ದಾರೆ.
ಭಾರತೀಯರ ಮೇಲೆ ಏನು ಪರಿಣಾಮ?: ಅಮೆರಿಕದಲ್ಲಿ ಒಟ್ಟು 52 ಲಕ್ಷ ಭಾರತೀಯರು ವಾಸಿಸುತ್ತಿದ್ದು, ಅಮೆರಿಕದಲ್ಲಿರುವ ಎರಡನೇ ಅತಿದೊಡ್ಡ ವಲಸಿಗ ಸಮುದಾಯವಾಗಿದೆ. ಸಕ್ರಮ ವಲಸಿಗರ ಜತೆಯಲ್ಲೇ ಸಾಕಷ್ಟು ಅಕ್ರಮ ವಲಸಿಗರೂ ಇದ್ದು 2022 ರಲ್ಲಿ ಅಮೆರಿಕದ ಹೋಮ್ ಲ್ಯಾಂಡ್ ಸೆಕ್ಯುರಿಟಿ ದಾಖಲಿಸಿರುವಂತೆ ಭಾರತದ 2.2 ಲಕ್ಷ ಅಕ್ರಮ ವಲಸಿಗರು ಅಮೆರಿಕದಲ್ಲಿ ನೆಲೆಸಿದ್ದಾರೆ. ಹಾಗಾಗಿ ಟ್ರಂಪ್ ತೆಗೆದುಕೊಂಡಿರುವ ನಿರ್ಧಾರ ಮಗುವಿನ ಜನನದ ಆಧಾರದಲ್ಲಿಅಮೆರಿಕ ಪೌರತ್ವ ಪಡೆಯಲು ಬಯಸುತ್ತಿರುವ ಭಾರತೀಯರಿಗೆ ಹಿನ್ನಡೆಯುಂಟು ಮಾಡಿದೆ. ಇನ್ನು 8 ಮತ್ತು 9ನೇ ತಿಂಗಳ ಗರ್ಭಿಣಿಯರಲ್ಲಿ ಹಲವರು ಟ್ರಂಪ್ ನೀಡಿರುವ ಗಡುವಿನೊಳಗೆ ಮಗುವಿಗೆ ಜನ್ಮ ನೀಡಲು ಸಿಸೇರಿಯನ್ ಮೊರೆ ಹೋಗುತ್ತಿದ್ದಾರೆ ಎಂದೂ ವರದಿಯಾಗುತ್ತಿದೆ.
ತೈಲ ಬೆಲೆ ಕಡಿತಕ್ಕೆ ಆಗ್ರಹ: ದಾವೋಸ್ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಯಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಮಾತನಾಡಿದ ಡೊನಾಲ್ಡ್ ಟ್ರಂಪ್, ಸೌದಿ ಅರೇಬಿಯಾ ಮತ್ತು ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ (ಒಪಿಇಸಿ) ಕಚ್ಚಾ ತೈಲ ಬೆಲೆಯನ್ನು ಕಡಿಮೆ ಮಾಡುವ ಮೂಲಕ ರಷ್ಯಾ-ಯೂಕ್ರೇನ್ ಯುದ್ಧವನ್ನು ನಿಲ್ಲಿಸಲು ನೆರವಾಗಬೇಕು. ಕಚ್ಚಾ ತೈಲ ಬೆಲೆ ಕಡಿಮೆಯಾದರೆ ಯುದ್ಧ ತಕ್ಷಣವೇ ನಿಲ್ಲಲಿದೆ ಎಂದು ತಿಳಿಸಿದ್ದಾರೆ. ಓವಲ್ ಆಫೀಸ್ ನಲ್ಲಿ ಗುರುವಾರ ಮಾತನಾಡಿದ ಟ್ರಂಪ್ ‘ಯೂಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸಿ್ಕ ಯುದ್ಧ ನಿಲ್ಲಿಸಲು ಕದನವಿರಾಮ ಒಪ್ಪಂದ ಮಾಡಿಕೊಳ್ಳಲು ಸಿದ್ಧರಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಸಹ ಮಾತುಕತೆಗೆ ಸಿದ್ಧರಾಗಬೇಕು. ಈಗಾಗಲೇ ಎರಡೂ ಸೇನೆಗೆ ಅಪಾರ ಹಾನಿಯಾಗಿದೆ. ರಷ್ಯಾ ಎಂಟು ಲಕ್ಷಕ್ಕೂ ಹೆಚ್ಚು ಸೈನಿಕರನ್ನು ಕಳೆದುಕೊಂಡಿದೆ’ ಎಂದರು.
ಕೆಲಸ ತೊರೆಯುತ್ತಿರುವ ವಿದ್ಯಾರ್ಥಿಗಳು: ಅಮೆರಿಕದಲ್ಲಿ ವಿದ್ಯಾಭ್ಯಾಸಕ್ಕಾಗಿ ತೆರಳಿರುವ ಭಾರತೀಯ ವಿದ್ಯಾರ್ಥಿಗಳು ಟ್ರಂಪ್ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ತಾವು ಮಾಡುತ್ತಿದ್ದ ಪಾರ್ಟ್ ಟೈಮ್ ಕೆಲಸವನ್ನು ತೊರೆಯುತ್ತಿದ್ದಾರೆ. ಅಮೆರಿಕಕ್ಕೆ ವಿದ್ಯಾಭ್ಯಾಸಕ್ಕಾಗಿ ಬರುವವರಿಗೆ ಎಫ್ -1 ವೀಸಾ ನೀಡಲಾಗುತ್ತದೆ. ಈ ವೀಸಾ ಅಡಿ ಕಾಲೇಜು ಕ್ಯಾಂಪಸ್ ನಲ್ಲಿ ವಾರಕ್ಕೆ 20 ಗಂಟೆ ಕೆಲಸ ಮಾಡಲು ಅವಕಾಶ ಇರುತ್ತದೆ. ಆದರೆ ಹಲವು ವಿದ್ಯಾರ್ಥಿಗಳು ಬಾಡಿಗೆ, ತಮ್ಮ ಖರ್ಚುಗಳನ್ನು ಸರಿದೂಗಿಸಲು ಕ್ಯಾಂಪಸ್ ಹೊರಗೆ ಅನಧಿಕೃತವಾಗಿ ಪೆಟ್ರೋಲ್ ಬಂಕ್ ಗಳೂ, ರೆಸ್ಟೋರೆಂಟ್, ರಿಟೇಲ್ ಅಂಗಡಿಗಳಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುತ್ತಾರೆ. ಆದರೆ ಟ್ರಂಪ್ ಆಡಳಿತ ಹೊಸ ವಲಸೆ ನೀತಿಗಳ ಅಡಿ ಅಕ್ರಮವಾಗಿ ಕೆಲಸ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು ಎಂಬ ಸುದ್ದಿ ಹರಡಿದೆ. ಈ ಹಿನ್ನೆಲೆಯಲ್ಲಿ ತಮ್ಮ ಶೈಕ್ಷಣಿಕ ಭವಿಷ್ಯಕ್ಕಾಗಿ ಪಾರ್ಟ್ ಟೈಮ್ ಉದ್ಯೋಗವನ್ನು ತೊರೆಯುತ್ತಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳ ಪೋಷಕರಿಗೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ.
30 ದೇಶದಲ್ಲಿ ಜನ್ಮಸಿದ್ಧ ಪೌರತ್ವ: ವಿಶ್ವದಲ್ಲಿ ಒಟ್ಟು 30 ದೇಶಗಳಲ್ಲಿ ಜನ್ಮಸಿದ್ಧ ಪೌರತ್ವ ದೊರೆಯುತ್ತಿದೆ. ಅಮೆರಿಕ, ಕೆನಡಾ, ಮೆಕ್ಸಿಕೋ, ಬ್ರೆಜಿಲ್ ಸೇರಿದಂತೆ ದಕ್ಷಿಣ ಅಮೆರಿಕ ಖಂಡ ಮತ್ತು ಮಧ್ಯ ಅಮೆರಿಕದ ಬಹುತೇಕ ರಾಷ್ಟ್ರಗಳು ಜನ್ಮಸಿದ್ಧ ಪೌರತ್ವವನ್ನು ನೀಡುತ್ತಿವೆ. ಭಾರತ ಜನ್ಮಸಿದ್ಧ ಪೌರತ್ವ ಹಕ್ಕು ನೀಡಲಾಗಿಲ್ಲ. ಇಲ್ಲಿ ಪೋಷಕರಲ್ಲಿ ಒಬ್ಬರು ಭಾರತೀಯ ಪ್ರಜೆಯಾಗಿದ್ದರೆ ಮಾತ್ರ ಮಗುವಿಗೆ ಪೌರತ್ವ ಸಿಗುತ್ತದೆ. 2022ರ ವರದಿಯನ್ವಯ ಅಮೆರಿದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ತಾಯಂದರಿಗೆ ಒಟ್ಟು 2,55,000 ಮಕ್ಕಳು ಜನಿಸಿವೆ. ಇದೇ ವೇಳೆ ಅಕ್ರಮವಾಗಿ ವಾಸಿಸುತ್ತಿರುವ ಇಬ್ಬರೂ ಪೋಷಕರಿಗೆ 1,53,000 ಮಕ್ಕಳು ಜನಿಸಿವೆ.
ಟ್ರಂಪ್ ಸಮಾರಂಭದಲ್ಲಿ ಪನ್ನೂನ್, ಭಾರತ ಆಕ್ಷೇಪ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನೂನ್ ಭಾಗವಹಿಸಿದ್ದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿರುವ ಭಾರತ, ರಾಷ್ಟ್ರೀಯ ಭದ್ರತೆ ಮೇಲೆ ಪರಿಣಾಮ ಬೀರುವ ಇಂಥ ವಿಷಯಗಳನ್ನು ಅಮೆರಿಕದೊಂದಿಗೆ ರ್ಚಚಿಸುವು ದಾಗಿ ಹೇಳಿದೆ. ಟ್ರಂಪ್ ಪದಗ್ರಹಣ ಕಾರ್ಯಕ್ರಮದಲ್ಲಿ ಜನರ ಗುಂಪು ‘ಯುಎಸ್ಎ, ಯುಎಸ್ಎ’ ಎಂದು ಹೇಳಿ ಸಂಭ್ರಮಿಸುತ್ತಿದ್ದಾಗ, ಗುಂಪಿನ ನಡುವೆ ಇದ್ದ ಪನ್ನೂನ್ ‘ಖಲಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ್ದು ವಿಡಿಯೋ ದೃಶ್ಯಗಳಲ್ಲಿ ಕಂಡು ಬಂದಿದೆ. ‘ಭಾರತ-ವಿರೋಧಿ ಚಟುವಟಿಕೆ ನಡೆದಾಗಲೆಲ್ಲ ಅದನ್ನು ಅಮೆರಿಕ ಸರ್ಕಾರದ ಗಮನಕ್ಕೆ ತರುತ್ತೇವೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ. ಜನವರಿ 20ರಂದು, 2ನೇ ಬಾರಿ ಅಮೆರಿಕ ಅಧ್ಯಕ್ಷರಾಗಿ ಟ್ರಂಪ್ ಪದಗ್ರಹಣ ಸ್ವೀಕರಿಸುವ ಸಮಾರಂಭ ನಡೆದ ಲಿಬರ್ಟಿ ಹಾಲ್ನಲ್ಲಿ ಪನ್ನೂನ್ ಕಾಣಿಸಿಕೊಂಡಿದ್ದ. ಕಾರ್ಯಕ್ರಮಕ್ಕೆ ಪನ್ನೂನ್ಗೆ ಆಹ್ವಾನವಿರಲಿಲ್ಲ. ಆದರೆ ಯಾವುದೋ ಸಂಪರ್ಕವನ್ನು ಬಳಸಿ ಟಿಕೆಟ್ ಪಡೆದು ಭಾಗವಹಿಸಿದ್ದ ಎಂದು ಮಾಧ್ಯಮವೊಂದು ವರದಿ ಮಾಡಿದೆ.