

Ayatollah Ali Khamenei : ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾದರೆ ಅವರ ಸ್ಥಾನಕ್ಕೆ ಮೂವರು ಹಿರಿಯ ಧರ್ಮಗುರುಗಳನ್ನು ಅಭ್ಯರ್ಥಿಗಳಾಗಿ ಹೆಸರಿಸಿದ್ದಾರೆ ಎಂದು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಇಸ್ರೇಲ್ ಬೆನ್ನಲ್ಲೇ ಅಮೆರಿಕ ಕೂಡ ಇರಾನ್ ಮೇಲೆ ದಾಳಿ ಮಾಡಿದ್ದು, ಸದ್ಯ ಆಳವಾದ ಬಂಕರ್‌ನಲ್ಲಿ ರಕ್ಷಣೆ ಪಡೆದಿರುವ ಖಮೇನಿ, ತನ್ನನ್ನು ಹುಡುಕಲು ಕಷ್ಟವಾಗುವಂತೆ ತನ್ನ ಸುತ್ತಲಿನ ಎಲ್ಲ ಎಲೆಕ್ಟ್ರಾನಿಕ್ ಸಂವಹನಗಳನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ವಿಚಾರವನ್ನು ಇರಾನಿನ ಅಧಿಕಾರಿಗಳ ತಿಳಿಸಿದ್ದಾರೆಂದು ಉಲ್ಲೇಖಿಸಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
ಅಯತೊಲ್ಲಾ ಖಮೇನಿ ಅವರ ಮಗ, ಧರ್ಮಗುರು ಮತ್ತು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ಗೆ ಆಪ್ತರೂ ಆಗಿರುವ ಮೊಜ್ತಬಾ, ಉತ್ತಾರಾಧಿಕಾರಿ ಸ್ಫರ್ಧೆಯಲ್ಲಿ ಮುಂಚೂಣಿಯಲ್ಲಿದ್ದಾರೆ ಎಂಬ ವದಂತಿಗಳಿವೆ. ಆದರೆ, ಅವರು ಅಭ್ಯರ್ಥಿಗಳ ಪಟ್ಟಿಯಲ್ಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇರಾನ್‌ನ ಮಾಜಿ ಸಂಪ್ರದಾಯವಾದಿ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು 2024 ರಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪುವ ಮೊದಲು ಮುಂಚೂಣಿಯಲ್ಲಿ ಸ್ಪರ್ಧಿಸುವ ಅಭ್ಯರ್ಥಿ ಎಂದು ಪರಿಗಣಿಸಲಾಗಿತ್ತು.
ಇರಾನ್‌ನ ಸಂವಿಧಾನದ ಅಡಿಯಲ್ಲಿ, ಸರ್ವೋಚ್ಚ ನಾಯಕನ ಮರಣದ ಬಳಿಕ 88 ಸದಸ್ಯರ ಕ್ಲೆರಿಕಲ್ ಸಂಸ್ಥೆಯಾದ ತಜ್ಞರ ಸಭೆಯ ನೇತೃತ್ವದಲ್ಲಿ ಹೊಸ ನಾಯಕನ ಆಯ್ಕೆ ಪ್ರಕ್ರಿಯೆ ಶುರುವಾಗುತ್ತದೆ. ಈಗಾಗಲೇ ಹಿರಿಯ ಶಿಯಾ ಇಸ್ಲಾಮಿಕ್ ವಿದ್ವಾಂಸರಿಂದ ತಜ್ಞರ ಸಭೆಗೆ ಆಯ್ಕೆಯ ಹೊಣೆಯನ್ನು ಖಮೇನಿ ಒಪ್ಪಿಸಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಖಮೇನಿ ಆಪ್ತ ವಲಯದ ಅತ್ಯಂತ ನಂಬಿಕಸ್ಥ ವ್ಯಕ್ತಿ ಎನಿಸಿಕೊಂಡಿರುವ ಮೊಹಮ್ಮದ್ ಗೊಲ್ಲಪಾಯೇಗನಿ, ಖಮೇನಿ ಅವರ ರಾಜಕೀಯ ವ್ಯವಹಾರಗಳ ಮೇಲ್ವಿಚಾರಕ ಅಲಿ ಅಸ್ರರ್ ಹೆಜಾಜಿ, ಖಮೇನಿ ಅವರ ಆಪ್ತ, ಶಿಯಾ ಧರ್ಮೋಪದೇಶಕ ಹಾಗೂ ಬರಹಗಾರ ಅಲಿರೆಜಾ ಅರಾಫಿ ಈ ಪಟ್ಟಿಯಲ್ಲಿದ್ದಾರೆಂದು ತಿಳಿದುಬಂದಿದೆ.
ಶುಕ್ರವಾರ ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್, ಇರಾನ್‌ನ ಸರ್ವೋಚ್ಚ ನಾಯಕ ಇನ್ನು ಮುಂದೆ ಅಸ್ತಿತ್ವದಲ್ಲಿರಲು ಬಿಡುವುದಿಲ್ಲ ಎಂದು ಘೋಷಿಸಿದರು. ಇರಾನಿನ ಕ್ಷಿಪಣಿ ಟೆಲ್ ಅವೀವ್ ಬಳಿಯ ಪಟ್ಟಣದ ಆಸ್ಪತ್ರೆಗೆ ಅಪ್ಪಳಿಸಿದ ಬೆನ್ನಲ್ಲೇ ಕಾಟ್ಜ್ ಈ ಹೇಳಿಕೆ ನೀಡಿದರು. ಆಸ್ಪತ್ರೆ ಮೇಲಿನ ದಾಳಿಗೆ ಖಮೇನಿ ಅವರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು.
ಹೇಡಿತನದ ಇರಾನಿನ ಸರ್ವಾಧಿಕಾರಿ, ಕೋಟೆಯ ಬಂಕರ್‌ನ ಆಳದಲ್ಲಿ ಕುಳಿತು ಇಸ್ರೇಲ್‌ನ ಆಸ್ಪತ್ರೆಗಳು ಮತ್ತು ವಸತಿ ಕಟ್ಟಡಗಳ ಮೇಲೆ ಕ್ಷಿಪಣಿಗಳನ್ನು ಹಾರಿಸುತ್ತಿದ್ದಾರೆ. ಇವು ಅತ್ಯಂತ ಗಂಭೀರ ರೀತಿಯ ಯುದ್ಧ ಅಪರಾಧಗಳಾಗಿವೆ. ಖಮೇನಿಯನ್ನು ಈ ಅಪರಾಧಗಳಿಗೆ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಕಾಟ್ಜ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ, ಇಸ್ರೇಲ್ ರಕ್ಷಣಾ ಪಡೆಗಳು (IDF) ಇರಾನಿನ ನಾಯಕನನ್ನು ನಿರ್ಮೂಲನೆ ಮಾಡಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತವೆ ಎಂದು ಹೇಳಿದ್ದಾರೆ.
ಇಸ್ರೇಲ್‌ಗೆ ಇರುವ ಬೆದರಿಕೆಗಳನ್ನು ತೆಗೆದುಹಾಕಲು ಮತ್ತು ಅಯತೊಲ್ಲಾ ಆಡಳಿತವನ್ನು ದುರ್ಬಲಗೊಳಿಸಲು ಇರಾನ್‌ನಲ್ಲಿನ ಕಾರ್ಯತಂತ್ರದ ಗುರಿಗಳ ವಿರುದ್ಧ ಮತ್ತು ಟೆಹ್ರಾನ್‌ನಲ್ಲಿನ ಸರ್ಕಾರಿ ಸೌಲಭ್ಯಗಳ ವಿರುದ್ಧ ದಾಳಿಯ ತೀವ್ರತೆಯನ್ನು ಹೆಚ್ಚಿಸಲು ಪ್ರಧಾನ ಮಂತ್ರಿ ಮತ್ತು ನಾನು ಐಡಿಎಫ್‌ಗೆ ಸೂಚನೆ ನೀಡಿದ್ದೇವೆ ಎಂದು ಇಸ್ರೇಲ್ ರಕ್ಷಣಾ ಸಚಿವರು ಹೇಳಿದ್ದಾರೆ.
ಇರಾನ್‌ನ ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್ ಪರಮಾಣು ತಾಣಗಳ ಮೇಲೆ ಅಮೆರಿಕದ ಪಡೆಗಳು ಸಂಘಟಿತ ವೈಮಾನಿಕ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಈ ಮೂಲಕ ಇರಾನ್ ವಿರುದ್ಧ ಯುದ್ಧ ಸಾರಿರುವ ಇಸ್ರೇಲ್‌ಗೆ ಜತೆ ಅಧಿಕೃತವಾಗಿ ಅಮೆರಿಕ ಕೈ ಜೋಡಿಸಿದೆ. ಇಸ್ರೇಲ್ ಮತ್ತು ಇರಾನ್ ನಡುವೆ ಕಳೆದ ಒಂದು ವಾರದ ಹಿಂದೆ ಶುರುವಾದ ಯುದ್ಧದಲ್ಲಿ ಇಸ್ರೇಲ್ ಬೆಂಬಲವಾಗಿ ಇರಾನ್ ಮೇಲೆ ಅಮೆರಿಕ ನಡೆಸಿದ ಮೊದಲ ನೇರ ಮಿಲಿಟರಿ ಕಾರ್ಯಾಚರಣೆ ಇದಾಗಿದೆ. ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆಗಳು ಮತ್ತು ಕ್ಷಿಪಣಿ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿಗಳನ್ನು ನಡೆಸುತ್ತಲೇ ಇದೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ದಾಳಿ ನಡೆಸುತ್ತಿದೆ. ಇದೀಗ ಅಮೆರಿಕ ಕೂಡ ಇಸ್ರೇಲ್ ಜತೆ ಕೈಜೋಡಿಸಿದ್ದು, ಇರಾನ್‌ನ ಪರಮಾಣು ಸಾಮರ್ಥ್ಯಗಳನ್ನು ದುರ್ಬಲಗೊಳಿಸುವ ಗುರಿಯೊಂದಿಗೆ ದಾಳಿಗಳನ್ನು ನಡೆಸುತ್ತಿವೆ.
ಪ್ರಾಥಮಿಕ ವರದಿಗಳ ಪ್ರಕಾರ, ಅಮೆರಿಕ, ಇರಾನ್ ಮೇಲೆ ದಾಳಿ ನಡೆಸಲು ಎರಡು ಬಿ2 ಬಾಂಬರ್ ವಿಮಾನಗಳನ್ನು ಬಳಸಿದೆ. ಅಮೆರಿಕ ಈ ಮದ್ದುಗುಂಡುಗಳನ್ನು ಬಳಸುತ್ತಿರುವುದು ಇದೇ ಮೊದಲು. ಕಾರ್ಯಾಚರಣೆಯ ಹಿಂದಿನ ರಾತ್ರಿ ಫೋನ್ ಕರೆಯ ಸಮಯದಲ್ಲಿ ಅಧ್ಯಕ್ಷ ಟ್ರಂಪ್ ಅವರು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೇತುನ್ಯಾಹು ಅವರಿಗೆ ಯೋಜಿತ ದಾಳಿಗಳ ಬಗ್ಗೆ ವೈಯಕ್ತಿಕವಾಗಿ ಮಾಹಿತಿ ನೀಡಿದರು ಎಂದು ಅಮೆರಿಕದ ಮಾಧ್ಯಮ ವರದಿಗಳು ತಿಳಿಸಿವೆ.
30,000 ಪೌಂಡ್ ತೂಕದ “ಬಂಕರ್ ಬಸ್ಟರ್” ಬಾಂಬ್ ಹೊಂದಿದ ಅಮೆರಿಕನ್ ಸ್ಟೆಲ್ತ್ ಬಾಂಬರ್‌ಗಳು ಮಾತ್ರ ಇರಾನ್‌ನ ಫೋರ್ಡೋವ್‌ನಂತಹ ಆಳವಾಗಿ ಹೂತುಹೋಗಿರುವ ಪರಮಾಣು ಸೌಲಭ್ಯಗಳನ್ನು ತಲುಪುವ ಸಾಮರ್ಥ್ಯ ಹೊಂದಿವೆ ಎಂದು ಅಮೆರಿಕ ಮತ್ತು ಇಸ್ರೇಲಿ ಅಧಿಕಾರಿಗಳು ಬಹಳ ಹಿಂದಿನಿಂದಲೂ ವಾದಿಸುತ್ತಿದ್ದಾರೆ. ತನ್ನ ಪರಮಾಣು ನೆಲೆಗಳ ಮೇಲಿನ ದಾಳಿಗಳು ಪ್ರತೀಕಾರಕ್ಕೆ ಕಾರಣವಾಗುತ್ತವೆ ಎಂದು ಇರಾನ್ ಪದೇ ಪದೇ ಎಚ್ಚರಿಸುತ್ತಲೇ ಇದೆ. ಇರಾನ್ ಮೇಲಿನ ದಾಳಿಯಲ್ಲಿ ಅಮೆರಿಕದ ಯಾವುದೇ ಪಾಲ್ಗೊಳ್ಳುವಿಕೆ “ತುಂಬಾ ತುಂಬಾ ಅಪಾಯಕಾರಿ” ಎಂದು ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಈ ಹಿಂದೆಯೇ ಹೇಳಿದ್ದರು. ಇದೀಗ ಅಮೆರಿಕ ಯುದ್ಧಕ್ಕೆ ಎಂಟ್ರಿಯಾಗಿದ್ದು, ಇದು ಯಾವ ಸ್ವರೂಪ ಪಡೆಯುತ್ತದೆ ಎಂದು ಕಾದು ನೋಡಬೇಕಿದೆ. (ಏಜೆನ್ಸೀಸ್)