ಟ್ರಂಪ್​ಗೆ​ ನೊಬೆಲ್​ ಹುಚ್ಚಾ? ನಾನು 7 ಯುದ್ಧ ನಿಲ್ಸಿದ್ದೀನಿ, ನೊಬೆಲ್​​ ಕೊಡ್ಲೇಬೇಕು ಎಂದ ಅಮೆರಿಕ ಅಧ್ಯಕ್ಷ| Donald Trump

Donald Trump
Published on

Donald Trump: ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವನ್ನು ನಿಲ್ಲಿಸಲು ನಾನು ಸಹಾಯ ಮಾಡಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ (ಸೆಪ್ಟೆಂಬರ್​,23) ಪುನರ್​​ ಉಚ್ಚರಿಸಿದ್ದಾರೆ.

ಈ ಬಗ್ಗೆ ಅಧಿಕಾರಕ್ಕೆ ಮರಳಿದ ನಂತರ ಮೊದಲ ಬಾರಿಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ನಾನು ಇಂಡೋ-ಪಾಕ್​ ಸೇರಿ ಏಳು ಜಾಗತಿಕ ಸಂಘರ್ಷಗಳನ್ನು ನಿಲ್ಲಿಸಿದ್ದಾನೆ ಎಂದು ಹೇಳಿದ್ದಾರೆ.

ನಾನು ಏಳು ಅಂತ್ಯವಿಲ್ಲದ ಯುದ್ಧಗಳನ್ನು ಕೊನೆಗೊಳಿಸಿದ್ದೇನೆ. ಇದರಲ್ಲಿ ಕಾಂಬೋಡಿಯಾ ಮತ್ತು ಥೈಲ್ಯಾಂಡ್, ಕೊಸೊವೊ ಮತ್ತು ಸೆರ್ಬಿಯಾ, ಕಾಂಗೋ ಮತ್ತು ರುವಾಂಡಾ, ಪಾಕಿಸ್ತಾನ ಮತ್ತು ಭಾರತ, ಇಸ್ರೇಲ್ ಮತ್ತು ಇರಾನ್, ಈಜಿಪ್ಟ್ ಮತ್ತು ಇಥಿಯೋಪಿಯಾ, ಮತ್ತು ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ಸೇರಿವೆ ಎಂದು ಟ್ರಂಪ್ ತಿಳಿಸಿದ್ದಾರೆ.

ಆದರೆ, ಪಾಕ್​ನೊಂದಿಗಿನ ತನ್ನ ವ್ಯವಹಾರಗಳಲ್ಲಿ ಯಾವುದೇ ಮೂರನೇ ವ್ಯಕ್ತಿಯ ಪಾತ್ರವನ್ನು ಭಾರತ ನಿರಂತರವಾಗಿ ನಿರಾಕರಿಸುತ್ತಿದೆ.ಇಂಡೋ-ಪಾಕ್​ ಕದನ ವಿರಾಮವು ನೇರ ದ್ವಿಪಕ್ಷೀಯ ನಿರ್ಧಾರವಾಗಿದೆ ಎಂದು ಭಾರತ ಸಮರ್ಥಿಸಿಕೊಂಡಿದೆ. ಅಲ್ಲದೆ, ವಿಶ್ವಸಂಸ್ಥೆಯನ್ನು ಮತ್ತಷ್ಟು ಟೀಕಿಸಿದರು ಟ್ರಂಪ್, ಯುಎನ್​​ನಿಂದ ತನಗೆ ಯಾವುದೇ ಸಹಾಯ ಸಿಗಲಿಲ್ಲ ಎಂದು ಟ್ರಂಪ್​ ಕಿಡಿಕಾರಿದ್ದಾರೆ.

ಮುಂದುವರೆದು ಮಾತನಾಡಿದ ಟ್ರಂಪ್, ವಿಶ್ವಸಂಸ್ಥೆಯು ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಜೀವಿಸುತ್ತಿಲ್ಲ. ಟ್ರಂಪ್ ಅಧಿಕಾರಕ್ಕೆ ಮರಳಿದ ನಂತರ ವಿಶ್ವ ಸಂಸ್ಥೆಯಲ್ಲಿ ಮೊದಲ ಭಾಷಣ ಮಾಡಿದ್ದಾರೆ.

ನೊಬೆಲ್ ಪ್ರಶಸ್ತಿ ಪಡೆಯಲೇಬೇಕು: ಟ್ರಂಪ್

ವಿಶ್ವಸಂಸ್ಥೆಯಲ್ಲಿ ಮಾತನಾಡಿದ ಟ್ರಂಪ್, ನಾವು ಶಾಂತಿ ಒಪ್ಪಂದಗಳನ್ನು ರೂಪಿಸುತ್ತಿದ್ದೇವೆ ಮತ್ತು ಯುದ್ಧಗಳನ್ನು ಕೊನೆಗೊಳಿಸುತ್ತಿದ್ದೇವೆ. ಭಾರತ ಮತ್ತು ಪಾಕಿಸ್ತಾನ, ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವಿನ ಯುದ್ಧಗಳನ್ನು ನಾವು ನಿಲ್ಲಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ಮುಂದುವರೆದು ಮಾತನಾಡಿದ ಟ್ರಂಪ್​​, ಭಾರತ ಮತ್ತು ಪಾಕಿಸ್ತಾನದ ಬಗ್ಗೆ ಯೋಚಿಸಿ. ನಾನು ಅದನ್ನು ಹೇಗೆ ನಿಲ್ಲಿಸಿದೆ? ಉಭಯ ದೇಶಗಳು ವ್ಯಾಪಾರ ಮಾಡಲು ಬಯಸಿದ್ದರು. ನನಗೆ ಇಬ್ಬರೂ ನಾಯಕರ ಬಗ್ಗೆ ಅಪಾರ ಗೌರವವಿದೆ. ಆದರೆ, ನಾವು ನಿಲ್ಲಿಸಿರುವ ಯುದ್ಧಗಳನ್ನು ನೀವು ನೋಡಿದಾಗ - ಭಾರತ ಮತ್ತು ಪಾಕಿಸ್ತಾನ, ಥೈಲ್ಯಾಂಡ್ ಮತ್ತು ಕಾಂಬೋಡಿಯಾ, ಅರ್ಮೇನಿಯಾ ಮತ್ತು ಅಜೆರ್ಬೈಜಾನ್, ಕೊಸೊವೊ ಮತ್ತು ಸೆರ್ಬಿಯಾ, ಇಸ್ರೇಲ್ ಮತ್ತು ಇರಾನ್, ಈಜಿಪ್ಟ್ ಮತ್ತು ಇಥಿಯೋಪಿಯಾ, ರುವಾಂಡಾ ಮತ್ತು ಕಾಂಗೋ - ಇದು ಗಮನಾರ್ಹವಾಗಿದೆ. ಮತ್ತು ಅವುಗಳಲ್ಲಿ 60 ಪ್ರತಿಶತವನ್ನು ವ್ಯಾಪಾರದ ಕಾರಣದಿಂದಾಗಿ ಪರಿಹರಿಸಲಾಗಿದೆ.

ವ್ಯಾಪಾರವನ್ನು ತಡೆಹಿಡಿಯುವುದಾಗಿ ಬೆದರಿಕೆ ಹಾಕುವ ಮೂಲಕ, ಪರಮಾಣು ಶಸ್ತ್ರಸಜ್ಜಿತ ಭಾರತ ಮತ್ತು ಪಾಕಿಸ್ತಾನಗಳು ಉದ್ವಿಗ್ನತೆಯನ್ನು ಕಡಿಮೆ ಮಾಡಲು ಪ್ರಭಾವ ಬೀರಿವೆ. ಭಾರತದೊಂದಿಗೆ, ನೀವು ಹೋರಾಡುವುದನ್ನು ಮುಂದುವರಿಸಿದರೆ ನಾವು ಯಾವುದೇ ವ್ಯಾಪಾರವನ್ನು ಮಾಡುವುದಿಲ್ಲ' ಎಂದು ನಾನು ಹೇಳಿದೆ ಎಂದು ಟ್ರಂಪ್​ ತಿಳಿಸಿದ್ದಾರೆ.

ಟ್ರಂಪ್ ತಮ್ಮ ಭವಿಷ್ಯದ ಮಹತ್ವಾಕಾಂಕ್ಷೆಗಳಿಗಾಗಿ ಮಾತ್ರವಲ್ಲದೆ ಹಿಂದಿನ ಪ್ರಯತ್ನಗಳಿಗಾಗಿಯೂ ಬಹು ನೊಬೆಲ್ ಶಾಂತಿ ಪ್ರಶಸ್ತಿಗಳಿಗೆ ಅರ್ಹರು ಎಂದು ಹೇಳಿದ್ದಾರೆ. ನನಗೆ, ರಷ್ಯಾ-ಉಕ್ರೇನ್ ಯುದ್ಧವನ್ನು ನೀವು ನಿಲ್ಲಿಸಲು ಸಾಧ್ಯವಾದರೆ, ನಿಮಗೆ ನೊಬೆಲ್ ಪ್ರಶಸ್ತಿ ಸಿಗಬೇಕು ಎಂದು ಹೇಳಿದರು. ನಾನು ಉತ್ತರಿಸಿದೆ, ನಾನು ಈಗಾಗಲೇ ನಿಲ್ಲಿಸಿರುವ ಇತರ ಏಳು ಯುದ್ಧಗಳ ಬಗ್ಗೆ ಏನು? ಅವುಗಳಲ್ಲಿ ಪ್ರತಿಯೊಂದಕ್ಕೂ ನನಗೆ ನೊಬೆಲ್ ಸಿಗಬೇಕು ಎಂದು ಹೇಳಿದ್ದಾರೆ.

ಟ್ರಂಪ್​ ಕದನ ವಿರಾಮ ಹೇಳಿಕೆಯನ್ನು ನಿರಾಕರಿಸಿದ ಭಾರತ

ಮೇ 10 ರಿಂದ, ಅಮೆರಿಕ ಅಧ್ಯಕ್ಷರು ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸುವಲ್ಲಿ ತಮ್ಮ ಪಾತ್ರವಿದೆ ಎಂದು ಪದೇ ಪದೇ ಪ್ರತಿಪಾದಿಸುತ್ತಿದ್ದಾರೆ. ಆದರೆ, ಭಾರತ ಮೂರನೇ ವ್ಯಕ್ತಿಯ ಒಳಗೊಳ್ಳುವಿಕೆಯ ಯಾವುದೇ ಸಲಹೆಯನ್ನು ಭಾರತ ದೃಢವಾಗಿ ತಿರಸ್ಕರಿಸಿದೆ ಎಂದು ಹೇಳಿದೆ. ಪಾಕ್​​​ ಮಿಲಿಟರಿ DGMO ತಮ್ಮ ಭಾರತೀಯ DGMO ಕರೆ ಮಾಡಿದ ನಂತರ, ಎರಡೂ ದೇಶಗಳ ನಡುವೆ ನೇರವಾಗಿ ಕದನ ವಿರಾಮ ಒಪ್ಪಂದವನ್ನು ತಲುಪಲಾಗಿದೆ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಸ್ಪಷ್ಟಪಡಿಸಿದರು. ಈ ಸಮಯದಲ್ಲಿ ಎರಡೂ ಕಡೆಯವರು ಎಲ್ಲಾ ಮಿಲಿಟರಿ ಚಟುವಟಿಕೆಗಳನ್ನು ನಿಲ್ಲಿಸಲು ಒಪ್ಪಿಕೊಂಡರು.

ಈ ಬಗ್ಗೆ ಸಂಸತ್ತಿನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಯಾವುದೇ ವಿದೇಶಿ ನಾಯಕರು ಆಪರೇಷನ್ ಸಿಂಧೂರವನ್ನು​ ನಿಲ್ಲಿಸುವಂತೆ ಭಾರತವನ್ನು ಪ್ರಭಾವಿಸಿಲ್ಲ ಎಂದು ದೃಢಪಡಿಸಿದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net