

Iron Age: 5,300 ವರ್ಷಗಳ ಹಿಂದೆಯೇ ಚೆನ್ನೈನಲ್ಲಿ ಕಬ್ಬಿಣದ ಯುಗ ಆರಂಭವಾಗಿತ್ತು ಎಂಬುದಕ್ಕೆ ಈಗ ಸಿಕ್ಕಿರುವ ಕೆಲವೊಂದು ವಸ್ತುಗಳೇ ಜ್ವಲಂತ ಸಾಕ್ಷಿಯಾಗಿವೆ. ಕಬ್ಬಿಣದ ಯುಗ ಜನಿಸಿದ್ದೇ ತಮಿಳುನಾಡಿನಿಂದ ಎಂಬ ವರದಿಗಳನ್ನು ಸಿಎಂ ಎಂ.ಕೆ. ಸ್ಟಾಲಿನ್ ಉಲ್ಲೇಖಿಸಿ, ಮಾತನಾಡಿದ್ದಾರೆ.
ಇಂದಿನ ತಮಿಳುನಾಡಿನಲ್ಲಿ ಕಬ್ಬಿಣಯುಗ ಶತಮಾನಗಳಷ್ಟು ಹಿಂದೆಯೇ ನೆಲೆಯೂರಿತ್ತು. ಇದು ಅಂದಾಜಿಸಿದ್ದಕ್ಕಿಂತ ಸಾವಿರಾರು ವರ್ಷಗಳ ಮೊದಲೇ ಆಗಿರಬಹುದು ಎಂದು ಟುಟಿಕೋರಿನ್ ಜಿಲ್ಲೆಯ ಶಿವಗಲೈನಲ್ಲಿರುವ ಮಣ್ಣಿನಲ್ಲಿ ಹೂತು ಹೋಗಿದ್ದ ವಸ್ತುಗಳಿಂದ ಪಡೆದ ಮಾದರಿಗಳು ಸಾಬೀತುಪಡಿಸಿದೆ. ಈ ಸ್ಥಳದಲ್ಲಿ ಕಬ್ಬಿಣದ ವಸ್ತುಗಳ ಜತೆಗೆ ದೊರೆತ ಎರಡು ಇದ್ದಿಲು ಮಾದರಿಗಳು ಕ್ರಿ.ಪೂ. 3,345 ಮತ್ತು 3,259ರದ್ದಾಗಿದೆ. ಇದು ಇಲ್ಲಿನ ಕಬ್ಬಿಣ ಯುಗ ವಿಶ್ವದಲ್ಲೇ ಅತ್ಯಂತ ಹಳೆಯದಾಗಿದೆ ಎಂಬುದನ್ನು ಒತ್ತಿ ಹೇಳಿದೆ.
ಇದಕ್ಕೂ ಮೊದಲು, ಹಿಟ್ಟೈಟ್ ಸಾಮ್ರಾಜ್ಯದ ಜನರು (ಇಂದಿನ ಟರ್ಕಿಯೆಯಲ್ಲಿ) ಕ್ರಿ.ಪೂ. 1,380ರಲ್ಲಿ ಕಬ್ಬಿಣವನ್ನು ಮೊದಲು ಬಳಸಿದರು ಎಂದು ನಂಬಲಾಗಿತ್ತು. ಆದರೆ, ತಮಿಳುನಾಡಿನಲ್ಲಿ ಸಿಕ್ಕಿರುವ ಪ್ರಾಚೀನ ವಸ್ತುಗಳ ಮಾದರಿಯನ್ನು ಪರಿಶೀಲಿಸಿ ನೋಡಿದಾಗ ಈ ನಂಬಿಕೆ ಈಗ ಬದಲಾಗಿದೆ. ಇನ್ನು ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ಸಿಎಂ ಸ್ಟಾಲಿನ್, "5,300 ವರ್ಷಗಳ ಹಿಂದೆಯೇ ತಮಿಳು ಭೂದೃಶ್ಯದಲ್ಲಿ ಕಬ್ಬಿಣವನ್ನು ಪರಿಚಯಿಸಲಾಯಿತು ಎಂದು ನಾವು ವೈಜ್ಞಾನಿಕವಾಗಿ ಸ್ಥಾಪಿಸಿದ್ದೇವೆ. ಕಬ್ಬಿಣಯುಗವು ತಮಿಳು ಭೂಮಿಯಿಂದ ಪ್ರಾರಂಭವಾಯಿತು" ಎಂದು ಹೇಳಿದರು.
ಶಿವಗಲೈನ ಮಾದರಿಗಳನ್ನು ಮೂರು ಪ್ರಮುಖ ಸಂಶೋಧನಾ ಪ್ರಯೋಗಾಲಯಗಳು ವಿಶ್ಲೇಷಿಸಿವೆ. ಅಮೆರಿಕಾದಲ್ಲಿರುವ ಬೀಟಾ ಅನಾಲಿಟಿಕ್ಸ್, ಅಹಮದಾಬಾದ್‌ನಲ್ಲಿರುವ ಭೌತಿಕ ಸಂಶೋಧನಾ ಪ್ರಯೋಗಾಲಯ ಮತ್ತು ಲಕ್ನೋದಲ್ಲಿರುವ ಬೀರ್ಬಲ್ ಸಾಹ್ನಿ ಇನ್‌ಸ್ಟಿಟ್ಯೂಟ್ ಆಫ್ ಪ್ಯಾಲಿಯೋಸೈನ್ಸ್ ಸಂಸ್ಥೆಗಳು ಕಬ್ಬಿಣ ಯುಗದ ಬಗ್ಗೆ ದೃಢಪಡಿಸಿವೆ. ಇದನ್ನು ಉಲ್ಲೇಖಿಸಿ ಮಾತನಾಡಿದ ಸಿಎಂ, "ಇವೆಲ್ಲ ವಸ್ತುಗಳ ದಿನಾಂಕ ಶತಮಾನಗಳಷ್ಟು ಹಳೆಯದ್ದಾಗಿದೆ. ಕಬ್ಬಿಣದ ವಸ್ತುಗಳ ಹೆಚ್ಚಿನ ಲೋಹಶಾಸ್ತ್ರೀಯ ವಿಶ್ಲೇಷಣೆ ಮತ್ತು ಕಬ್ಬಿಣದ ಅದಿರು ಹೊಂದಿರುವ ವಲಯಗಳಲ್ಲಿ ಭವಿಷ್ಯದ ಉತ್ಖನನಗಳು ಈ ಸಂಶೋಧನೆಗಳನ್ನು ಮತ್ತಷ್ಟು ಬಲಪಡಿಸಬಹುದು" ಎಂದು ತಿಳಿಸಿದರು.
“ಇತ್ತೀಚಿನ ರೇಡಿಯೊಕಾರ್ಬನ್ ದಿನಾಂಕಗಳು ಸಿಂಧೂ ಕಣಿವೆ ತಾಮ್ರ ಯುಗವನ್ನು ನೋಡಿದಾಗ, ದಕ್ಷಿಣ ಭಾರತವು ಕಬ್ಬಿಣದ ಯುಗದಲ್ಲಿತ್ತು ಎಂದು ಸೂಚಿಸಿದೆ. ಈ ಅರ್ಥದಲ್ಲಿ ನೋಡುವುದಾದರೆ, ದಕ್ಷಿಣ ಭಾರತದ ಕಬ್ಬಿಣದ ಯುಗ ಮತ್ತು ಸಿಂಧೂನ ತಾಮ್ರ ಯುಗವು ಸಮಕಾಲೀನದ್ದು" ಎಂದು ವರದಿಯ ಸಹ-ಲೇಖಕ ಪುರಾತತ್ವಶಾಸ್ತ್ರಜ್ಞ ರಾಜನ್ ಹೇಳಿದ್ದಾರೆ. ಇನ್ನೂ ತಮಿಳುನಾಡಿನ ಆರ್ಕಿಯಲಾಜಿ ಇಲಾಖೆ ಪ್ರಕಟಿಸಿದ ವರದಿ ಪ್ರಕಾರ, ಸಿಂಧೂ ನಾಗರಿಕತೆ ಮತ್ತು ದಕ್ಷಿಣ ಭಾರತದಲ್ಲಿ ಶುರುವಾದ ಕಬ್ಬಿಣ ಯುಗ ಎರಡೂ ಕೂಡ ಏಕಕಾಲದಲ್ಲಿ ಅಸ್ತಿತ್ವದಲ್ಲಿತ್ತು ಎಂದು ಒತ್ತಿ ಹೇಳಿದೆ,(ಏಜೆನ್ಸೀಸ್).