

Samantha : ನಟ ನಾಗಚೈತನ್ಯ ಅವರಿಂದ ವಿಚ್ಛೇದನ ಪಡೆದ ನಂತರ ನಟಿ ಸಮಂತಾ ಅವರ ಮದುವೆಯ ಬಗ್ಗೆ ಅನೇಕ ಗಾಸಿಪ್ ಹರಡಿದ್ದು ನಿಮಗೆಲ್ಲರಿಗೂ ಗೊತ್ತೇ ಇದೆ. ಬಾಲಿವುಡ್ ನಿರ್ದೇಶಕ ರಾಜ್ ನಿಧಿಮೋರು ಅವರನ್ನು ಸಮಂತಾ ಪ್ರೀತಿ ಮಾಡುತ್ತಿದ್ದಾರೆ ಎಂಬ ವದಂತಿಗಳು ಸಹ ಇವೆ. ಇದೀಗ, ಇಬ್ಬರು ಒಟ್ಟಿಗೆ, ಆತ್ಮೀಯವಾಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವದಂತಿಗೆ ಪುಷ್ಟಿ ನೀಡಿದೆ.
ಅಂದಹಾಗೆ, ಇಷ್ಟು ದಿನ ನಾಯಕಿಯಾಗಿದ್ದ ಸಮಂತಾ, ಇದೀಗ ನಿರ್ಮಾಪಕಿಯಾಗಿ ಬಡ್ತಿ ಪಡೆದಿದ್ದಾರೆ. ತಮ್ಮದೇ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಶುಭಂ ಚಿತ್ರದ ಮೂಲಕ ನಿರ್ಮಾಪಕಿಯಾಗಿ ಹೊಸ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಶುಭಂ ಚಿತ್ರ ಮೇ 9ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸದ್ಯ ಸಮಂತಾ ಈ ಚಿತ್ರದ ಯಶಸ್ಸನ್ನು ಆನಂದಿಸುತ್ತಿದ್ದಾರೆ. ಇತ್ತೀಚೆಗೆ ಕೆಲವರ ಜತೆ ಸೇರಿ ಚಿತ್ರಮಂದಿರದಲ್ಲಿ ಶುಭಂ ಚಿತ್ರವನ್ನು ನೋಡಿರುವ ಸಮಂತಾ, ಅದಕ್ಕೆ ಸಂಬಂಧಿಸಿದ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೋಗಳಲ್ಲಿ ಬಾಲಿವುಡ್ ನಿರ್ದೇಶಕ ರಾಜ್ ನಿಧಿಮೋರು ಕೂಡ ಸ್ಯಾಮ್ ಜೊತೆ ಇದ್ದಾರೆ. ಅಲ್ಲದೆ, ಶುಭಂ ವೀಕ್ಷಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ಸಮಂತಾ ಅವರು ರಾಜ್ ನಿಧಿಮೋರು ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗೆ ಈ ಫೋಟೋ ಸಾಕ್ಷಿಯಂತಿದೆ. ಸಮಂತಾ ನಟನೆಯ ಸಿಟಾಡೆಲ್ ವೆಬ್ಸರಣಿಯ ನಿರ್ದೇಶಕರಲ್ಲಿ ರಾಜ್ ನಿಧಿಮೋರು ಕೂಡ ಒಬ್ಬರು. ಸಮಂತಾ ಈಗಾಗಲೇ ಅವರೊಂದಿಗೆ ಅನೇಕ ವೇದಿಕೆಗಳಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ, ಪಿಕಲ್ ಬಾಲ್ ಲೀಗ್‌ನಲ್ಲಿ ಅವರಿಬ್ಬರೂ ಒಟ್ಟಿಗೆ ವೇದಿಕೆಯಲ್ಲಿ ಮಿಂಚಿದರು. ಆಗಲೂ, ರಾಜ್ ಜೊತೆ ಸ್ಯಾಮ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವರದಿಗಳು ಬಂದವು.
ಇದೀಗ, ಸಮಂತಾ ಹಂಚಿಕೊಂಡಿರುವ ಫೋಟೋಗಳಲ್ಲಿ, ವಿಮಾನದಲ್ಲಿ ರಾಜ್ ಅವರ ಹೆಗಲ ಮೇಲೆ ತಲೆಯಿಟ್ಟು ತುಂಬಾ ಹತ್ತಿರದಿಂದ ಆತ್ಮೀಯವಾಗಿ ಪೋಸ್ ನೀಡಿದ್ದಾರೆ. ಈ ಫೋಟೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಬಗೆ ಬಗೆಯ ಕಾಮೆಂಟ್ಗಳನ್ನು ಹರಿಬಿಡುತ್ತಿದ್ದಾರೆ. ನೆಟ್ಟಿಗರೊಬ್ಬರು "ಸಮಂತಾ ವಿತ್ ರಾಜ್" ಎಂದು ಬರೆದಿದ್ದಾರೆ. ಮತ್ತೊಬ್ಬರು ಇದು ಸಮಂತಾರ ಪ್ರೀತಿಯ ದೃಢೀಕರಣ ಎಂದು ಕಾಮೆಂಟ್ ಮಾಡಿದ್ದಾರೆ.
ಅಂದಹಾಗೆ, ಸಮಂತಾ ಆಗಲಿ ಅಥವಾ ರಾಜ್ ಆಗಲಿ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಹರಿದಾಡುತ್ತಿರುವ ವದಂತಿಗಳಿಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. (ಏಜೆನ್ಸೀಸ್)