

Rima Kallingal : ಕಷ್ಟ-ಸುಖ, ನೋವು-ನಲಿವು ಹಾಗೂ ದೇಹ ಎಲ್ಲವನ್ನು ಹಂಚಿಕೊಳ್ಳುವ ಗಂಡ-ಹೆಂಡತಿ ನಡುವಿನ ಸಂಬಂಧ ಶ್ರೇಷ್ಠವಾದದ್ದು. ಇಬ್ಬರು ಕೂಡಿ ಬಾಳಿದರೆ ಬದುಕೇ ಸ್ವರ್ಗವಾಗುತ್ತದೆ. ಯಾವುದೇ ಪರಿಸ್ಥಿತಿ ಬರಲಿ ತಾಳ್ಮೆಯಿಂದ ತಮ್ಮ ತಿಳುವಳಿಕೆಯ ಮೂಲಕ ಎಲ್ಲವನ್ನು ಸರಿದೂಗಿಸಿಕೊಂಡು ಹೋದರೆ ಏನೇ ಸಮಸ್ಯೆ ಬಂದರು ಪರಿಹರಿಸಬಹುದು. ಸಂಬಂಧದಲ್ಲಿ ಒಂದು ಚೂರು ಬಿರುಕು ಮೂಡಿದರು ಬದಕೇ ದುಃಖಮಯವಾಗುತ್ತದೆ. ಅದೇ ರೀತಿ ಇಂದು ಸಣ್ಣ ಸಣ್ಣ ವಿಚಾರಗಳಿಗೂ ಮನಸ್ತಾಪ ಮಾಡಿಕೊಂಡು ಅನೇಕ ದಂಪತಿ ದೂರವಾಗುತ್ತಿದ್ದಾರೆ. ಮದುವೆ ಅನ್ನೋದನ್ನು ಹೆಚ್ಚಿನ ಮಂದಿ ಒಂದು ಸಂಕೋಲೆಯಾಗಿ ನೋಡುತ್ತಿದ್ದಾರೆ. ಆದರೆ, ದಾಂಪತ್ಯ ಜೀವನ ಎಲ್ಲವನ್ನು ಮೀರಿದ್ದು, ಬದುಕಿನುದ್ದಕ್ಕೂ ಒಬ್ಬರಿಗೊಬ್ಬರು ಆಸರೆಯಾಗಿ ಬದುಕಿದರೆ ಆ ಬದುಕು ಬಂಗಾರವಾಗುತ್ತದೆ.
ಮದುವೆ ಅನ್ನೋದು ಒಂದು ಮಧುರ ಬಂಧ ಆದರೆ, ಅದನ್ನು ನಟಿಯೊಬ್ಬರು ಬಲೆ ಎಂದು ಬಣ್ಣಿಸಿರುವುದು ನಿಜಕ್ಕೂ ಆಘಾತಕಾರಿಯಾಗಿದೆ. ಮಲಯಾಳಂ ಚಿತ್ರರಂಗದ ಖ್ಯಾತ ನಟಿ ರೀಮಾ ಕಲ್ಲಿಂಗಲ್ ಹೇಳಿಕೆ ಪ್ರಕಾರ, ಮದುವೆಯು ನಿಮ್ಮ ಜೀವನಕ್ಕೆ ಹೊಸತನವನ್ನು ತರುವುದಿಲ್ಲ ಬದಲಾಗಿ, ನಿಮ್ಮ ಜೀವನದಲ್ಲಿ ಹೆಚ್ಚಿನ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಇದೆಲ್ಲವೂ ಮದುವೆಯ ನಂತರವೇ ನನಗೆ ಗೊತ್ತಾಗಿದ್ದು ಎಂದಿದ್ದಾರೆ.
ಮದುವೆ ಎಂಬುದು ಒಂದು ಮಧುರ ಬಂಧ ಎಂದು ನೀವು ಭಾವಿಸಬಹುದು ಆದರೆ, ಅದು ಒಂದು ಬಲೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ರೀಮಾ ಹೇಳಿದ್ದಾರೆ.
ಆಶಿಕ್ ಮತ್ತು ನಾನು ಈಗ ಮೊದಲಿಗಿಂತ ಹೆಚ್ಚು ಪ್ರೀತಿಸುತ್ತಿದ್ದೇವೆ. ನಮಗೆ ಮದುವೆಯ ಅಗತ್ಯವೇ ಇರಲಿಲ್ಲ ಎಂಬುದು ಅರ್ಥವಾಗಿದೆ. ಆದರೆ, ಆ ಅರಿವು ಮದುವೆಯಾದ ನಂತರವೇ ನಮಗೆ ಬಂದಿತು. ನನಗೆ ಮದುವೆಯಾಗುವ ಯೋಜನೆಯೂ ಇರಲಿಲ್ಲ. ಆದರೆ, ನಮ್ಮ ಹೆತ್ತವರನ್ನು ಮೆಚ್ಚಿಸುವುದಕ್ಕಾಗಿ ನಾವಿಬ್ಬರು ಒಂದು ದಾಖಲೆಗೆ ಸಹಿ ಹಾಕಿದೆವು. ಆದರೆ, ಅದು ಕೇವಲ ಒಂದು ದಾಖಲೆ ಎಂದು ನಾವು ಭಾವಿಸುತ್ತೇವೆ ಆದರೆ, ವಾಸ್ತವವಾಗಿ ಅದು ಒಂದು ಬಲೆ. ಶತಮಾನಗಳಿಂದ ಸಮಾಜದಲ್ಲಿರುವ ಕೆಲವು ಕಂಡೀಷನಿಂಗ್ ಕೂಡ ಅದರಲ್ಲಿ ಬರುತ್ತದೆ ಎಂದು ರೀಮಾ ಹೇಳಿದರು.
ಈ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಲು ನನಗೆ ಸ್ವಲ್ಪ ಸಮಯ ಹಿಡಿಯಿತು. ಪ್ರೀತಿ ಮತ್ತು ಪ್ರೀತಿಯಲ್ಲಿರುವ ವ್ಯಕ್ತಿಗೂ ಯಾವುದೇ ಸಂಬಂಧವಿಲ್ಲ. ಈ ವ್ಯವಸ್ಥೆಯನ್ನು ಮಹಿಳೆಯರಿಗಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಅನಿಸುವುದಿಲ್ಲ. ಇದು ಪುರುಷರಿಂದ ಪುರುಷರಿಗಾಗಿ ಮಾಡಲ್ಪಟ್ಟ ವ್ಯವಸ್ಥೆ. ಆ ವ್ಯವಸ್ಥೆ ಇನ್ನೂ ನನ್ನ ಪರ ಕೆಲಸ ಮಾಡುವುದಿಲ್ಲ. ಆ ಒಂದು ದಾಖಲೆಗೆ ಸಹಿ ಹಾಕಿದ್ದಕ್ಕಾಗಿ ನನಗೆ ತಪ್ಪಿತಸ್ಥ ಭಾವನೆ ಇನ್ನೂ ಇದೆ ಎಂದು ರೀಮಾ ಮದುವೆ ಬಗ್ಗೆ ಹೇಳಿದ್ದಾರೆ.
ಅಂದಹಾಗೆ, ರೀಮಾ ಮತ್ತು ನಿರ್ದೇಶಕ ಆಶಿಕ್ ಅಬು 2013 ರಲ್ಲಿ ವಿವಾಹವಾದರು. ರಾಷ್ಟ್ರೀಯ ಪ್ರಶಸ್ತಿ ವಿಜೇತ ಸಜಿನ್ ಬಾಬು ನಿರ್ದೇಶನದ 'ಥಿಯೇಟರ್: ದಿ ಮಿಥ್ ಆಫ್ ರಿಯಾಲಿಟಿ' ಹೆಸರಿನ ಹೊಸ ಸಿನಿಮಾದಲ್ಲಿ ರೀಮಾ ನಟಿಸಿದ್ದಾರೆ. ಅಕ್ಟೋಬರ್ 16 ರಂದು ಬಿಡುಗಡೆಯಾಗಲಿರುವ ಸಿನಿಮಾದ ಟ್ರೇಲರ್ ಅನ್ನು ಕೇನ್ಸ್ ಚಲನಚಿತ್ರೋತ್ಸವದಲ್ಲಿ ಬಿಡುಗಡೆ ಮಾಡಲಾಯಿತು. ಈ ಚಿತ್ರವು ಅಕ್ಟೋಬರ್ 8 ಮತ್ತು 9 ರಂದು ರಷ್ಯಾದ ಕಜನ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ. ಕೇರಳದಲ್ಲಿ ಮಹಿಳೆಯರ ಮರೆಯಾಗುತ್ತಿರುವ ಪದ್ಧತಿಗಳು ಮತ್ತು ನಂಬಿಕೆಗಳು, ಪುರಾಣ ಮತ್ತು ವಾಸ್ತವದ ನಡುವಿನ ಗಡಿಗಳು ಮತ್ತು ಅದರ ಮೂಲಕ ಮಾನವ ಜೀವನದ ಮೇಲೆ ಪರಿಣಾಮ ಬೀರುವ ಅನುಭವಗಳನ್ನು ಆಳವಾಗಿ ಚಿತ್ರಿಸುವ ಚಿತ್ರ ಇದಾಗಿದೆ.
ಸಿನಿಮಾ ಶೀಘ್ರವೇ ಬಿಡುಗಡೆಯಾಗಲಿದ್ದು, ಇದರ ಪ್ರಚಾರದಲ್ಲಿರುವ ರೀಮಾ, ಸಂದರ್ಶನದಲ್ಲಿ ಮದುವೆಯ ಬಗ್ಗೆ ಅಚ್ಚರಿಯ ಹೇಳಿಕೆಗಳನ್ನು ನೀಡಿದ್ದಾರೆ. (ಏಜೆನ್ಸೀಸ್)